ಟೆಹರಾನ್: ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಕುರಿತು ಎಚ್ಚರಿಕೆಯಿಂದ ಇರುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮಂಗಳವಾರ ಹೇಳಿದ್ದಾರೆ.
'ಒಪ್ಪಂದದ ಬದ್ಧತೆಗಳು ಮುರಿದುಬಿದ್ದ ಇತಿಹಾಸ ನಮ್ಮ ಮುಂದಿದೆ. ಕರಡುಗಳನ್ನು ಹರಿದುಹಾಕಿದ ನಿದರ್ಶನಗಳೂ ಇವೆ.
ಇವೆಲ್ಲವೂ ನಮ್ಮ ಮನಸ್ಸಿನಲ್ಲಿವೆ' ಎನ್ನುವ ಮೂಲಕ, ಎಚ್ಚರಿಕೆಯ ನಡೆ ಅನುಸರಿಸುವುದಾಗಿ ತಿಳಿಸಿದ್ದಾರೆ.
ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದವು ಸದ್ಯಕ್ಕೆ ಯುದ್ಧವನ್ನು ಕೊನೆಗೊಳಿಸಿದೆ. ಎರಡು ತಿಂಗಳೊಳಗೆ ಅಂತಿಮ ಒಪ್ಪಂದ ಏರ್ಪಡಲಿದೆ ಎಂದು ವಿದೇಶಾಂಗ ಇಲಾಖೆಯ ಉಪ ಸಚಿವ ಕಝೆಮ್ ಘರಿಬಬಾದಿ ಹೇಳಿದ್ದಾರೆ.
ಒಪ್ಪಂದವನ್ನು ವಿಜಯವೆಂದೇ ಪರಿಗಣಿಸಿರುವ ಇರಾನ್ ಸೇನೆ, ಇದು ಅಮೆರಿಕ ಮತ್ತು ಇಸ್ರೇಲ್‌ಗೆ ಮುಖಭಂಗವನ್ನುಂಟು ಮಾಡಿದೆ ಎಂದು ಹೇಳಿದೆ. ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಪಶ್ಚಿಮ ಏಷ್ಯಾ ಭಾಗದಲ್ಲಿ ಇದೊಂದು ದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ.
ನೆತನ್ಯಾಹು ಅಸಮಾಧಾನ
ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಈ ಒಪ್ಪಂದದ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಸಮಾಧಾನ ಹೊರಹಾಕಿದ್ದಾರೆ. 'ಹೋರಾಟ ಇಲ್ಲಿಗೇ ನಿಂತಿಲ್ಲ' ಎನ್ನುವ ಮೂಲಕ ಒಪ್ಪಂದದಂತೆ ನಡೆದುಕೊಳ್ಳುವ ಬಗ್ಗೆ ಅನುಮಾನ ಮೂಡಿಸಿದ್ದಾರೆ.
ಫೆಬ್ರುವರಿ 28ರಂದು ಇರಾನ್ ಮೇಲೆ ಜಂಟಿ ದಾಳಿ ನಡೆಸಿ, ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಿದಾಗ ಅಮೆರಿಕ ಮತ್ತು ಇಸ್ರೇಲ್ ಜೊತೆಯಾಗಿದ್ದವು.

