ನವದೆಹಲಿ: 1999ರ ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಮಹಾ ವೀರ ಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದ ಮಾಜಿ ಸೇನಾಧಿಕಾರಿ ಕರ್ನಲ್ ಸೋನಂ ವಾಂಗ್ಚುಕ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.
ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅವರು ಲಡಾಖ್ ನ ಹೆಮ್ಮೆಯ ಪುತ್ರರಾಗಿದ್ದು, ಆಪರೇಷನ್ ವಿಜಯ್ ಸಂದರ್ಭದಲ್ಲಿ ಅವರು ತೋರಿದ ಸಾಹಸ ಅತಿ ಎತ್ತರದ ಪ್ರದೇಶದಲ್ಲಿ ಕಾರ್ಯಾಚರಣೆ ನಡಸುತ್ತಿದ್ದ ಸೇನಾ ಸಿಬ್ಬಂದಿಗಳಿಗೆ ಸ್ಫೂರ್ತಿ ನೀಡಿತ್ತು ಎಂದು ಶ್ಲಾಘಿಸಿದ್ದಾರೆ.
ಸೋನಂ ವಾಂಗ್ಚುಕ್ ಅವರ ನಿಧನಕ್ಕೆ ಭಾರತೀಯ ಸೇನೆ ಸಂತಾಪ ವ್ಯಕ್ತಪಡಿಸಿದ್ದು, ಈ ದುಃಖದ ಸಮಯದಲ್ಲಿ ನಾವು ಮೃತ ಕುಟುಂಬದ ಜೊತೆಗಿದ್ದೇವೆ ಎಂದು ಹೇಳಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಸೋನಂ ವಾಂಗ್ಚುಕ್ ಸೇನೆಯ ಅತ್ಯಂತ ಹೆಚ್ಚು ಬಿರುದಾಂಕಿತ ಅಧಿಕಾರಿಯಾಗಿದ್ದು, ಅವರು ತಮ್ಮ ಶೌರ್ಯ, ಅಪ್ರತಿಮ ನಾಯಕತ್ವ ಹಾಗೂ ಕರ್ತವ್ಯದಲ್ಲಿನ ರಾಜಿರಹಿತ ಬದ್ಧತೆಗೆ ಹೆಸರಾಗಿದ್ದರು" ಎಂದು ಪ್ರಶಂಸಿಸಿದ್ದಾರೆ.
ಸೋನಂ ವಾಂಗ್ಚುಕ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಭಾರತೀಯ ಸೇನೆ, "ಅವರು ಧೀರ ಯೋಧ, ಬದ್ಧತೆಯುಳ್ಳ ನಾಯಕ ಹಾಗೂ ಲಡಾಖ್‌ನ ಪುತ್ರರಾಗಿದ್ದರು. ಅವರ ಜೀವನವು ಧೈರ್ಯ, ಸೇವೆ ಮತ್ತು ಐಕ್ಯತೆಯಿಂದ ಕೂಡಿತ್ತು" ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

