ನೀಮಚ್ನ ಆರ್ಟಿಐ ಕಾರ್ಯಕರ್ತ ಚಂದ್ರಶೇಖರ ಗೌರ್ ಅವರು ರೈಲ್ವೆ ಇಲಾಖೆಯಿಂದ ಪಡೆದುಕೊಂಡ ಮಾಹಿತಿಗಳ ಪ್ರಕಾರ, ವಿತ್ತವರ್ಷ 2025-25ರಲ್ಲಿ 3.39 ಕೋ.ಜನರಿಗೆ ತಮ್ಮ ವೇಟಿಂಗ್ ಲಿಸ್ಟ್ ಟಿಕೆಟ್ಗಳು ದೃಢಪಡದ್ದರಿಂದ ಮತ್ತು ಚಾರ್ಟ್ ತಯಾರಿಕೆ ಸಂದರ್ಭದಲ್ಲಿ ತನ್ನಿಂತಾನೆ ರದ್ದುಗೊಂಡಿದ್ದರಿಂದ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗಿಲ್ಲ.
ಆರ್ಟಿಐನಿಂದ ಲಭ್ಯ ದತ್ತಾಂಶಗಳ ಪ್ರಕಾರ, ಸ್ಲೀಪರ್ ಕ್ಲಾಸ್ ಮತ್ತು 3ಎಸಿ ಪ್ರಯಾಣಿಕರ ಅತ್ಯಂತ ಹೆಚ್ಚಿನ ಸಂಖ್ಯೆಯ ವೈಟಿಂಗ್ ಲಿಸ್ಟ್ ಟಿಕೆಟ್ಗಳು ತನ್ನಿಂತಾನೆ ರದ್ದುಗೊಂಡಿವೆ.
ಪ್ರತಿ ದಿನ ಸುಮಾರು 92,877, ಪ್ರತಿ ಗಂಟೆಗೆ ಸುಮಾರು 3,870, ಪ್ರತಿ ನಿಮಿಷಕ್ಕೆ 64 ಮತ್ತು ಪ್ರತಿ ಸೆಕೆಂಡ್ಗೆ ಒಂದಕ್ಕಿಂತ ಹೆಚ್ಚಿನ ಪ್ರಯಾಣಿಕರು ರೈಲು ಹತ್ತುವ ಖಚಿತ ಅವಕಾಶವನ್ನು ಕಳೆದುಕೊಂಡಿದ್ದಾರೆ.
ರೈಲುಗಳು ಕೇವಲ ಸಾರಿಗೆ ವ್ಯವಸ್ಥೆಯಾಗಿರದೆ ಕಾರ್ಮಿಕರು, ವಿದ್ಯಾರ್ಥಿಗಳು, ರೋಗಿಗಳು, ಕುಟುಂಬಗಳು, ಯಾತ್ರಿಗಳು ಮತ್ತು ಸಣ್ಣ ವ್ಯಾಪಾರಿಗಳ ಪಾಲಿನ ಜೀವನಾಡಿಯಾಗಿರುವ ಭಾರತದಂತಹ ದೇಶದಲ್ಲಿ ಇದು ಕೇವಲ ಒಂದು ಸಣ್ಣ ಅನಾನುಕೂಲವಲ್ಲ, ಬದಲಿಗೆ 'ವೇಟಿಂಗ್ ಲಿಸ್ಟ್' ಎಂಬ ವಿನಮ್ರ ಪದದ ಹಿಂದೆ ಅಡಗಿರುವ ರಾಷ್ಟ್ರೀಯ ಸಂಚಾರ ವೈಫಲ್ಯವಾಗಿದೆ.
ಲಭ್ಯ ಅಂಕಿಅಂಶಗಳು ವೇಟಿಂಗ್ ಲಿಸ್ಟ್ ಬಿಕ್ಕಟ್ಟು ವರ್ಷದಿಂದ ವರ್ಷಕ್ಕೆ ಸ್ಥಿರವಾಗಿ ಹೆಚ್ಚುತ್ತಿರುವುದನ್ನು ತೋರಿಸಿವೆ. 2021-22ರಲ್ಲಿ ವೈಟಿಂಗ್ ಲಿಸ್ಟ್ ಟಿಕೆಟ್ಗಳು ದೃಢಪಡದೆ ಸುಮಾರು 1.65 ಕೋ.ಜನರು ಪ್ರಯಾಣವನ್ನು ತಪ್ಪಿಸಿಕೊಂಡಿದ್ದರು. ಇದು 2022-23ರಲ್ಲಿ 2.72 ಕೋಟಿಗೆ, 2023-24ರಲ್ಲಿ 2.96 ಕೋಟಿಗೆ, 2024-25ರಲ್ಲಿ 2.96 ಕೋಟಿಗೆ ಮತ್ತು ಈಗ 2025-26ರಲ್ಲಿ 3.39 ಕೋಟಿಗೆ ಏರಿಕೆಯಾಗಿದೆ.
ಈ ಬಿಕ್ಕಟ್ಟಿನ ಅತ್ಯಂತ ಕಠಿಣ ಹೊಡೆತ ಬಿದ್ದಿರುವುದು ಸಾಮಾನ್ಯ ಪ್ರಯಾಣಿಕರಿಗೆ. ಸ್ಲೀಪರ್ ಕ್ಲಾಸ್ನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ,1.68 ಕೋ.ಜನರು ತೊಂದರೆಯನ್ನು ಅನುಭವಿಸಿದ್ದರೆ 3ಎಸಿ ವರ್ಗದಲ್ಲಿ 74.55 ಲಕ್ಷ ಜನರು ಟಿಕೆಟ್ ದೃಢಪಡದೆ ಪ್ರಯಾಣವನ್ನು ತಪ್ಪಿಸಿಕೊಂಡಿದ್ದಾರೆ. 2ಎಸಿ ವರ್ಗದಲ್ಲಿಯೂ ಗಮನಾರ್ಹ ಸಂಖ್ಯೆಯಲ್ಲಿ ಟಿಕೆಟ್ಗಳು ರದ್ದಾಗಿದ್ದು,ಬಿಕ್ಕಟ್ಟು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿಲ್ಲ.
ಪ್ರಯಾಣಿಕರ ಪಾಲಿಗೆ ತನ್ನಿಂತಾನೆ ರದ್ದಾಗುವ ಟಿಕೆಟ್ಗಳು ಕೇವಲ ಹಣದ ಮರುಪಾವತಿಯಲ್ಲ. ಅದು ತಪ್ಪಿ ಹೋದ ಪರೀಕ್ಷೆ,ಒಂದು ದಿನದ ವೇತನ ನಷ್ಟ,ವಿಳಂಬಿತ ವೈದ್ಯಕೀಯ ಚಿಕಿತ್ಸೆ,ಹಾಜರಾಗಲು ಸಾಧ್ಯವಾಗಿರದ ಮದುವೆ ಸಮಾರಂಭ ಅಥವಾ ರಾತ್ರೋರಾತ್ರಿ ದುಬಾರಿ ಪ್ರಯಾಣವೂ ಆಗಬಹುದು.
ಸ್ವಾತಂತ್ರ್ಯ ಲಭಿಸಿದ 78 ವರ್ಷಗಳ ಬಳಿಕವೂ ರೈಲ್ವೆಯಲ್ಲಿ ಕನ್ಫರ್ಮ್ಡ್ ಟಿಕೆಟ್ ಪಡೆಯುವುದು ಅದೃಷ್ಟದ ಆಟವಾಗಿರಬಾರದು. ಅದು ಮೂಲಭೂತ ಸೌಲಭ್ಯವಾಗಬೇಕು. ರೈಲ್ವೆಯು 10-20 ವರ್ಷಗಳ ನಂತರದ ಬಣ್ಣಬಣ್ಣದ ಕನಸುಗಳನ್ನು ತೋರಿಸುವ ಬದಲು ನಿರಂತರವಾಗಿ ಹೆಚ್ಚುತ್ತಿರುವ ಈ ಸಮಸ್ಯೆಯನ್ನು ನಿಯಂತ್ರಿಸಲು ಪ್ರಸ್ತುತ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆರ್ಟಿಐ ಕಾರ್ಯಕರ್ತ ಗೌರ್ ಹೇಳಿದರು.

