ವಾಷಿಂಗ್ಟನ್: ಹಾರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಫೋಟಕಗಳನ್ನು ಇಡುವ ಶಂಕಿತ ದೋಣಿಗಳ ವಿರುದ್ಧ ಮಾರಕ ಬಲ ಬಳಸಲು ಅಮೆರಿಕ ನೌಕಾಪಡೆಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಟ್ರೂತ್ ಸೋಷಿಯಲ್ ನಲ್ಲಿ ಪ್ರಕಟಿಸಿದ ತಮ್ಮ ಪೋಸ್ಟ್‌ನಲ್ಲಿ, "ಹಾರ್ಮುಝ್ ಜಲಸಂಧಿಯ ನೀರಿನಲ್ಲಿ ಸ್ಫೋಟಕಗಳನ್ನು ಇಡುವ ಯಾವುದೇ ದೋಣಿ, ಅದು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ಗುಂಡಿಕ್ಕಿ ಕೊಲ್ಲಲು ನಾನು ಯುನೈಟೆಡ್ ಸ್ಟೇಟ್ಸ್ ನೌಕಾಪಡೆಗೆ ಆದೇಶಿಸಿದ್ದೇನೆ.
ಈ ಬಗ್ಗೆ ಯಾವುದೇ ಹಿಂಜರಿಕೆ ಬೇಡ," ಎಂದು ಟ್ರಂಪ್ ಹೇಳಿದ್ದಾರೆ. "ಈಗಾಗಲೇ ಇಂತಹ ದೋಣಿಗಳಲ್ಲಿ ಅನೇಕವುಗಳನ್ನು ಸಮುದ್ರದಲ್ಲಿ ಮುಳುಗಿಸಲಾಗಿದೆ," ಎಂದೂ ಅವರು ಹೇಳಿದ್ದಾರೆ.
ಹಾರ್ಮುಝ್ ಜಲಸಂಧಿಯಲ್ಲಿ ನಡೆಯುತ್ತಿರುವ ಸ್ಪೋಟಕ ತೆರವು ಕಾರ್ಯಾಚರಣೆಗಳನ್ನು ತೀವ್ರಗೊಳಿಸಲು ಸೂಚಿಸಿದರು. "ನಮ್ಮ ಸ್ಪೋಟಕ ತೆರವು ಪಡೆಗಳು ಈಗಾಗಲೇ ಜಲಸಂಧಿಯನ್ನು ಸ್ವಚ್ಛಗೊಳಿಸುತ್ತಿವೆ. ಆ ಕಾರ್ಯಾಚರಣೆಯನ್ನು ಮೂರು ಪಟ್ಟು ಹೆಚ್ಚಿಸಲು ನಾನು ಆದೇಶಿಸಿದ್ದೇನೆ," ಎಂದು ಟ್ರಂಪ್ ತಿಳಿಸಿದ್ದಾರೆ.
ಹಾರ್ಮುಝ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಟ್ರಂಪ್ ಹೇಳಿದ್ದಾರೆ. "ಯುನೈಟೆಡ್ ಸ್ಟೇಟ್ಸ್ ನೌಕಾಪಡೆಯ ಅನುಮೋದನೆಯಿಲ್ಲದೆ ಯಾವುದೇ ಹಡಗು ಪ್ರವೇಶಿಸಲು ಅಥವಾ ಹೊರಹೋಗಲು ಸಾಧ್ಯವಿಲ್ಲ. ಇರಾನ್ ಒಪ್ಪಂದಕ್ಕೆ ಬರುವವರೆಗೆ ಜಲಮಾರ್ಗವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ," ಎಂದು ಅವರು ಉಲ್ಲೇಖಿಸಿದ್ದಾರೆ.
ಇದೇ ವೇಳೆ, ಇರಾನ್ ನ ಆಂತರಿಕ ರಾಜಕೀಯ ಪರಿಸ್ಥಿತಿಯ ಮೇಲೂ ಅವರು ಪ್ರತಿಕ್ರಿಯಿಸಿದ್ದಾರೆ. "ಇರಾನ್‌ನಲ್ಲಿ ಯಾರು ನಾಯಕ ಎಂಬುದು ಸ್ಪಷ್ಟವಾಗಿಲ್ಲ. 'ಕಠಿಣವಾದಿಗಳು' ಮತ್ತು 'ಮಧ್ಯಮವಾದಿಗಳು' ನಡುವಿನ ಸಂಘರ್ಷ ಗಂಭೀರವಾಗಿದೆ," ಎಂದು ಟ್ರಂಪ್ ಹೇಳಿದ್ದಾರೆ.
'M/T ಮೆಜೆಸ್ಟಿಕ್ X' ಎಂಬ ಟ್ಯಾಂಕರ್ ಹಡಗನ್ನು ಅಮೆರಿಕ ಪಡೆಗಳು ರಾತ್ರಿ ವೇಳೆ ವಶಪಡಿಸಿಕೊಂಡಿವೆ ಎಂದು ವರದಿಯಾಗಿದೆ. ಈ ಹಡಗಿನ ರಾಷ್ಟ್ರೀಯತೆ ಬಹಿರಂಗಪಡಿಸಿರಲಿಲ್ಲ. ಈ ಹಡಗು ಇರಾನ್‌ನ ತೈಲವನ್ನು ಸಾಗಿಸುತ್ತಿತ್ತು ಎಂಬ ಆರೋಪವಿದೆ. ಇನ್ನೊಂದು ಇರಾನ್ ಗೆ ಸಂಬಂಧಿಸಿದ ಹಡಗನ್ನು ಅಮೆರಿಕ ನೌಕಾಪಡೆ ತಡೆದು, ಕಣ್ಗಾವಲಿನಲ್ಲಿ ಇಟ್ಟಿದೆ ಎಂದು ತಿಳಿದುಬಂದಿದೆ.
ಅಮೆರಿಕ ಕದನ ವಿರಾಮ ಉಲ್ಲಂಘನೆಯನ್ನು ನಿಲ್ಲಿಸುವವರೆಗೆ ಹಾರ್ಮುಝ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲಾಗುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ಅಡಚಣೆಯಿಂದ ಜಾಗತಿಕ ತೈಲ ಮತ್ತು ಅನಿಲ ಬೆಲೆಗಳಲ್ಲಿ ಏರಿಕೆ ಕಂಡುಬಂದಿದ್ದು, ಮಾರುಕಟ್ಟೆಗಳು ಅಸ್ಥಿರಗೊಂಡಿವೆ.

