ನಾರ್ವೆ ಪ್ರಮುಖ ದಿಪತ್ರಿಕೆ ಆಫ್ಟೆನ್‌ಪೋಸ್ಟನ್‌ನಲ್ಲಿ ಪ್ರಕಟವಾದ ಈ ಚಿತ್ರದಲ್ಲಿ ಪ್ರಧಾನಿ ಮೋದಿಯನ್ನು ಪುಂಗಿ ಊದುವ ರೀತಿ, ಇಂಧನ ತುಂಬುವ ಪೈಪ್ ಅನ್ನು ಹಾವಿನಂತೆ ಚಿತ್ರಿಸಲಾಗಿದೆ. ಈ ಚಿತ್ರ ಒಳಗೊಂಡಿರುವ ಲೇಖನಕ್ಕೆ 'ಚೋರ ಮತ್ತು ಸ್ವಲ್ಪ ಕಿರಿಕಿರಿ ವ್ಯಕ್ತಿ'(A sneaky and slightly annoying man) ಎಂದು ಶೀರ್ಷಿಕೆ ನೀಡಲಾಗಿದೆ.
ಪ್ರಧಾನಿ ಮೋದಿ ಅವರು ಇತ್ತೀಚೆಗೆ 3ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲು ನಾರ್ವೆಗೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ, ಪತ್ರಿಕೆ ಈ ರೀತಿ ಚಿತ್ರಿಸಿದೆ.
ಸೋಮವಾರ ಒಸ್ಲೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ನಾರ್ವೆ ಪ್ರಧಾನಿ ಜೋನಸ್ ಸ್ಟೋರ್ ಭೇಟಿ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರು. ನಂತರ, ನಾರ್ವೆ ಪತ್ರಕರ್ತೆಯೊಬ್ಬರು ತಮ್ಮಿಂದ ಕೆಲ ಪ್ರಶ್ನೆಗಳನ್ನು ಸ್ವೀಕರಿಸುವಂತೆ ಪ್ರಧಾನಿ ಮೋದಿಗೆ ಕೇಳಿಕೊಂಡಿದ್ದರು. ಮೋದಿ ಅದಕ್ಕೆ ನಿರಾಕರಿಸಿ ಹೊರಟ ಹಿನ್ನೆಲೆ ತೀವ್ರ ವಾಗ್ದಾಳಿ ನಡೆಸಿದ್ದರು.
'ಭಾರತದ ಜೊತೆ ನಾರ್ವೆ ಪಾಲುದಾರಿಕೆ ಬಲಗೊಳ್ಳುತ್ತಿದೆ. ಆದರೆ, ನಾವು ಏಕೆ ನಿಮ್ಮನ್ನು(ಭಾರತ) ನಂಬಬೇಕು? ನಿಮ್ಮ ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಪ್ರಯತ್ನಿಸುತ್ತೀರೀ ಎಂದು ನೀವು ಭರವಸೆ ನೀಡಬಲ್ಲಿರಾ? ಭವಿಷ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾರತೀಯ ಪತ್ರಕರ್ತರಿಂದ ನಿರ್ಣಾಯಕ ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸುತ್ತಾರೆಯೇ?. ಸಾಧ್ಯವಾದರೆ ನೀವು ತಕ್ಷಣ ಉತ್ತರಿಸಬೇಕೆಂದು ನಾನು ಬಯಸುತ್ತೇನೆ'ಎಂದು ಪತ್ರಕರ್ತೆ ಲಿಂಗ್ ಕೇಳಿದ್ದರು.
ಇದು ಪತ್ರಿಕೋದ್ಯಮವಲ್ಲ. ಇದು ವಸಾಹತುಶಾಹಿ ಯುಗದ ಜನಾಂಗೀಯ ದ್ವೇಷದ ನಿದರ್ಶನ
ನಾರ್ವೆಯ ಅತಿದೊಡ್ಡ ಪತ್ರಿಕೆ ಪ್ರಧಾನಿ ಮೋದಿಯವರನ್ನು ಹಾವಾಡಿಗನಂತೆ ಚಿತ್ರಿಸಿ 'ಒಬ್ಬ ಚೋರ ಮತ್ತು ಸ್ವಲ್ಪ ಕಿರಿಕಿರಿ ಉಂಟುಮಾಡುವ ವ್ಯಕ್ತಿ' ಎಂದು ಕರೆದಿದೆ. ಇದು ಪತ್ರಿಕೋದ್ಯಮವಲ್ಲ. ಇದು ವಸಾಹತುಶಾಹಿ ಯುಗದ ಜನಾಂಗೀಯ ದ್ವೇಷದ ನಿದರ್ಶನವಾಗಿದೆ. ಭಾರತದ ಬೆಳವಣಿಗೆಯನ್ನು ಸಹಿಸಿಕೊಳ್ಳದ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಪ್ರತಿ ಬಾರಿ ಮುಖವಾಡ ಜಾರಿಹೋಗುತ್ತದೆ ಎಂದು ನೆಟ್ಟಿಗರೊಬ್ಬರು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಆಘಾತಕಾರಿ, ಜನಾಂಗೀಯ ನಿಂದನೆ, ಅವಹೇಳನಕಾರಿ ಎಂದು ಮತ್ತೊಬ್ಬ ಎಕ್ಸ್ ಬಳಕೆದಾರರು ಖಂಡಿಸಿದ್ದಾರೆ. ನಾರ್ವೆಯ ಅತಿದೊಡ್ಡ ಪತ್ರಿಕೆ ಆಫ್ಟೆನ್‌ಪೋಸ್ಟನ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಒಬ್ಬ ಚೋರ ಮತ್ತು ಸ್ವಲ್ಪ ಕಿರಿಕಿರಿಗೊಳಿಸುವ ವ್ಯಕ್ತಿ ಎಂಬ ಶೀರ್ಷಿಕೆಯೊಂದಿಗೆ ಹಾವಾಡಿಗನಂತೆ ಚಿತ್ರಿಸುವ ಆಘಾತಕಾರಿ ವ್ಯಂಗ್ಯಚಿತ್ರ ಪ್ರಕಟಿಸಿದೆ ಎಂದು ಹೇರಿದ್ದಾರೆ.

