HEALTH TIPS

ನಟರಾಜನ್ ನಾಮಪತ್ರ ತಿರಸ್ಕೃತಗೊಂಡಿರುವುದು 'ಸೀಟ್ ಚೋರಿ'ಯ ತಾಜಾ ಉದಾಹರಣೆ: ಕಾಂಗ್ರೆಸ್ ಆರೋಪ

 ನವದೆಹಲಿ: ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತವಾದ ಪ್ರಕರಣವನ್ನು 'ಸೀಟ್ ಚೋರಿ'ಯ ಇತ್ತೀಚಿನ ಉದಾಹರಣೆ ಎಂದು ಬಣ್ಣಿಸಿರುವ ಕಾಂಗ್ರೆಸ್, ಈ ಬೆಳವಣಿಗೆಯಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗ (ECI) 'ಅಪರಾಧದಲ್ಲಿ ಪಾಲುದಾರರು' ಎಂದು ಶುಕ್ರವಾರ ಆರೋಪಿಸಿದೆ.


'ಸೀಟ್ ಚೋರಿ'ಯ ಇತ್ತೀಚಿನ ಪ್ರಕರಣದಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗ ಎರಡೂ ಅಪರಾಧದಲ್ಲಿ ಪಾಲುದಾರರಾಗಿವೆ. ನಟರಾಜನ್ ಅವರ ನಾಮಪತ್ರ ತಿರಸ್ಕೃತವು 'ದೋಷಪೂರಿತ ಮತ್ತು ಅವಿವೇಕದ ತರ್ಕ'ದ ಆಧಾರದ ಮೇಲೆ ನಡೆದಿದೆ ಎಂದು ಕಾಂಗ್ರೆಸ್ ಹೇಳಿದೆ.

ಮಧ್ಯಪ್ರದೇಶ ಕಾಂಗ್ರೆಸ್ ನಾಯಕರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೀನಾಕ್ಷಿ ನಟರಾಜನ್, ತಾವು ಫಾರ್ಮ್-26 ಅನ್ನು ಸರಿಯಾಗಿ ಭರ್ತಿ ಮಾಡಿದ್ದು, ಖಾಸಗಿ ದೂರುಗಳನ್ನು ಉಲ್ಲೇಖಿಸಲು ಅದರಲ್ಲಿ ಯಾವುದೇ ಕಾಲಮ್ ಇರಲಿಲ್ಲ ಎಂದು ಹೇಳಿದರು.

'ಅಂತಹ ಮಾಹಿತಿಗಾಗಿ ಕಾಲಮ್ ಇದ್ದಿದ್ದರೆ ಅದರ ವಿವರಗಳನ್ನು ನೀಡುತ್ತಿದ್ದೆ' ಎಂದು ಅವರು ಹೇಳಿದರು.

'ಈ ವಿಷಯವು ಸುಪ್ರೀಂ ಕೋರ್ಟ್ನಲ್ಲಿರುವುದರಿಂದ ಎಲ್ಲ ಅಂಶಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿಯೂ ಲಭ್ಯವಿರುವ ಮಾಹಿತಿಯಂತೆ, ಈ ವಿವಾದದ ಕೇಂದ್ರಬಿಂದುವೇ ಫಾರ್ಮ್-26 ಆಗಿದೆ. ನಾನು ಕೆಲವು ಮಾಹಿತಿಯನ್ನು ದಾಖಲಿಸಿಲ್ಲ ಹಾಗೂ ಸತ್ಯಾಂಶಗಳನ್ನು ಮರೆಮಾಚಿದ್ದೇನೆ ಎಂದು ಆರೋಪಿಸಲಾಗಿದೆ' ಎಂದು ಅವರು ಹೇಳಿದರು.

ಯಾವುದೇ ಕ್ರಿಮಿನಲ್ ಪ್ರಕರಣ ಬಾಕಿ ಇದ್ದರೆ ಅಥವಾ ಶಿಕ್ಷಾರ್ಹ ಅಪರಾಧಕ್ಕೆ ಶಿಕ್ಷೆಯಾಗಿದ್ದರೆ ಅದರ ಮಾಹಿತಿಯನ್ನು ಒದಗಿಸಬೇಕು ಎಂಬುದು ಪ್ರಮುಖ ಅಂಶ ಎಂದು ನಟರಾಜನ್ ಹೇಳಿದರು.

'ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಬಾಕಿ ಇಲ್ಲ. ಕೇವಲ ಒಂದು ಕಾನೂನು ನೋಟಿಸ್ ಮಾತ್ರ ಇದೆ. ಆದ್ದರಿಂದ ಸಂಬಂಧಿತ ಕಾಲಮ್ ಗಳಲ್ಲಿ "ಅನ್ವಯಿಸುವುದಿಲ್ಲ" ಎಂದು ನಮೂದಿಸಿದ್ದೇನೆ. ಆ ನೋಟಿಸ್ ಗೆ ಸಂಬಂಧಿಸಿದ ಸಂಪೂರ್ಣ ಕಾನೂನು ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ ಸೇರಿಸಿದ್ದೇನೆ. ನ್ಯಾಯಾಲಯ ಇನ್ನೂ ಆ ವಿಷಯವನ್ನು ಪರಿಗಣಿಸಿಲ್ಲ. ಹೀಗಿರುವಾಗ ಅಂತಹ ಮಾಹಿತಿಯನ್ನು ದಾಖಲಿಸಬೇಕಾದ ಕಾಲಮ್ ಯಾವುದು ಎಂಬುದರ ಬಗ್ಗೆ ಸ್ಪಷ್ಟತೆ ಅಗತ್ಯ' ಎಂದು ಅವರು ಹೇಳಿದರು.

ಭಾರತದ ರಾಜಕೀಯ ಇತಿಹಾಸದಲ್ಲೇ ರಾಜ್ಯಸಭಾ ಅಭ್ಯರ್ಥಿಯೊಬ್ಬರ ನಾಮಪತ್ರ ತಿರಸ್ಕೃತವಾಗಿರುವುದು ಇದೇ ಮೊದಲ ಘಟನೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಹೇಳಿದರು.

'ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೋರಿದ ಒಗ್ಗಟ್ಟು ಮತ್ತು ಉತ್ಸಾಹದಿಂದ ಬಿಜೆಪಿ ನಾಯಕತ್ವ ಆತಂಕಕ್ಕೊಳಗಾಯಿತು. ಅದರಿಂದಲೇ ಸ್ಥಳೀಯ ಸಂಸ್ಥೆಗಳ ಸರಪಂಚ್ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ರಾಜಕೀಯ ತಂತ್ರಗಳನ್ನು ಬಳಸಲಾಗಿದೆ' ಎಂದು ಜಿತು ಪಟ್ವಾರಿ ಆರೋಪಿಸಿದರು

ದೇಶವು ಚುನಾವಣಾ ನಿರಂಕುಶಾಧಿಕಾರದತ್ತ ಸಾಗುತ್ತಿದೆ ಎಂದು ಉಮಾಂಗ್ ಸಿಂಘರ್ ಆರೋಪಿಸಿದರು. ಅಧಿಕಾರ ಕೇಂದ್ರೀಕರಣ, ಶಾಸಕಾಂಗದ ದುರ್ಬಲ ಮೇಲ್ವಿಚಾರಣೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಮತ್ತು ಪತ್ರಕರ್ತರ ಮೇಲಿನ ಕಿರುಕುಳಗಳು ಹೆಚ್ಚುತ್ತಿವೆ ಎಂದು ಅವರು ಹೇಳಿದರು. ದೇಶದ ಪ್ರಸ್ತುತ ಪರಿಸ್ಥಿತಿ ಕುರಿತು ಗಂಭೀರ ಚಿಂತನೆ ಅಗತ್ಯವಿದೆ ಎಂದರು.ಜೂನ್ 2026ರ ರಾಜ್ಯಸಭಾ ಚುನಾವಣೆ ಇಬ್ಬರು ಅಭ್ಯರ್ಥಿಗಳ ಕಥೆಯಾಗಿದೆ ಎಂದು ಕಾಂಗ್ರೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 'ಒಬ್ಬ ಅಭ್ಯರ್ಥಿ ಪ್ರಧಾನಿ ನರೇಂದ್ರ ಮೋದಿ ಅವರ ಕೋಟ್ಯಧಿಪತಿ ಸ್ನೇಹಿತ ಹಾಗೂ ಕಾರ್ಪೊರೇಟ್ ಹಿತಾಸಕ್ತಿಗಳ ಪ್ರತಿನಿಧಿಯಾಗಿದ್ದರೆ, ಮತ್ತೊಬ್ಬರು ಸಾಮಾನ್ಯ ಕುಟುಂಬದಿಂದ ಬಂದವರು ಮತ್ತು ಸಂವಿಧಾನದ ಮೌಲ್ಯಗಳನ್ನು ಪ್ರತಿನಿಧಿಸುವವರು' ಎಂದು ಹೇಳಿದೆ.

ಮಧ್ಯಪ್ರದೇಶದಲ್ಲಿ ಮೂರನೇ ರಾಜ್ಯಸಭಾ ಸ್ಥಾನ ಗೆಲ್ಲಲು ಬಿಜೆಪಿಗೆ ಅಗತ್ಯ ಸಂಖ್ಯೆಯ ಶಾಸಕರು ಇರಲಿಲ್ಲ. ಅಗತ್ಯ ಸಂಖ್ಯೆಗೆ ಹೋಲಿಸಿದರೆ 10 ಶಾಸಕರು ಕಡಿಮೆ ಇದ್ದರೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು ಎಂದು ಕಾಂಗ್ರೆಸ್ ಹೇಳಿದೆ.

'ಕುದುರೆ ವ್ಯಾಪಾರ ಅಥವಾ ಇತರ ಮಾರ್ಗಗಳ ಮೂಲಕ ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ವಿಭಜಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾದ ಬಳಿಕ, ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ರದ್ದಾಗುವಂತೆ ಮಾಡಲು ಬಿಜೆಪಿ ರಹಸ್ಯ ತಂತ್ರಗಳನ್ನು ಬಳಸಿತು. ನಟರಾಜನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಸಮರ್ಪಕ ಆಧಾರವಿಲ್ಲದೆ ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಹೈದರಾಬಾದ್ನಲ್ಲಿ ಅವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ಅಭ್ಯರ್ಥಿ ಬಹಿರಂಗಪಡಿಸಿಲ್ಲ ಎಂಬುದನ್ನು ನಾಮಪತ್ರ ತಿರಸ್ಕೃತದ ಕಾರಣವಾಗಿ ಉಲ್ಲೇಖಿಸಲಾಗಿದೆ. ಆದರೆ, ಪ್ರಸ್ತುತ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಬಾಕಿ ಇಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ರಿಟರ್ನಿಂಗ್ ಅಧಿಕಾರಿಯ ನಿರ್ಧಾರವು ಯಾವುದೇ ಗಂಭೀರ ವಿಷಯ ಅಥವಾ ತಾಂತ್ರಿಕ ದೋಷವನ್ನು ಆಧರಿಸಿರಲಿಲ್ಲ. ಅದು ಸಂಪೂರ್ಣವಾಗಿ ಆಧಾರರಹಿತ ಹಾಗೂ ಕಲ್ಪಿತ ಸಂಗತಿಗಳ ಮೇಲೆ ನಿಂತಿದೆ ಎಂದು ಕಾಂಗ್ರೆಸ್ ಹೇಳಿದೆ.

'ಮಧ್ಯಪ್ರದೇಶದಲ್ಲಿ ಚುನಾವಣಾ ಆಯೋಗದ ವರ್ತನೆಯನ್ನು ಜಾರ್ಖಂಡ್ನಲ್ಲಿನ ಅದರ ವರ್ತನೆಯೊಂದಿಗೆ ಹೋಲಿಸಿದಾಗ ಪಕ್ಷಪಾತದ ಧೋರಣೆ ಸ್ಪಷ್ಟವಾಗುತ್ತದೆ. ತಮ್ಮ ಅಫಿಡವಿಟ್ನಲ್ಲಿ ಹೆಸರನ್ನು ಸರಿಯಾಗಿ ನಮೂದಿಸದ ಪರಿಮಳ್ ನಾಥ್ವಾನಿ ಅವರಿಗೆ ಫಾರ್ಮ್-26ರ ದೋಷಗಳನ್ನು ಸ್ಪಷ್ಟಪಡಿಸಲು ಮತ್ತು ಸರಿಪಡಿಸಲು ಅವಕಾಶ ನೀಡಲಾಗಿತ್ತು' ಎಂದು ಕಾಂಗ್ರೆಸ್ ತಿಳಿಸಿದೆ.

ಜೂನ್ 18ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಮೀನಾಕ್ಷಿ ನಟರಾಜನ್ ಅವರನ್ನು ಮಧ್ಯಪ್ರದೇಶದಿಂದ ತನ್ನ ಏಕೈಕ ಅಭ್ಯರ್ಥಿಯಾಗಿ ಘೋಷಿಸಿತ್ತು. ಆದರೆ, ಅವರು ಸಲ್ಲಿಸಿದ್ದ ಫಾರ್ಮ್-26ರಲ್ಲಿ ತೆಲಂಗಾಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ನ್ಯಾಯಾಲಯದ ದೂರಿನ ಮಾಹಿತಿಯನ್ನು ಮರೆಮಾಚಿದ್ದಾರೆ ಎಂಬ ಕಾರಣ ನೀಡಿ ಮಂಗಳವಾರ ಚುನಾವಣಾಧಿಕಾರಿ ಅವರ ನಾಮಪತ್ರವನ್ನು ತಿರಸ್ಕರಿಸಿದ್ದರು.

ಈ ಕ್ರಮವನ್ನು ಪ್ರಶ್ನಿಸಿ ನಟರಾಜನ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ಗುರುವಾರ ಚುನಾವಣಾಧಿಕಾರಿ ಬಿಜೆಪಿ ಅಭ್ಯರ್ಥಿಗಳಾದ ತರುಣ್ ಚುಗ್, ರಜನೀಶ್ ಅಗರ್ವಾಲ್ ಹಾಗೂ ಮಹೇಶ್ ಕೆವಾಟ್ ಅವರನ್ನು ರಾಜ್ಯದಿಂದ ಅವಿರೋಧವಾಗಿ ಆಯ್ಕೆಯಾದವರು ಎಂದು ಘೋಷಿಸಿದರು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries