ಗುವಾಹಟಿ: ಜನಾನುರಾಗಿ ಸಿಎಂ, ಅಸ್ಸಾಮಿಗರು 'ಮಾಮಾ' ಎಂದೇ ಕರೆಯುವ ಹಿಮಂತ ಬಿಸ್ವ ಶರ್ಮಾ ಎರಡನೇ ಬಾರಿಗೆ ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಿಜೆಪಿ ಹಿಮಂತ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದೆ.
ಈ ಮೂಲಕ ಒಂದು ಕಾಲದಲ್ಲಿ ಅಸ್ಸಾಂ ಕಾಂಗ್ರೆಸ್‌ನ ನಂಬಿಕಸ್ಥ ವ್ಯಕ್ತಿಯಾಗಿದ್ದ ಹಿಮಂತ ಅವರು ಬಿಜೆಪಿ ಸೇರಿದ ಮೇಲೆ ಎರಡನೇ ಬಾರಿಗೆ ಅಧಿಕಾರಕ್ಕೇರಿದ್ದಾರೆ.
ಕವಿ ಮತ್ತು ಕಾದಂಬರಿಗಾರ ಕೈಲಾಶ್ ನಾಥ್ ಶರ್ಮಾ ಮತ್ತು ಸಾಹಿತಿ ಮೃಣಾಲಿನಿ ದೇವಿ ಅವರ ಮಗನಾಗಿ 1969ರ ಫೆ.1ರಂದು ಜನಿಸಿದ್ದ ಹಿಮಂತ ಅವರು, ವಿದ್ಯಾರ್ಥಿಯಾಗಿದ್ದ ಕಾಲದಲ್ಲೇ ರಾಜಕೀಯಕ್ಕೆ ಧುಮುಕಿದ್ದರು.
ಅಸ್ಸಾಮಿಗರ 'ಮಾಮಾ' ಈಗ ಎರಡನೇ ಬಾರಿ ಮುಖ್ಯಮಂತ್ರಿ
ಒಂದು ಸಾಲಿನಲ್ಲಿಅಸ್ಸಾಂನ ಜನಪ್ರಿಯ ನಾಯಕ ಹಿಮಂತ ಬಿಸ್ವ ಶರ್ಮಾ ಅವರು ತಮ್ಮ ರಾಜಕೀಯ
1990ರಲ್ಲಿ ಬಿಎ, 1992ರಲ್ಲಿ ಎಂಎ ನಂತರ ಎಲ್‌ಎಲ್‌ಬಿ ಓದಿರುವ ಹಿಮಂತ ಅವರು, 2006 ರಲ್ಲಿ ಗುವಾಹಟಿ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನ್ನೂ ಪಡೆದಿದ್ದಾರೆ.
ಕಾಂಗ್ರೆಸ್‌ನಿಂದ ಟಿಕೆಟ್ ಪಡೆದಿದ್ದ ಹಿಮಂತ 2001ರಲ್ಲಿ ಜಲ್ಕಬರಿ ವಿಧಾನಸಭೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ನಾಯಕ ತರುಣ್ ಗೋಗಯ್ ಅವರ ಸರ್ಕಾರದಲ್ಲಿ ಕೃಷಿ ಮತ್ತು ಯೋಜನಾ ಇಲಾಖೆ ಸಚಿವರಾಗಿ ಕೆಲಸ ಮಾಡಿದ್ದರು. ನಂತರ ಆರೋಗ್ಯ, ಹಣಕಾಸು, ಶಿಕ್ಷಣ ಇಲಾಖೆಯಲ್ಲಿಯೂ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್ ಒಳಗೆ ಅವರನ್ನು 'ಚಾಣಕ್ಯ' ಎಂದೇ ಕರೆಯುತ್ತಿದ್ದರು.
2014-15ರ ಸಮಯದಲ್ಲಿ ಕಾಂಗ್ರೆಸ್ ಬಗ್ಗೆ ಅಸಮಾಧಾನೊಂಡಿದ್ದ ಅವರು, 2015ರ ಆಗಸ್ಟ್ 23ರಂದು ಅಮಿತ್ ಶಾ ಅವರ ನಿವಾಸದಲ್ಲಿ ಬಿಜೆಪಿಗೆ ಸೇರಿದ್ದರು.
ಹಿಮಂತ ಅವರ ನೇತೃತ್ವದಲ್ಲಿ 2016ರಲ್ಲಿ ಮೊದಲ ಬಾರಿ ಅಸ್ಸಾಂನಲ್ಲಿ ಬಿಜೆಪಿ ಗೆಲುವು ಸಾಧಿಸಿ, ಕಾಂಗ್ರೆಸ್ ಆಡಳಿತವನ್ನು ಕೊನೆಗಾಣಿಸಿತ್ತು. ಸರ್ಬಾನಂದ ಸೋನಾವಾಲ್ ಅವರು ಮುಖ್ಯಮಂತ್ರಿಯಾಗಿ ನೇಮಕಗೊಂಡರು. ಅವರ ಸರ್ಕಾರದಲ್ಲಿ ಹಿಮಂತ ಅವರು ಹಣಕಾಸು, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಇಲಾಖೆಗಳನ್ನು ನಿರ್ವಹಿಸಿದ್ದರು.
ಅಸ್ಸಾಂನಲ್ಲಿ ಬಿಜೆಪಿ ಗಟ್ಟಿಯಾಗಿ ನಿಲ್ಲಲು ಹಿಮಂತ ಅವರ ಪ್ರಮುಖ ತಂತ್ರಗಳು ಕೆಲಸ ಮಾಡಿದ್ದವು. ಕಾಲಕ್ರಮೇಣ ಬಿಜೆಪಿಯ ನಂಬಿಕಸ್ಥ ಮತ್ತು ಚುನಾವಣಾ ತಂತ್ರಗಾರನಾಗಿ ಗುರುತಿಸಿಕೊಂಡರು.
2021ರಲ್ಲಿ ನಡೆದ ಚುನಾವಣೆ ವೇಳೆ ಅವರ ಭಾಷಣ, ಜನರೊಂದಿಗೆ ಬೆರೆಯುತ್ತಿದ್ದ ರೀತಿಯಿಂದಾಗಿ 2ನೇ ಬಾರಿಯೂ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಹಿಮಂತ ಅವರೇ ಮುಖ್ಯಮಂತ್ರಿಯಾಗಿದ್ದರು. 2026ರಲ್ಲಿ ನಡೆದ ಚುನಾವಣೆಯಲ್ಲೂ ಅಭೂತಪೂರ್ವ ಜಯ ಸಾಧಿಸಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ.

