ನವದೆಹಲಿ: ಒಮಾನ್ ಕರಾವಳಿಯಲ್ಲಿ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದ ನಂತರ, ಪಲಾವು ದೇಶದ ಧ್ವಜ ಹೊತ್ತ ವ್ಯಾಪಾರಿ ಟ್ಯಾಂಕರ್ ಹಡಗಿನಲ್ಲಿದ್ದ 24 ಭಾರತೀಯ ಸಿಬ್ಬಂದಿಯನ್ನು ಒಮಾನಿ ಅಧಿಕಾರಿಗಳ ನೆರವಿನಿಂದ ರಕ್ಷಿಸಲಾಗಿದೆ ಎಂದು ಭಾರತೀಯ ಕರಾವಳಿ ಕಾವಲುಪಡೆ (ಐಸಿಜಿ) ಮಂಗಳವಾರ ಹೇಳಿದೆ.
ಜೂನ್ 8ರಂದು ಮುಂಬೈನಲ್ಲಿರುವ ಐಸಿಜಿಯ ಸಾಗರ ರಕ್ಷಣಾ ಸಮನ್ವಯ ಕೇಂದ್ರವು (ಎಂಆರ್‌ಸಿಸಿ) ಎಂ.ಟಿ. ಮರಿವೆಕ್ಸ್ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿಯಾಗಿದೆ ಎಂಬ ಮಾಹಿತಿ ಪಡೆದುಕೊಂಡಿತ್ತು. ಈ ವೇಳೆ ಹಡಗು ಒಮಾನ್‌ನ ಮಸೀರಾದಲ್ಲಿ ಲಂಗರು ಹಾಕಿತ್ತು ಎಂದು ಹೇಳಿಕೆ ತಿಳಿಸಿದೆ.
ಹಡಗಿನಲ್ಲಿದ್ದ ಎಲ್ಲಾ 24 ಸಿಬ್ಬಂದಿ ಭಾರತೀಯರಾಗಿದ್ದು, ಸಿಬ್ಬಂದಿಯೊಬ್ಬರ ಸಂಬಂಧಿಯ ಮೂಲಕ ಎಂಆರ್‌ಸಿಸಿ ಈ ಮಾಹಿತಿ ಪಡೆದುಕೊಂಡಿತ್ತು ಎಂದು ಐಸಿಜಿ ತಿಳಿಸಿದೆ. ಈ ಮಾಹಿತಿಯ ನಂತರ, ಅವರ ಸುರಕ್ಷತೆಗಾಗಿ ಎಂಆರ್‌ಸಿಸಿ ಒಮಾನಿ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯ ಸಾಧಿಸಿತು ಎಂದು ಹೇಳಿಕೆ ತಿಳಿಸಿದೆ.
ಒಮಾನ್ ನೌಕಾಪಡೆಯ ಹೆಲಿಕಾಪ್ಟರ್‌ಗಳ ಮೂಲಕ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಒಮಾನ್ ಹೇಳಿದೆ. ಯಾವುದೇ ಸಾವು-ನೋವು ಅಥವಾ ಗಾಯಗಳು ವರದಿಯಾಗಿಲ್ಲ ಹಾಗೂ ಹಡಗನ್ನು ಈಗ ಒಮಾನ್‌ನ ಮಸೀರಾ ಬಳಿ ಲಂಗರು ಹಾಕಲಾಗಿದೆ ಎಂದು ಐಸಿಜಿ ಅಧಿಕಾರಿಗಳು ತಿಳಿಸಿದ್ದಾರೆ.

