ನವದೆಹಲಿ: ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಪರೀಕ್ಷಾ ಕೊಠಡಿಗೆ ತರಬೇಕಾದ ವಸ್ತುಗಳ ಕುರಿತು ಮಾರ್ಗಸೂಚಿ ಬಿಡುಗಡೆಯಾಗಿದೆ.
ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ-ಯುಜಿ) 2026 ಬರೆಯುವ ಅಭ್ಯರ್ಥಿಗಳ ವಸ್ತ್ರಸಂಹಿತೆ ಮತ್ತು ತರಬಹುದಾದ ವಸ್ತುಗಳ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ಗುರುವಾರ ಮಾರ್ಗಸೂಚಿ ಹೊರಡಿಸಿದೆ.
ದೇಶದಾದ್ಯಂತ ಮತ್ತು ವಿದೇಶದಲ್ಲಿನ 15 ನಗರಗಳಲ್ಲಿ ಮೇ 11ರಿಂದ ಮೇ 31ರವರೆಗೆ ಸಿಯುಇಟಿ-ಯುಜಿ ಪರೀಕ್ಷೆ ನಡೆಯಲಿದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ)ಯಲ್ಲಿ ಅಭ್ಯರ್ಥಿಗಳು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಲಾಗಿದೆ.
ಮುಖ್ಯವಾಗಿ ಅಭ್ಯರ್ಥಿಗಳು ಪಾರದರ್ಶಕವಾದ ನೀರಿನ ಬಾಟಲ್ಗಳನ್ನು ಪರೀಕ್ಷಾ ಕೇಂದ್ರದೊಳಗೆ ತರಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದ ವಸ್ತುಗಳನ್ನು ಧರಿಸಲು ಅನುಮತಿ ನೀಡಲಾಗಿದೆ. ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಲು ಆದ್ಯತೆ ನೀಡಲಾಗಿದೆ. ಉಲ್ಲನ್ ಬಟ್ಟೆಗಳನ್ನು ಧರಿಸುವುದಕ್ಕೂ ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳು ತಪಾಸಣೆಗಾಗಿ ಆದಷ್ಟು ಬೇಗ ಪರೀಕ್ಷಾ ಕೇಂದ್ರಗಳನ್ನು ತಲುಪಬೇಕು ಎಂದು ಸೂಚನೆ ನೀಡಲಾಗಿದೆ.
ಸಾಮಾನ್ಯ ಬೂಟುಗಳು, ಪಾದರಕ್ಷೆಗಳು ಮತ್ತು ಹಿಮ್ಮಡಿಗಳನ್ನು ಪೂರ್ಣವಾಗಿ ಮುಚ್ಚಿರದ 'ಹೀಲ್ಸ್'ಗಳಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.

