HEALTH TIPS

ಒಮಾನ್ ಕರಾವಳಿಯಲ್ಲಿ ನಾವಿಕನ ಮೃತದೇಹ ಕೊಳೆಯುತ್ತಿದೆ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

 ನವದೆಹಲಿ: ಒಮಾನ್ ಕರಾವಳಿಯಲ್ಲಿ ಲಂಗರು ಹಾಕಿರುವ ಎಂಟಿ ಸೆಲೆಸ್ಟಿಯಲ್ ಹಡಗಿನಲ್ಲಿ ಭಾರತೀಯ ನಾವಿಕನ ಮೃತದೇಹ ಕೊಳೆಯುತ್ತಿರುವ ಘಟನೆಗೆ ಸಂಬಂಧಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರವಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 


ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ನಡುವೆಯೂ ಕೇಂದ್ರ ಸರಕಾರ ನಿರ್ಲಕ್ಷ್ಯ ವಹಿಸಿರುವ ಪರಿಣಾಮವಾಗಿ ಭಾರತೀಯ ನಾವಿಕನ ಮೃತದೇಹ ಹಡಗಿನಲ್ಲೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (ಎಫ್‌ಎಸ್‌ಯುಐ) ಪ್ರಕಾರ, ನಾವಿಕ ನಿಶಾಂತ್ ಉಯಿರ್ಥನಾಥನ್ ಅವರು ಜೂನ್ 11ರಂದು ಸಕಾಲಿಕ ವೈದ್ಯಕೀಯ ನೆರವು ದೊರೆಯದ ಕಾರಣ ಮೃತಪಟ್ಟಿದ್ದಾರೆ. ಆದರೆ, ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅವರು ವೈದ್ಯಕೀಯ ತೊಡಕುಗಳಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ನಿಶಾಂತ್ ಅವರ ಮೃತದೇಹವನ್ನು ಭಾರತಕ್ಕೆ ತರಲು ಕ್ರಮ ಕೈಗೊಳ್ಳುವಂತೆ ಎಂಟಿ ಸೆಲೆಸ್ಟಿಯಲ್ ಹಡಗಿನ ಕ್ಯಾಪ್ಟನ್ ಮಾಡಿರುವ ವೀಡಿಯೊ ಮನವಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, 'ವಿದೇಶಿ ಶಕ್ತಿಗಳು ನಮ್ಮ ನಾಗರಿಕರನ್ನು ಕೊಲ್ಲುತ್ತವೆ. ನಮ್ಮ ಸರಕಾರವು ವಿಧೇಯ ಸೇವಕನಂತೆ ಆದೇಶಗಳನ್ನು ಸದ್ದಿಲ್ಲದೆ ಪಾಲಿಸುತ್ತದೆ. ನಮ್ಮ ನಾಗರಿಕರನ್ನು ಕೊಳೆಯಲು ಬಿಡಲಾಗಿದೆ. ಈ ಭಾರತೀಯನನ್ನು ಮನೆಗೆ ಕರೆತನ್ನಿ. ಈಗಲೇ ಕರೆತನ್ನಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಹಡಗಿನ ಕ್ಯಾಪ್ಟನ್ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ನಿಶಾಂತ್ ಅವರ ಮೃತದೇಹವನ್ನು ಕಪ್ಪು ಟಾರ್ಪಾಲಿನ್‌ನಿಂದ ಮುಚ್ಚಲಾಗಿದ್ದು, ಕೊಳೆಯುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಅದರ ಪಕ್ಕದಲ್ಲಿ ನೀರಿನ ಬಾಟಲಿಗಳನ್ನು ಇರಿಸಿರುವುದು ಕಂಡುಬಂದಿದೆ.

'ಇದು ನಮ್ಮ ಎರಡನೇ ಅಧಿಕಾರಿಯ ಮೃತದೇಹ. ಅವರು ಎರಡು ದಿನಗಳ ಹಿಂದೆ ನಿಧನರಾದರು. ಮೃತದೇಹ ಕೊಳೆಯುತ್ತಿದೆ. ನಾವು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದೇವೆ. ಆದರೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ. ನಮ್ಮ ಕಂಪೆನಿ ನಮಗೆ ಸರಿಯಾದ ಪ್ರತಿಕ್ರಿಯೆ ನೀಡುತ್ತಿಲ್ಲ' ಎಂದು ಕ್ಯಾಪ್ಟನ್ ಹೇಳಿದ್ದಾರೆ.

ಎಫ್‌ಎಸ್‌ಯುಐ ಶನಿವಾರ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, 'ನಿಶಾಂತ್ ಅವರು ಜೂನ್ 11ರಂದು ಸಂಜೆ 6 ಗಂಟೆಗೆ ಸಕಾಲಿಕ ವೈದ್ಯಕೀಯ ನೆರವಿನ ಕೊರತೆಯಿಂದ ಮೃತಪಟ್ಟಿದ್ದಾರೆ. ಎರಡು ದಿನಗಳ ಬಳಿಕವೂ ಮೃತದೇಹ ಹಡಗಿನಲ್ಲೇ ಉಳಿದಿದ್ದು, ಸಮರ್ಪಕ ಸಂರಕ್ಷಣೆ ಇಲ್ಲ. ಒಮಾನ್‌ನ ಡುಕ್ಮ್ ಬಂದರು ವೈಫೈ ಹಾಗೂ ಸಂವಹನ ಸೌಲಭ್ಯಗಳನ್ನು ಸ್ಥಗಿತಗೊಳಿಸಿದೆ. ಅಧಿಕಾರಿಗಳಿಂದ ಸ್ಪಂದನೆ ದೊರೆಯುತ್ತಿಲ್ಲ. ನಾವಿಕರ ಬಗ್ಗೆ ಯಾರು ಕಾಳಜಿ ವಹಿಸುತ್ತಾರೆ?' ಎಂದು ಪ್ರಶ್ನಿಸಿದೆ.

'ಜಾಗತಿಕ ವ್ಯಾಪಾರವನ್ನು ಮುಂದುವರಿಸಲು ನಾವಿಕರು ಶ್ರಮಿಸುತ್ತಿದ್ದಾರೆ. ಆದರೆ ಅವರಿಗೆ ಸಂಬಂಧಿಸದ ಸಂಘರ್ಷಗಳ ನಡುವೆ ವೈದ್ಯಕೀಯ ಆರೈಕೆ ಮತ್ತು ವಾಪಸಾತಿ ವಿಷಯದಲ್ಲಿ ನಿರ್ಲಕ್ಷ್ಯ ಎದುರಾಗುತ್ತಿದೆ. ಸಿಬ್ಬಂದಿಯ ಸ್ಥಳಾಂತರ, ಮೃತದೇಹದ ಸಂರಕ್ಷಣೆ ಹಾಗೂ ಗೌರವಯುತ ವಾಪಸಾತಿಗೆ ತುರ್ತು ಕ್ರಮ ಕೈಗೊಳ್ಳಬೇಕು' ಎಂದು ಸಂಘಟನೆ ಒತ್ತಾಯಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, 'ವೈದ್ಯಕೀಯ ಕಾರಣಗಳಿಂದ ಮೃತಪಟ್ಟ ಭಾರತೀಯ ಪ್ರಜೆ ನಿಶಾಂತ್ ಉಯಿರ್ಥನಾಥನ್ ಅವರ ಕುಟುಂಬ ಸದಸ್ಯರು, ಹಡಗಿನ ಸಿಬ್ಬಂದಿ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಮೃತದೇಹವನ್ನು ಆದಷ್ಟು ಬೇಗ ಹಡಗಿನಿಂದ ಇಳಿಸಿ ಭಾರತಕ್ಕೆ ಕಳುಹಿಸಲು ಪ್ರಯತ್ನಗಳು ನಡೆಯುತ್ತಿವೆ' ಎಂದು ತಿಳಿಸಿದೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries