ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಟ ವಿಜಯ್ ಅವರು ಅಧಿಕಾರ ಸ್ವೀಕರಿಸಿದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ನಟಿ ತ್ರಿಶಾ ಕೃಷ್ಣನ್, ಸಮಾರಂಭದ ಬಳಿಕ ಭಾರಿ ಜನಸಂದಣಿಯ ನಡುವೆ ಸಿಲುಕಿ ಪರದಾಡಿದ್ದಾರೆ.
ಭಾನುವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ತ್ರಿಶಾ ಅವರು ತಮ್ಮ ತಾಯಿ ಉಮಾ ಕೃಷ್ಣನ್ ಅವರೊಂದಿಗೆ ಭಾಗವಹಿಸಿದ್ದರು.
ವಿಜಯ್ ಅವರ ಕುಟುಂಬದ ಸದಸ್ಯರಿಗಾಗಿ ಮೀಸಲಾಗಿದ್ದ ವಿಐಪಿ ಸಾಲಿನಲ್ಲಿ ತ್ರಿಶಾ ಕುಳಿತಿದ್ದು ಎಲ್ಲರ ಗಮನ ಸೆಳೆಯಿತು.
ಇದೇ ವೇಳೆ ಅವರು ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ತ್ರಿಶಾ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ದೃಶ್ಯಗಳು ಕಂಡುಬಂದವು.
ಅಭಿಮಾನಿಗಳ ಮಧ್ಯೆ ಸಿಲುಕಿದ ನಟಿ
ಸಮಾರಂಭ ಮುಗಿದ ಬಳಿಕ ಹೊರಬರುವಾಗ ತ್ರಿಶಾ ಅವರು ಅಭಿಮಾನಿಗಳ ನಡುವೆ ಸಿಲುಕಿಕೊಂಡರು. ಭಾರಿ ಭದ್ರತೆಯ ನಡುವೆಯೂ ನಟಿಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಜನರನ್ನೂ ನಿಯಂತ್ರಿಸುವುದು ಕಷ್ಟವಾಯಿತು.
ಜನಜಂಗುಳಿಯ ನಡುವೆ ಒಂದಿಂಚೂ ಚಲಿಸಲು ಸಾಧ್ಯವಾಗದಿದ್ದಾಗ, ಪೊಲೀಸರು ತ್ರಿಶಾ ಅವರನ್ನು ಬೇರೊಂದು ದಾರಿಯ ಮೂಲಕ ಸುರಕ್ಷಿತವಾಗಿ ಹೊರಗೆ ಕರೆತಂದರು. ಆ ವೇಳೆ ತ್ರಿಶಾ ತಾಳ್ಮೆಯಿಂದ ವರ್ತಿಸಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ತ್ರಿಶಾ ಅವರು ಸೂರ್ಯ ನಟನೆಯ 'ಕರುಪ್ಪು' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆರ್.ಜೆ.ಬಾಲಾಜಿ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾ ಮೇ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

