ಕಠ್ಮಂಡು: ಕೀಟನಾಶಕಗಳ ಅತಿ ಬಳಕೆ ಹಾಗೂ ಗಡಿ ಪ್ರದೇಶಗಳಲ್ಲಿ ಕ್ವಾರಂಟೈನ್ ಸೌಲಭ್ಯದ ಕೊರತೆಯ ಕಾರಣದಿಂದಾಗಿ ಭಾರತದಿಂದ ಮಾವಿನ ಹಣ್ಣು ಆಮದು ಮಾಡಿಕೊಳ್ಳುವುದನ್ನು ನೇಪಾಳ ನಿರ್ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಈ ಕ್ರಮದಿಂದಾಗಿ ಸ್ಥಳೀಯ ಮಾರುಕಟ್ಟೆಗಳು ದೇಶೀಯ ಮಾವುಗಳಿಂದ ತುಂಬಿವೆ. ಸ್ಥಳೀಯ ರೈತರಿಗೆ ಉತ್ತಮ ಬೆಲೆಯ ಭರವಸೆ ಮೂಡಿದೆ ಎಂದು ಮಾಧೇಶ್ ಪ್ರಾಂತ್ಯದ ಭೂ ನಿರ್ವಹಣೆ, ಕೃಷಿ ಮತ್ತು ಸಹಕಾರ ಸಚಿವಾಲಯದ ಅಧಿಕಾರಿ ಅಜಯ ಗಯಾವಲಿ ಹೇಳಿದ್ದಾರೆ.
ಸರ್ಕಾರದ ಕ್ರಮವು ಇಲ್ಲಿನ ರೈತರ ಪಾಲಿಗೆ ಸಕಾರಾತ್ಮಕವಾದದ್ದೇ ಆದರೂ, ಮಾವಿನ ಹಣ್ಣಿಗೆ ದೇಶದಾದ್ಯಂತ ಇರುವ ಬೇಡಿಕೆಯನ್ನು ಸ್ಥಳೀಯ ಉತ್ಪಾದನೆಯಿಂದಲೇ ಪೂರೈಸುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾಧೇಶ್ ಪ್ರಾಂತ್ಯದ ಸಿರಹಾ, ಸಪ್ತರಿ, ಧನುಶಾ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತದೆ ಎಂದಿರುವ ಗಯಾವಲಿ, ಸರ್ಕಾರದ ನಿರ್ಬಂಧದಿಂದಾಗಿ ಮಾವಿನ ಹಣ್ಣು ಆಧಾರಿತ ಪಾನೀಯ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ತಯಾರಿಸುವ ಉದ್ದಿಮೆಗಳ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ.
ಎರಡು ತಿಂಗಳಷ್ಟೇ ಮಾವಿನ ಹಣ್ಣಿನ ಉತ್ಪಾದನೆಯಾಗುವುದರಿಂದ, ವರ್ಷವಿಡೀ ಇರುವ ಬೇಡಿಕೆಯನ್ನು ಪೂರೈಸಲು ಭಾರತದಿಂದ ಆಮದು ಮಾಡಿಕೊಳ್ಳುವುದು ನಿರ್ಣಾಯಕವಾಗಲಿದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳಿದ್ದಾರೆ.
'ಭಾರತದಿಂದ ಮಾವಿನ ಹಣ್ಣನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ದೇಶೀಯ ಮಾರುಕಟ್ಟೆಯಲ್ಲಿ ಹಣ್ಣಿನ ಅಭಾವ ಸೃಷ್ಟಿಯಾಗಲಿದೆ' ಎಂದು ಜನಕಪುರಧಾಮದಲ್ಲಿರುವ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಭುವನೇಶ್ವರ ಪುರ್ಬೆ ಹೇಳಿದ್ದಾರೆ. ಈ ಬಗ್ಗೆ 'ದಿ ರೈಸಿಂಗ್ ನೇಪಾಳ' ಪತ್ರಿಕೆ ವರದಿ ಮಾಡಿದೆ.
'ಭಾರತದಿಂದ ಮಾವಿನ ಹಣ್ಣಿನ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣ ನಿರ್ಬಂಧಿಸುವ ಬದಲು, ಕ್ವಾರಂಟೈನ್ ವ್ಯವಸ್ಥೆಯನ್ನು ಬಲಪಡಿಸಬೇಕು. ಸೂಕ್ತ ರೀತಿಯಲ್ಲಿ ಗುಣಮಟ್ಟ ತಪಾಸಣೆ ನಡೆಸಿದ ನಂತರವೇ ಹಣ್ಣುಗಳು ನೇಪಾಳದ ಮಾರುಕಟ್ಟೆಗೆ ಪ್ರವೇಶಿಸುವಂತೆ ಮಾಡಬೇಕು' ಎಂಬುದಾಗಿ ಪುರ್ಬೆ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕಳೆದ ವರ್ಷ ಭಾರತದಿಂದ ಬಾಳೆಹಣ್ಣು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಾಗಿತ್ತು. ಆ ಕ್ರಮಕ್ಕೂ ಮುನ್ನ ಒಂದು ಡಜನ್‌ಗೆ ₹ 120 ರಿಂದ ₹ 150 ಇದ್ದ ಬೆಲೆ, ಏಕಾಏಕಿ ₹ 250ರಿಂದ ₹ 300ಕ್ಕೆ ತಲುಪಿತ್ತು. ಮಾವಿನ ಹಣ್ಣಿನ ದರದ ಸ್ಥಿತಿಯೂ ಹಾಗೆಯೇ ಆಗಲಿದೆ ಎಂಬುದಾಗಿ ಸ್ಥಳೀಯ ಗ್ರಾಹಕರು ಕಳವಳ ವ್ಯಕ್ತಪಡಿಸಿದ್ದಾರೆ.
- ಸ್ಥಳೀಯ ವ್ಯಾಪಾರಿಗಳುಕಠ್ಮಂಡುವಿನಲ್ಲಿ ಸದ್ಯ ಪ್ರತಿ ಕೆ.ಜಿ. ಮಾವಿಗೆ ₹ 100 - 150 ಬೆಲೆ ಇದೆ. ಭಾರತದ ಹಣ್ಣುಗಳ ಆಮದಿಗೆ ಹೇರಿರುವ ನಿರ್ಬಂಧವನ್ನು ಸಡಿಲಿಸದಿದ್ದರೆ, ಮುಂದಿನ ದಿನಗಳಲ್ಲಿ ಬೆಲೆ ಇನ್ನೂ ಹೆಚ್ಚಾಗಲಿದೆ.

