ಟೆಹರಾನ್: ಹೊರ್ಮುಜ್ ಜಲಸಂಧಿಯ ಬಳಿ ಇರಾನ್‌ನ ಸರಕು ಸಾಗಣೆ ಹಡಗಿನ ಮೇಲೆ ಗುರುವಾರ ಮಧ್ಯರಾತ್ರಿ ಅಮೆರಿಕ ದಾಳಿ ಮಾಡಿದೆ. ಘಟನೆಯಲ್ಲಿ 10 ನಾವಿಕರು ಗಾಯಗೊಂಡಿದ್ದು, 5 ಜನರು ಕಣ್ಮರೆಯಾಗಿದ್ದಾರೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ.
ಏ.8ರಿಂದ ಕದನ ವಿರಾಮ ಜಾರಿಯಲ್ಲಿದ್ದರೂ, ಅಮೆರಿಕ ದಾಳಿ ನಡೆಸಿದೆ.
ಅದಕ್ಕೆ ನಾವು ತಕ್ಕ ಪ್ರತ್ಯುತ್ತರ ನೀಡಿದ್ದೇವೆ ಎಂದು ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿ ಮತ್ತು ಗಲ್ಫ್ ಆಫ್ ಓಮನ್ ಮೇಲೆ ಅಮೆರಿಕವು ಭೀಕರ ದಾಳಿ ನಡೆಸಿದೆ. ಆ ವೇಳೆ ಸಮುದ್ರದಲ್ಲಿದ್ದ ಸರಕು ಸಾಗಣೆ ಹಡಗಿಗೆ ಬೆಂಕಿ ಬಿದ್ದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇರಾನ್ ಸೇನೆಯು ಕ್ಷಿಪಣಿ, ಡ್ರೋನ್ ಮತ್ತು ಸಣ್ಣ ಹಡಗುಗಳ ಮೂಲಕ ನಮ್ಮ ಯುದ್ಧ ನೌಕೆಗಳ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಹಾಗಾಗಿ, ನಾವು ಪ್ರತಿದಾಳಿ ನಡೆಸಿದ್ದೇವೆ ಎಂದು ಅಮೆರಿಕ ಹೇಳಿದೆ.
ಅಮೆರಿಕವು, ಇರಾನ್‌ನ ಸರಕು ಹಡಗನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

