ಬೈರೂತ್: ಲೆಬನಾನ್ ರಾಜಧಾನಿ ಬೈರೂತ್‌ನ ಸಬರ್ಬನ್‌ನಲ್ಲಿರುವ ಹಿಜ್ಬುಲ್ಲಾ ಭದ್ರಕೋಟೆ ಮೇಲೆ ಪ್ರತಿ ದಾಳಿ ನಡೆಸಿರುವ ಇಸ್ರೇಲ್ ಸೇನೆಯು ಮೂವರನ್ನು ಕೊಂದಿರುವುದಾಗಿ ಹೇಳಿದೆ. ಇಂದು ಉತ್ತರ ಇಸ್ರೇಲ್‌ನಲ್ಲಿ ಹಿಜ್ಬುಲ್ಲಾ ನಡೆಸಿದ್ದ ಡ್ರೋನ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಈ ದಾಳಿ ಮಾಡಿದೆ.
ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ಶಾಂತಿ ಒಪ್ಪಂದಕ್ಕೆ ಹತ್ತಿರವಾದ ಸಂದರ್ಭದಲ್ಲೇ ಈ ಉದ್ವಿಗ್ನತೆ ಭುಗಿಲೆದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್‌ನ ಮುಖ್ಯ ಸಂಧಾನಕಾರ ಮೊಹಮ್ಮದ್ ಬಗೇರ ಘಾಲಿಬಾಫ್, ಈ ದಾಳಿ ಬಳಿಕ ಅಮೆರಿಕ ಜೊತೆ ಶಾಂತಿ ಮಾತುಕತೆ ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂದಿದ್ಧಾರೆ.
ಶಾಂತಿ ಒಪ್ಪಂದದ ಪ್ರಮುಖ ಅಂಶಗಳಲ್ಲಿ ಲೆಬನಾನ್‌ನಲ್ಲಿ ಕದನ ವಿರಾಮವು ಒಂದಾಗಿರಬೇಕು ಎಂದು ಇರಾನ್ ಮೊದಲಿನಿಂದಲೂ ಹೇಳುತ್ತಾ ಬಂದಿದೆ.
ಮಾರ್ಚ್ 2ರಿಂದ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಯುದ್ಧ ನಡೆಯುತ್ತಿದೆ. ಫೆಬ್ರುಬರಿ 28ರಂದು ಇರಾನ್‌ನ ಪರಮೋಚ್ಚ ನಾಯಕ ಅಯಾತೋಲ್ಲಾ ಖಮೇನಿ ಹತ್ಯೆ ಸೇಡು ತೀರಿಸಿಕೊಳ್ಳಲು ಹಿಜ್ಬುಲ್ಲಾ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿತ್ತು.
ಬೈರೂತ್‌ನ ದಕ್ಷಿಣ ಸಬರ್ಬನ್‌ನ ಘೋಬೈರಿ ಬಳಿಯ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆದಿದೆ ಎಂದು ಲೆಬನಾನ್‌ನ ಅಧಿಕೃತ ರಾಷ್ಟ್ರೀಯ ಸುದ್ದಿ ಸಂಸ್ಥೆ(ಎನ್‌ಎನ್‌ಎ) ತಿಳಿಸಿದೆ. ಇದು ದಹಿಯೆಹ್ ಎಂದು ಕರೆಯಲ್ಪಡುವ ಹಿಜ್ಬುಲ್ಲಾ ಭದ್ರಕೋಟೆಯಾಗಿದೆ.
ಅಪಾರ್ಟ್‌ಮೆಂಟ್ ಅವಶೇಷಗಳು ಬೀದಿಗೆ ಬಿದ್ದಿದ್ದು, ಅದರಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ. ಜನಜಂಗುಳಿ, ಅಂಗಡಿ ಮುಂಗಟ್ಟುಗಳಿಂದ ತುಂಬಿದ್ದ ಈ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಇಸ್ರೇಲ್ ದಾಳಿಯಲ್ಲಿ ಮೂವರು ಮೃತಪಟ್ಟು, 6 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
ಇಸ್ರೇಲ್ ಮೇಲೆ ಮೂರು ಡ್ರೋನ್ ದಾಳಿ ನಡೆದಿದ್ದು, ಹಿಜ್ಬುಲ್ಲಾ ಬಂಡುಕೋರರು ನಡೆಸಿರುವ ಸಾಧ್ಯತೆ ಇದೆ ಎಂದು ಇಸ್ರೇಲ್ ಭಾನುವಾರ ಬೆಳಿಗ್ಗೆ ಹೇಳಿತ್ತು.

