ಕಾಸರಗೋಡು: ರಂಗಶಂಕರ ಬೆಂಗಳೂರು, ಕಾಸರಗೋಡು ಥಿಯಾಟ್ರಿಕ್ಸ್ ಸೊಸೈಟಿ ಹಾಗೂ ಸವಾಕ್ ಕಾಸರಗೋಡು ಸಹಯೋಗದಲ್ಲಿ ಆಯೋಜಿಸಲಾಗಿರುವ ನಾಲ್ಕು ದಿನಗಳ ಕನ್ನಡ ನಾಟಕೋತ್ಸವ ಕಾಸರಗೋಡು ನಗರಸಭಾ ಪುರಭವನದಲ್ಲಿ ಗುರುವಾರ ಆರಂಭವಾಯಿತು. ನಾಟಕೋತ್ಸವವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಫಾರೂಕ್ ಅಬ್ದುಲ್ ರಹಮಾನ್ ಅವರು 'ತಮಟೆ' ಬಾರಿಸಿ ಉದ್ಘಾಟಿಸಿ, ವರ್ತಮಾನದ ಯಾಂತ್ರಿಕ ಕಾಲಘಟ್ಟದಲ್ಲಿ ಮನುಷ್ಯನ ಧಾವಂತದ ಬದುಕಿನ ಜಂಜಡಗಳ ಮಧ್ಯೆ ನೆಮ್ಮದಿ ನೀಡುವ ರಂಗ ಚಟುವಟಿಕೆಗಳಿಗೆ ಬೆಂಬಲ ಬೇಕಿದೆ. ಯುವ ತಲೆಮಾರನ್ನು ರಂಗಭೂಮಿ ಸಹಿತ ಕಲಾ ಪ್ರಪಂಚಕ್ಕೆ ಕರೆತರುವ ತುರ್ತು ಅಗತ್ಯ ಇದೆ. ಮನಸ್ಸನ್ನು ಅರಳಿಸುವ, ಸಮಾಜವನ್ನು ಸುದೃಢಗೊಳಿಸುವ ಚಿಂತನೆಗಳನ್ನು ಬೆಂಬಲಿಸುವ ರಂಗ ನಾಟಕಗಳನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಹಿರಿಯ ನಟ, ಪತ್ರಕರ್ತ ಸುಬ್ಬಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ, ಸವಾಕ್ ರಾಜ್ಯ ಖಜಾಂಜಿ ಉಮೇಶ್ ಎಂ.ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ದಶಕಗಳ ಹಿಂದೆ ಕಾಸರಗೋಡಿನಾದ್ಯಂತ ಜನಮನ್ನಣೆ ಗಳಿಸಿದ್ದ ರಂಗಭೂಮಿ ಚಟುವಟಿಕೆಗಳನ್ನು ನೆನಪಿಸಿ ಸ್ವಾಗತಿಸಿದರು.
ನಗರಸಭೆ ಸದಸ್ಯ ಮಧುಕರ, ಥಿಯಾಟ್ರಿಕ್ಸ್ ಸೊಸೈಟಿಯ ಕಾರ್ಯದರ್ಶಿ ವಕೀಲ ಟಿ.ವಿ.ಗಂಗಾಧರನ್, ಪತ್ರಕರ್ತ ಟಿ.ಎ. ಶಾಫಿ, ಸಂಘಟಕಿ ಜೀನ್ ಲವಿನೋ ಮೊಂತೇರೊ, ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಗಂಗಾಧರ ಎಂ.ಎಂ., ಮುದ್ದಣ್ಣ ರಾಟೆಹಳ್ಳಿ, ಪ್ರೊ.ನರೇಂದ್ರನ್, ರವೀಂದ್ರನ್ ಪಾಡಿ, ದಿವಾಕರ್ ಅಶೋಕ್ ನಗರ, ದಯಾ ಪ್ರಸಾದ್, ಜಯಂತಿ ಸುವರ್ಣ,ನರಸಿಂಹ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಎಂ. ಉಮೇಶ ಸಾಲಿಯಾನ್ ಅವರ ಷಷ್ಠ್ಯಬ್ದಿಯ ಅಂಗವಾಗಿ ಕೇಕ್ ಕತ್ತರಿಸಿ ಶುಭಾಶಯ ವಿನಿಮಯದೊಂದಿಗೆ ಅವರ ರಂಗಭೂಮಿ ಚಟುವಟಿಕೆಗಳ ಇನ್ನಷ್ಟು ಬೆಂಬಲಕ್ಕಾಗಿ ಹಾರೈಸಲಾಯಿತು.
ಬಳಿಕ ನಿಸರ್ಗ ಪ್ರಿಯ ರಚನೆಯ ಶುನಶ್ಚೇಪ ನಾಟಕವನ್ನು ಸಿದ್ದಾಪುರ ಹಿತ್ತಲಕೈಯ ಒಡ್ಡೋಲಗ ರಂಗ ಪರ್ಯಟನೆ ತಂಡದವರು ಮಂಜುನಾಥ ಎಲ್.ಬಡಿಗೇರ ನಿರ್ದೇಶನದಲ್ಲಿ ಪ್ರದರ್ಶಿಸಿದರು. ಶುಕ್ರವಾರ ವಿವೇಕ ಶಾನುಭೋಗ್ ರಚನೆಯ ಬಹುಮುಖಿ ನಾಟಕವನ್ನು ಗಳಿಗೇನಹಳ್ಳಿ ರಂಗಾರಂಭ ತಂಡದವರು ಶ್ರೀನಿವಾಸಮೂರ್ತಿ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದರು.
ಇಂದು(ಶನಿವಾರ) ಸಂಧ್ಯಾ ಎಸ್.ರಚನೆಯ ನಕ್ಷತ್ರ ಯಾತ್ರಿಕರು ನಾಟಕವನ್ನು ಬೆಂಗಳೂರಿನ ಆಯಾಮ ತಂಡದವರು ಸವಿತ ಭೈರಪ್ಪ ನಿರ್ದೇಶನದಲ್ಲಿ ಮತ್ತು ನಾಳೆ(ಭಾನುವಾರ) ಕುವೆಂಪು ರಚನೆಯ ಬೆರಳ್ಗೆ ಕೊರಳ್ ನಾಟಕವನ್ನು ನವೀನ್ ಸಾಣೆಹಳ್ಳಿ ನಿರ್ದೇಶನದಲ್ಲಿ ಶೇಷಗಿರಿಯ ಗಜಾನನ ಯುವಕ ಮಂಡಳಿಯವರು ಪ್ರದರ್ಶಿಸುವರು. ಪ್ರತಿದಿನ ಸಂಜೆ 6.30 ರಿಂದ ಈ ಪ್ರದರ್ಶನಗಳು ನಡೆಯುತ್ತಿವೆ.

.jpg)
.jpg)
.jpg)
