ನವದೆಹಲಿ: ಮೇ ತಿಂಗಳಲ್ಲಿ ರಷ್ಯಾದಿಂದ ಅತಿಹೆಚ್ಚು ತೈಲ ಖರೀದಿ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮೇ ತಿಂಗಳಲ್ಲಿ ಸುಮಾರು 4.8 ಶತಕೋಟಿ ಯೂರೋ (5.6 ಶತಕೋಟಿ ಡಾಲರ್) ಮೌಲ್ಯದ ತೈಲವನ್ನು ಭಾರತ ಖರೀದಿಸಿದ್ದು, ಇದು ಏಪ್ರಿಲ್‌ನಲ್ಲಿ ಖರೀದಿಸಿದ ಪ್ರಮಾಣಕ್ಕಿಂತ ಶೇಕಡ 7ರಷ್ಟು ಅಧಿಕ.
ಏಪ್ರಿಲ್‌ನಲ್ಲಿ 4.5 ಶತಕೋಟಿ ಯೂರೊ (5.2 ಶತಕೋಟಿ ಡಾಲರ್) ಮೌಲ್ಯದ ತೈಲವನ್ನು ಭಾರತ ಖರೀದಿಸಿತ್ತು ಎಂದು ಸೆಂಟರ್ ಫಾರ್ ರೀಸರ್ಚ್ ಇನ್ ಎನರ್ಜಿ ಅಂಡ್ ಕ್ಲೀನ್ ಏರ್ ಎಂಬ ಫಿನ್ಲೆಂಡ್‌ನ ಚಿಂತಕರ ಕೂಟ ನಡೆಸಿದ ಅಧ್ಯಯನ ವರದಿ ಹೇಳಿದೆ.
ರಷ್ಯಾದಿಂದ ಭಾರತ ಒಟ್ಟು 5.8 ಶತಕೋಟಿ ಯೂರೊ (6.7 ಶತಕೋಟಿ ಡಾಲರ್) ಮೌಲ್ಯದ ಹೈಡ್ರೋಕಾರ್ಬನ್ ಖರೀದಿ ಮಾಡಿದ್ದು, ಇದರಲ್ಲಿ ಶೇಕಡ 83ರಷ್ಟು ಕಚ್ಚಾತೈಲ ಸೇರಿದೆ ಎಂದು ಸಿಆರ್‌ಇಎ ವಿವರಿಸಿದೆ. ರಷ್ಯಾದಿಂದ ಅತಿಹೆಚ್ಚು ತೈಲ ಖರೀದಿ ಮಾಡುವ ದೇಶವಾಗಿ ಚೀನಾ ಮುಂದುವರಿದಿದ್ದು, ಸುಮಾರು 7 ಶತಕೋಟಿ ಯೂರೊ ಮೌಲ್ಯದ ತೈಲವನ್ನು ಮೇ ತಿಂಗಳಲ್ಲಿ ಖರೀದಿಸಿದೆ.
ಕಳೆದ ತಿಂಗಳಿಗೆ ಹೋಲಿಸಿದರೆ ಕಚ್ಚಾತೈಲ ಆಮದು ಶೇಕಡ 8ರಷ್ಟು ಹೆಚ್ಚಳ ದಾಖಲಿಸಿದ್ದು, ದೊಡ್ಡ ಪ್ರಮಾಣದ ಕಚ್ಚಾತೈಲ ವಡಿನಾರ್ ಮತ್ತು ಜಾಮ್ನಗರ ರಿಫೈನರಿಗಳಲ್ಲಿ ಅನ್‌ಲೋಡ್ ಆಗಿದೆ. ಈ ಎರಡು ರಿಫೈನರಿಗಳಲ್ಲಿ ಆಮದು ಪ್ರಮಾಣ ಕ್ರಮವಾಗಿ ಶೇಕಡ 36 ಮತ್ತು 14ರಷ್ಟು ಹೆಚ್ಚಿದೆ. ಸರ್ಕಾರಿ ಸ್ವಾಮ್ಯದ ರಿಫೈನರಿಗಳು ಹಿಂದಿನ ತಿಂಗಳಿಗೆ ಹೋಲಿಸಿದರೆ ಕ್ರಮವಾಗಿ ಶೇಕಡ 13 ಮತ್ತು 42ರಷ್ಟು ಆಮದು ಹೆಚ್ಚಿಸಿಕೊಂಡಿವೆ.

