ತಿರುವನಂತಪುರ: ತಿರುವನಂತಪುರ ಮಹಾನಗರ ಪಾಲಿಕೆಯ 19 ಬಿಜೆಪಿ ಸದಸ್ಯರು ವಿವಿಧ ದೇವರುಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕ್ರಮವನ್ನು ಅಸಿಂಧುಗೊಳಿಸಿ ಕೇರಳ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶ ಹೊರಬಿದ್ದ ಕೆಲವೇ ಗಂಟೆಗಳ ಬಳಿಕ ಈ ಎಲ್ಲ ಸದಸ್ಯರು ಹಲವು 'ದೇವರ' ಹೆಸರಿನಲ್ಲಿಯೇ ಮತ್ತೊಮ್ಮೆ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ.
ಈ ಮೊದಲು, ಉಪ ಮೇಯರ್ ಆಶಾ ನಾಥ್ ಜಿ.ಎಸ್ ಸೇರಿ ಬಿಜೆಪಿಯ 20 ಸದಸ್ಯರು ವಿವಿಧ ದೇವರುಗಳ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದರು. ಇದನ್ನು ಪ್ರಶ್ನಿಸಿ ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸಿಪಿಎಂನ ಎಸ್.ಪಿ.ದೀಪಕ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಬಿಜೆಪಿ ಸದಸ್ಯರು ಪ್ರಮಾಣ ಸ್ವೀಕರಿಸಿದ್ದನ್ನು ಅಸಿಂಧುಗೊಳಿಸಿ ಆದೇಶಿಸಿತ್ತು. ಇದರ ಬೆನ್ನಲ್ಲೇ, ಮತ್ತೊಮ್ಮೆ ಪ್ರತಿಜ್ಞಾ ವಿಧಿ ಸ್ವೀಕರಿಸುವುದಕ್ಕೆ ಬಿಜೆಪಿ ಸದಸ್ಯರು ನಿರ್ಧರಿಸಿದ್ದರು.
ಈ ನಡುವೆ, ಕೇರಳ ಸಮಾಜ ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ(ಕೆಎಎಪಿಎ)ಅಡಿ ಬಿಜೆಪಿ ಸದಸ್ಯ ಆರ್.ಸುಗತನ್ ಅವರನ್ನು ಬಂಧಿಸಲಾಗಿದ್ದು, ಅವರು ಈಗ ಜೈಲಿನಲ್ಲಿದ್ದಾರೆ.
ಈ ಕಾರಣಕ್ಕೆ, ಉಳಿದ 19 ಸದಸ್ಯರು ಮತ್ತೊಮ್ಮೆ 'ದೇವರ' ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದು, ಮೇಯರ್ ವಿ.ವಿ.ರಾಜೇಶ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದ್ಧಾರೆ.
ಇಕ್ಕಟ್ಟಿನಲ್ಲಿ ಬಿಜೆಪಿ: 101 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 50. ಇಬ್ಬರು ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಕೆಎಎಪಿಎ ಅಡಿ ಬಂಧನಕ್ಕೆ ಒಳಗಾಗಿ, ಪಾಲಿಕೆಯ ಕಲಾಪಗಳಿಗೆ ಸತತವಾಗಿ ಗೈರು ಆಗಿರುವ ಕಾರಣ ಸುಗತನ್ ಅವರು ಸದಸ್ಯ ಸ್ಥಾನದಿಂದ ಅನರ್ಹಗೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಇದು, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇನ್ನೊಂದೆಡೆ, ಸಿಪಿಎಂ ನೇತೃತ್ವದ ಎಲ್‌ಡಿಎಫ್ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕ್ರಮವಾಗಿ 29 ಹಾಗೂ 20 ಸದಸ್ಯರನ್ನು ಹೊಂದಿವೆ. ಈ ಎರಡು ಮೈತ್ರಿಕೂಟಗಳು ನಿಲುವಳಿ ಸೂಚನೆ ಮಂಡಿಸಲು ಮುಂದಾಗಿದ್ದರಿಂದ ಬಿಜೆಪಿ ಸದಸ್ಯರು ತರಾತುರಿಯಲ್ಲಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದರು ಎಂದು ಮೂಲಗಳು ಹೇಳಿವೆ.
ಚಾಂಡಿ ಹೆಸರಿನಲ್ಲಿ ತೆಗೆದುಕೊಂಡ ಪ್ರಮಾಣವೂ ಅಸಿಂಧು
ಪಾಲಕ್ಕಾಡ್ ಜಿಲ್ಲೆಯ ವಡಕ್ಕಂಚೇರಿ ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಸದಸ್ಯ ಸುನೀಲ್ ಚುವಟ್ಟುಪಾಡಮ್ ಅವರು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದರು. ಈ ಕ್ರಮವನ್ನು ಕೂಡ ಅಸಿಂಧುಗೊಳಿಸಿ ಕೇರಳ ಹೈಕೋರ್ಟ್ ಆದೇಶಿಸಿದೆ.

