ಉತ್ತರ ಪ್ರದೇಶದ ಬಂದಾ ನಗರದಲ್ಲಿ ತಾಪಮಾನ 47 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ ಪರಿಣಾಮ ಮನೆಯಿಂದ ಹೊರಗೆ ಬರಲೇ ಹೆದರುತ್ತಿರುವ ಜನರು ಬೆಳಿಗ್ಗೆ ಆರರಿಂದ 10 ಗಂಟೆಯವರೆಗೆ ಮಾತ್ರ ಮನೆಯಿಂದ ಹೊರಗೆ ಓಡಾಟ ನಡೆಸುತ್ತಿದ್ದಾರೆ.
ಬಂದಾದಲ್ಲಿ ಏಪ್ರಿಲ್ 27ರಂದು ತಾಪಮಾನ 47.6 ಡಿಗ್ರಿ ಸೆಲ್ಸಿಯಸ್ಗೆ ತಲುಪಿತ್ತು. 1951ರ ನಂತರ ಭಾರತದಲ್ಲಿ ದಾಖಲಾದ ಅತಿ ಹೆಚ್ಚು ತಾಪಮಾನವಿದು. 2022ರ ಏಪ್ರಿಲ್ 30ರಂದು 47.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅಲ್ಲಿಂದ ನಂತರ ಮೇ19ರಂದು ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪಿದ್ದು 48.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಈ ಮೂಲಕ ದೇಶದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾದ ಪ್ರದೇಶವೆಂದು ಗುರುತಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ದಿ ಹೆಸರಿನಲ್ಲಿ ನಡೆದ ಪರಿಸರ ವಿನಾಶದಿಂದ ತಾಪಮಾನದಲ್ಲಿ ಏರಿಕೆಯಾಗಿದೆ ಎನ್ನುತ್ತಾರೆ ಸಂಶೋಧಕರು.
ತಾಪಮಾನದಲ್ಲಿನ ಈ ವ್ಯತ್ಯಾಸದಿಂದ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿವೆ ಎನ್ನುವುದನ್ನು ವಿವರಿಸಿರುವ ಸ್ಥಳೀಯರು, 'ಈ ವರ್ಷ ನಾವು ಜಮೀನಿನಲ್ಲಿ ಹಗಲಿನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲದೆ, ರಾತ್ರಿ ಎಲ್ಐಡಿ ದೀಪಗಳನ್ನು ಅಳವಡಿಸಿಕೊಂಡು ಕೆಲಸ ಮಾಡಿದ್ದೇವೆ. ವಿಪರೀತ ಬಿಸಿಲಿನ ಪರಿಣಾಮ ಊರಿನಿಂದ ವಲಸೆ ಹೋಗುವ ಪ್ರಮಾಣವೂ ಹೆಚ್ಚಾಗಿದೆ. ಹೋಟೆಲ್ಗಳೂ ಸೂರ್ಯಾಸ್ತದ ನಂತರ ಬಾಗಿಲು ತೆರೆಯುತ್ತಿವೆ' ಎನ್ನುತ್ತಾರೆ.
'ಬೇಕಾದರೆ ದಿನದ ಕೂಲಿಯ ಶೇ 40ರಷ್ಟನ್ನು ಬಿಡುತ್ತೇವೆ ಆದರೆ ಬೆಳಿಗ್ಗೆ 10 ರಿಂದ ಸಂಜೆಯ 5 ಗಂಟೆಯವರೆಗೆ ಕೆಲಸಕ್ಕೆ ಬರುವುದಿಲ್ಲ ಎನ್ನುತ್ತಾರೆ ಕೂಲಿಕಾರ್ಮಿಕರು' ಎನ್ನುವುದು ಗುತ್ತಿಗೆದಾರರ ಮಾತು.
'ಬಂದಾದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದೆವು. ಬಂದಾದಲ್ಲಿ ಒಟ್ಟು 44 ಉಪವಿಭಾಗ ಕಳೆದ 45 ದಿನಗಳಿಂದ ತೀವ್ರ ತಾಪಮಾನ ಮತ್ತು ಅತಿಯಾದ ವಿದ್ಯುತ್ ಪೂರೈಕೆಯಿಂದ ಉಂಟಾದ ಒತ್ತಡದಿಂದಾಗಿ ಹಲವು ವಿದ್ಯುತ್ ಘಟಕಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ವಿದ್ಯುತ್ ಇಲಾಖೆಯ ಸಿಬ್ಬಂದಿ 1,379 ಕ್ಕೂ ಹೆಚ್ಚು ಟ್ರಾನ್ಸ್ಫಾರ್ಮರ್ಗಳಿಗೆ ನಿರಂತರವಾಗಿ ನೀರು ಸುರಿಯುತ್ತಿದ್ದಾರೆ, ಈಗಾಗಲೇ ದಿನಕ್ಕೆ ಸುಮಾರು 16 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ವಿದ್ಯುತ್ ಅಧಿಕಾರಿಗಳು ತಿಳಿಸಿದ್ದಾರೆ.
ಜರ್ನಲ್ ಆಫ್ ಎಕ್ಸ್ಟೆನ್ಶನ್ ಸಿಸ್ಟಮ್ಸ್ನಲ್ಲಿ ಪ್ರಕಟವಾದ ಬಂದಾ ಕೃಷಿ ವಿಶ್ವವಿದ್ಯಾಲಯದ ಅರ್ಜುನ್ ಪಿ. ವರ್ಮಾ ಅವರ ಅಧ್ಯಯನವು 1991-92 ರಿಂದ 2021-22 ರವರೆಗೆ ಬಂದಾ ತನ್ನ ದಟ್ಟವಾದ ಅರಣ್ಯ ಪ್ರದೇಶದ ಸುಮಾರು ಆರನೇ ಒಂದು ಭಾಗವನ್ನು ಕಳೆದುಕೊಂಡಿದೆ. ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿರುವ ಗಣಿಗಾರಿಕೆ ಮತ್ತು ಅರಣ್ಯ ಪ್ರದೇಶಗಳನ್ನು ಕೃಷಿ ಭೂಮಿಯಾಗಿ ಒತ್ತುವರಿ ಮಾಡಿಕೊಂಡ ಪರಿಣಾಮ ತಾಪಮಾನ ಏರಿಕೆಯಾಗುತ್ತಿದೆ ಎಂದು ತಿಳಿಸಿದೆ.
ಗಣಿಗಾರಿಕೆಯಿಂದಾಗಿ ನದಿಯ ನೀರು ಬತ್ತುತ್ತಿದೆ, ಅಂತರ್ಜಲ ಕುಸಿಯುತ್ತಿದೆ, ಅರಣ್ಯ ನಾಶದಿಂದಾಗಿ ವಾತಾವರಣದಲ್ಲಿನ ಶುಷ್ಕತೆ ಕಡಿಮೆಯಾಗಿದ್ದು, ಧೂಳು ಮಿಶ್ರಿತ ಗಾಳಿ ಬೀಸುವಿಕೆ ಹೆಚ್ಚಿದೆ ಎಂದು ಬಂದಾ ಕೃಷಿ ವಿವಿಯ ಹವಾಮಾನ ಇಲಾಖೆಯ ಮುಖ್ಯಸ್ಥ ಪ್ರೊ.ದಿನೇಶ್ ಸಾಹಾ ಹೇಳಿದ್ದಾರೆ.

