ಮಂಜೇಶ್ವರ: ಕೇರಳದಲ್ಲಿ ಐಕ್ಯರಂಗದ ಜೈತ್ರಯಾತ್ರೆ ಮಧ್ಯೆ ಎಡರಂಗ ಸಂಪೂರ್ಣ ನೆಲಕಚ್ಚಿದ್ದು, ಸೀಟುಗಳ ಸಂಖ್ಯೆ ಗಣನೀಯವಗಿ ಕುಸಿದಿದೆ. ತನ್ನ ಪಾರಂಪರಿಕ ಸೀಟುಗಳನ್ನೂ ಉಳಿಸಿಕೊಳ್ಳುವಲ್ಲಿ ಸಿಪಿಎಂ ವಿಫಲವಾಗಿದೆ. ಹದಿಮೂರು ಮಂದಿ ಸಚಿವರುಗಳು ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.
1991 ರಿಂದ ಎಡರಂಗದ ವಶದಲ್ಲಿದ್ದ ಕಾಸರಗೋಡು ಜಿಲ್ಲೆಯ ಉದುಮ ವಿಧಾನಸಭಾ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಎಂ. ನೀಲಕಂಠನ್ ಇಲ್ಲಿ ವಿಜೇತರಾಘಿದ್ದಾರೆ. 1987 ರಲ್ಲಿ ಕಾಂಗ್ರೆಸ್‍ನ ಕೆ.ಪಿ. ಕುಂಜಿಕಣ್ಣನ್ ಸಿಪಿಎಂನ ವಕೀಲ ಕೆ. ಪುರುಷೋತ್ತಮನ್ ಅವರನ್ನು 6845 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆಗೆ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಇಲ್ಲಿ ಗೆಲುವು ಸಾಧಿಸಿದೆ. ಸತತ ಎರಡು ಬಾರಿ ಇಲ್ಲಿ ಸಿಪಿಎಂನಿಂದ ಆಯ್ಕೆಯಾಗಿದ್ದ ವಕೀಲ ಸಿ.ಎಚ್ ಕುಞಂಬು ಈ ಬಾರಿಯ ಚುನಾವಣೆಯಲ್ಲಿ ಮುಗ್ಗರಿಸಿದ್ದಾರೆ.
ಇನ್ನು ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗದ ಮತಗಳು ವ್ಯಾಪಕವಾಗಿ ಐಕ್ಯರಂಗ ಪಾಲಾಗಿರುವುದಾಗಿ ಬಿಜೆಪಿ ಆರೋಪಿಸಿದೆ. ಕಳೆದ ಬಾರಿ 40ಸಾವಿರಕ್ಕೂ ಹೆಚ್ಚು ಮತಗಳನ್ನು ಸಿಪಿಎಂ ಗಳಿಸಿದ್ದರೆ, ಅದು ಈ ಬಾರಿ 21ಸಾವಿರಕ್ಕೆ ಕುಸಿದಿರುವುದು ಎಡರಂಗ ಮತಗಳು ವ್ಯಾಪಕವಾಗಿ ಐಕ್ಯರಂಗಕ್ಕೆ ವರ್ಗಾವಣೆಯಾಗಿರುವುದು ಖಚಿತವಾಗಿರುವುದಗಿ ಬಿಜೆಪಿ ಹೇಳಿಕೊಂಡಿದೆ. ಒಟ್ಟು 140ಸೀಟುಗಳಲ್ಲಿ ಐಕ್ಯರಂಗಕ್ಕೆ 102, ಎಡರಂಗಕ್ಕೆ 36ಹಾಗೂ ಬಿಜೆಪಿ ನೇತೃಥ್ವದ ಎನ್‍ಡಿಎ ಒಕ್ಕೂಟಕ್ಕೆ ಮೂರು ಸೀಟುಗಳು ಲಭಿಸಿದೆ.
ಸೋಲಿನ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಪಿಣರಾಯಿವಿಜಯನ್ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲ ರಾಜೇಂದ್ರವಿಶ್ವನಾಥ ಅರ್ಲೇಕರ್ ರಾಜೀನಾಮೆ ಅಂಗೀಕರಿಸಿದ್ದು, ಹೊಸ ಸರ್ಕಾರ ರಚನೆಯಾಗುವಲ್ಲಿ ವರೆಗೆ ಉಸ್ತುವಾರಿಮುಖ್ಯಮಂತ್ರಿಯಾಗಿ ಮುಂದುವರಿಯುವಂತೆಸೂಚನೆ ನಿಡಿದ್ದಾರೆ. ಕಳೆದಬಾರಿ 67ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಸಿಪಿಐ(ಎಂ)ಈ ಬಾರಿ ಇದು 26ಸ್ಥಾನಗಳಿಗೆ ಕುಸಿದಿದೆ. ಮುಖ್ಯಮಂತ್ರಿ ಗಾದಿಗೆ ವಿ.ಡಿ ಸತೀಶನ್, ರಮೇಶ್ ಚೆನ್ನಿತ್ತಲ ಹಾಗೂ ಕೆ.ಸಿ ವೇಣುಗೋಪಾಲ್ ಆಕಾಂಕ್ಷಿಗಳಾಗಿದ್ದು, ಕೇರಳದ ಮುಂದಿನ ಸಾರಥಿಯ ಆಯ್ಕೆ ವಿಚಾರದಲ್ಲಿ ಬಿರುಸಿನ ಚರ್ಚೆ ಆರಂಭಗೊಂಡಿದೆ.



