ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಕಾನೂನಿನ ಚೌಕಟ್ಟಿಗೆ ಅನುಗುಣವಾಗಿಯೇ ಪ್ರಮಾಣವಚನ ಸ್ವೀಕರಿಸಬೇಕು ಎಂದು ಕೇರಳಂ ಹೈಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
ಇತ್ತೀಚೆಗೆ ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿರುವ ಬಿಜೆಪಿಯ ಹಲವು ಕೌನ್ಸಿಲರ್‌ಗಳು ವಿವಿಧ ಹೆಸರುಗಳಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.
'ದೇವರು' ಅಥವಾ 'ವಿಧಿಬದ್ಧವಾಗಿ' ಎಂಬುದನ್ನು ಹೊರತುಪಡಿಸಿ ಉಳಿದ ಹೆಸರುಗಳನ್ನು ಉಲ್ಲೇಖಿಸಿದ್ದವರ ಪ್ರಮಾಣವಚನ ಅಮಾನ್ಯವೆಂದು ಆದೇಶಿಸಿದೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಧಿಕಾರದಿಂದ ಇಳಿದು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಹೊಸ ಸರ್ಕಾರ ರಚನೆ, ಸಿಎಂ, ನೂತನ ಸಚಿವರ ಪ್ರಮಾಣವಚನದ ವೇಳೆ ಹಲವರು ದೇವರು, ರೈತ, ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ, ಕೇರಳ ಹೈಕೋರ್ಟ್ ನೀಡಿರುವ ಆದೇಶವು, ಪ್ರಮಾಣವಚನದ ವಿಧಿಬದ್ಧತೆಯ ಬಗ್ಗೆ ಗಮನ ಸೆಳೆದಿದೆ.
ಹಾಗಿದ್ದರೆ, ಜನಪ್ರತಿನಿಧಿಗಳ ಪ್ರತಿಜ್ಞಾವಿಧಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಸಂವಿಧಾನ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ನೋಡೋಣ..
ಪ್ರತಿಜ್ಞಾವಿಧಿ ಸಂಬಂಧಿಸಿದ ಪ್ರಮುಖ ವಿಧಿಗಳಿವು..
ಜನಪ್ರತಿನಿಧಿಗಳು, ನ್ಯಾಯಮೂರ್ತಿಗಳು, ನ್ಯಾಯಾಧೀಶರು, ನ್ಯಾಯಮಂಡಳಿಗಳಿಗೆ ನೇಮಕಗೊಂಡವರು ಪ್ರತಿಜ್ಞಾವಿಧಿ ಸ್ವೀಕರಿಸುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಸಂವಿಧಾನದಲ್ಲಿ ಹಲವು ವಿಧಿಗಳಲ್ಲಿ ಸ್ಪಷ್ಟವಾದ ಉಲ್ಲೇಖಗಳಿವೆ.
ಜನಪ್ರತಿನಿಧಿಗಳು ಯಾವ ಮಾದರಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬುದರ ಬಗ್ಗೆ ಸಂವಿಧಾನದ ಮೂರನೇ ಅನುಸೂಚಿಯಲ್ಲಿ ವಿವರಿಸಲಾಗಿದೆ. ಅದರಂತೆ, ದೇವರ ಹೆಸರಿನಲ್ಲಿ ಇಲ್ಲವೇ ದೃಢೀಕರಣ ಅಥವಾ ಆತ್ಮಸಾಕ್ಷಿಯ ಹೆಸರಿನಲ್ಲಿ ಮಾತ್ರವೇ ಪ್ರಮಾಣ ಸ್ವೀಕರಿಸಲು ಅವಕಾಶವಿದೆ.
ಸಚಿವರು ಪ್ರಮಾಣ ಸ್ವೀಕರಿಸುವ ವೇಳೆ, '.... ಹೆಸರಿನ ನಾನು, ಕಾನೂನಿನ ಮೂಲಕ ಸ್ಥಾಪಿತವಾಗಿರುವ ಭಾರತದ ಸಂವಿಧಾನದ ಮೇಲೆ ನಿಜವಾದ ಶ್ರದ್ಧೆ ಮತ್ತು ನಿಷ್ಠೆ ಹೊಂದಿರುತ್ತೇನೆ; ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಿಹಿಡಿಯುತ್ತೇನೆ; ಸಚಿವನಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧೆಯಿಂದ ಮತ್ತು ಆತ್ಮಸಾಕ್ಷಿಯಂತೆ ನಿರ್ವಹಿಸುತ್ತೇನೆ; ಭಯ, ಪಕ್ಷಪಾತ, ಅನುರಾಗ ಅಥವಾ ದ್ವೇಷವಿಲ್ಲದೆ ಎಲ್ಲರಿಗೂ ನ್ಯಾಯ ಒದಗಿಸುತ್ತೇನೆ' ಎಂದು ಘೋಷಿಸಿಕೊಳ್ಳುತ್ತಾರೆ.
'ಭಾರತಾಂಬೆ' ಹೆಸರಲ್ಲಿ ಪ್ರತಿಜ್ಞೆ: ಕೇರಳಂ ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣ ಅಮಾನ್ಯಮೋದಿ ಖಿo ಡಿಕೆಶಿ: ನಮ್ಮ ನಾಯಕರು ಯಾರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದಾರೆ?
ಯಾವುದೇ ಹುದ್ದೆ ವಹಿಸಿಕೊಳ್ಳುವವರು ಸಂವಿಧಾನದಲ್ಲಿ ನಿಜವಾದ ನಂಬಿಕೆ ಮತ್ತು ನಿಷ್ಠೆ ಹೊಂದಿರುವುದು, ಅದರ ಆಶಯಗಳನ್ನು ಎತ್ತಿಹಿಡಿಯುವುದು, ದೇಶದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ರಕ್ಷಿಸುವುದು, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದು ಮತ್ತು ಅಧಿಕೃತ ಮಾಹಿತಿಯ ಗೌಪ್ಯತೆಯನ್ನು ಕಾಪಾಡಬೇಕು ಎಂಬುದು ಪ್ರತಿಜ್ಞೆಯ ಹಿಂದಿನ ಉದ್ದೇಶ. ಹಾಗಾಗಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಚಿವರು, ಸಂಸದರು ಅಥವಾ ಶಾಸಕರು ಸೇರಿದಂತೆ ಯಾವುದೇ ರಾಜಕೀಯ ನಾಯಕರು ಪ್ರತಿಜ್ಞಾವಿಧಿ ಸ್ವೀಕರಿಸದೆ ತಮ್ಮ ಹುದ್ದೆಯ ಅಧಿಕಾರಗಳನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲ.
ಸಂವಿಧಾನದ ಅನುಚ್ಛೇದ 75(4) ಪ್ರಧಾನಮಂತ್ರಿ ಮತ್ತು ಕೇಂದ್ರ ಸಚಿವರು ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ರಾಷ್ಟ್ರಪತಿಯವರ ಎದುರು ಪ್ರತಿಜ್ಞೆ ಸ್ವೀಕರಿಸಬೇಕು ಎಂಬುದನ್ನು ಹೇಳುತ್ತದೆ.
ಲೋಕಸಭೆ/ರಾಜ್ಯಸಭೆ ಸದಸ್ಯರು ತಮ್ಮ ಸ್ಥಾನಗಳನ್ನು ಅಲಂಕರಿಸುವ ಮುನ್ನ, ಅನುಚ್ಛೇದ 99ರ ಅನುಗುಣವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿ, ಸಚಿವರಿಗೆ ಆಯಾ ರಾಜ್ಯದ ರಾಜ್ಯಪಾಲರು ಅನುಚ್ಛೇದ 164(3) ಪ್ರಕಾರ ಪ್ರತಿಜ್ಞಾವಿಧಿ ಬೋಧಿಸುತ್ತಾರೆ. ಅದೇರೀತಿ, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು ತಮ್ಮ ಸ್ಥಾನವನ್ನು ಅಲಂಕರಿಸುವ ಮುನ್ನ ಅನುಚ್ಛೇದ 188ರ ಅಡಿಯಲ್ಲಿ ಪ್ರತಿಜ್ಞೆ ಕೈಗೊಳ್ಳುತ್ತಾರೆ.

