ಕಾಸರಗೋಡು: ವಿವಿಧ ಇಲಾಖೆಗಳು ಪ್ರಕಟಿಸುವ ನೋಟಿಸ್ಗಳನ್ನು ಸಾರ್ವಜನಿಕರಿಗಾಗಿ ಕನ್ನಡದಲ್ಲೂ ಮುದ್ರಿಸುವಂತೆ ಜಿಲ್ಲಾ ಮುಖ್ಯಸ್ಥರಿಗೆ ಸೂಚಿಸಲು ಭಾಷಾ ಅಲ್ಪಸಂಖ್ಯಾತ ಭಾಷಾ ಜಿಲ್ಲಾ ಸಮಿತಿ ನಿರ್ಧರಿಸಿದೆ. ಕಲೆಕ್ಟರೇಟ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಪರಿಹಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಕೆ.ಎಸ್.ಆರ್.ಟಿ.ಸಿ. ಬಸ್ ಮಂಡಳಿ ಸೇರಿದಂತೆ ಭಾಷಾ ಅಲ್ಪಸಂಖ್ಯಾತರು ಹೆಚ್ಚಿರುವ ಕಾಸರಗೋಡು ಮತ್ತು ಮಂಜೇಶ್ವರ ತಾಲ್ಲೂಕುಗಳ ವಿವಿಧ ಭಾಗಗಳಲ್ಲಿ ಅಳವಡಿಸಲಾದ ಫಲಕಗಳನ್ನು ಕನ್ನಡದಲ್ಲಿಯೂ ಅಳವಡಿಸಬೇಕೆಂದು ಸಭೆ ಒತ್ತಾಯಿಸಿತು. ಮಂಜೇಶ್ವರ ತಾಲ್ಲೂಕಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲು ಮತ್ತು ಐಸಿಡಿಎಸ್ ಮೇಲ್ವಿಚಾರಕರ ಹುದ್ದೆಗಳಲ್ಲಿ ಕನ್ನಡ ಬಲ್ಲವರಿಗೆ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಶಿಕ್ಷಕರನ್ನು ನೇಮಿಸಬೇಕು. ಜಿಲ್ಲೆಯಲ್ಲಿ ಕನ್ನಡದಲ್ಲಿ ಮುದ್ರಿಸುವ ಸರ್ಕಾರಿ ಮುದ್ರಣಾಲಯದ ಅಗತ್ಯತೆಯ ಬಗ್ಗೆ ಈ ಹಿಂದೆ ಸರ್ಕಾರಕ್ಕೆ ತಿಳಿಸಿದ್ದರೂ, ಈ ನಿಟ್ಟಿನಲ್ಲಿ ಮತ್ತೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಸಭೆಯಲ್ಲಿ ಕಾಲೇಜು ಶಿಕ್ಷಣ ಪ್ರತಿನಿಧಿ ಡಾ. ಎನ್. ರಾಧಾಕೃಷ್ಣ, ರಾಜ್ಯ ಕನ್ನಡ ಮಾಧ್ಯಮ ಶಿಕ್ಷಕರ ಸಂಘಟನೆಯ ಅಧ್ಯಕ್ಷ ಸುಕೇಶ, ಕಲೆಕ್ಟರೇಟ್ ಜೂನಿಯರ್ ಸೂಪರಿಂಟೆಂಡೆಂಟ್ ಜಗದೀಶ ಮತ್ತು ಇತರರು ಭಾಗವಹಿಸಿದ್ದರು. ಎಡಿಎಂ ಪಿ. ಉದಯಕುಮಾರ್ ಸ್ವಾಗತಿಸಿ, ಕಲೆಕ್ಟರೇಟ್ ಎ ವಿಭಾಗದ ಜೂನಿಯರ್ ಸೂಪರಿಂಟೆಂಡೆಂಟ್ ಎಂ. ಬಿ. ಲೋಕೇಶ್ ವಂದಿಸಿದರು.



