ಹೈದರಾಬಾದ್: ಇತ್ತೀಚೆಗೆ ಪೋಷಕರಿಗೆ ಆಂಗ್ಲ ಮಾಧ್ಯಮದ ವ್ಯಾಮೋಹ ಹೆಚ್ಚಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಅನೇಕರು ಹಿಂದೇಟು ಹಾಕುತ್ತಾರೆ. ಕಾನ್ವೆಂಟ್ ಆಧಾರಿತ ಶಿಕ್ಷಣದತ್ತ ಪೋಷಕರು ಒಲವು ತೋರುತ್ತಿದ್ದಾರೆ. ಆದರೆ, ಇಲ್ಲೊಂದೆಡೆ ಗ್ರಾಮಸ್ಥರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುವ ನಿರ್ಣಯ ಅಂಗೀಕರಿಸಿದ್ದಾರೆ.
ತೆಲಂಗಾಣದ ನಿರ್ಮಲ್ ಜಿಲ್ಲೆಯ ಲಕ್ಷ್ಮಣಚಂದ ಮಂಡಲದ ಬಾಬಾಪುರ ಗ್ರಾಮಸ್ಥರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವ ಬದಲು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಸರ್ವಾನುಮತದಿಂದ ನಿರ್ಧರಿಸಿದ್ದಾರೆ.
ತಮ್ಮ ಗ್ರಾಮದಲ್ಲಿ ಶಿಕ್ಷಣದ ಭವಿಷ್ಯದ ಕುರಿತು ಗ್ರಾಮಸ್ಥರು ಚರ್ಚಿಸಿದ್ದಾರೆ. ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರೈತ ಸಮುದಾಯದವರೇ ಹೆಚ್ಚಾಗಿರುವ ಗ್ರಾಮಸ್ಥರು, ಪಂಚಾಯಿತಿಯಲ್ಲಿ ವಿವರವಾದ ಚರ್ಚೆಗಳನ್ನು ನಡೆಸಿ ಹಳ್ಳಿಯ ಎಲ್ಲಾ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕೆಂದು ನಿರ್ಣಯವನ್ನು ಅಂಗೀಕರಿಸಿದರು. ಸರ್ಕಾರಿ ಶಾಲೆಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬಲ್ಲವು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮಕ್ಕಳು ಮತ್ತು ಗ್ರಾಮದ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ ಎಂದು ಗ್ರಾಮದ ಸರಪಂಚ್ ಪಡಿಗೇಲ ಲಕ್ಷ್ಮಿ ಹೇಳಿದರು. ವಿದ್ಯಾರ್ಥಿಗಳ ಸಂಖ್ಯೆಯಲ್ಲಿನ ಹೆಚ್ಚಳವು ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅವುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
ಸರ್ಕಾರಿ ಶಾಲಾ ಶಿಕ್ಷಕರ ಅನುಭವವನ್ನು ಅವರು ಶ್ಲಾಘಿಸಿದರು. ದೂರದ ತೆಲಂಗಾಣ ಹಳ್ಳಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸರ್ಕಾರಿ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಎತ್ತಿ ತೋರಿಸಿದರು. ಗ್ರಾಮಸ್ಥರ ಈ ನಿರ್ಧಾರವನ್ನು ಶಿಕ್ಷಣ ತಜ್ಞರು ಮತ್ತು ಸ್ಥಳೀಯ ನಿವಾಸಿಗಳು ವ್ಯಾಪಕವಾಗಿ ಮೆಚ್ಚಿಕೊಂಡಿದ್ದಾರೆ. ಇದು ತೆಲಂಗಾಣದಾದ್ಯಂತದ ಇತರ ಹಳ್ಳಿಗಳಿಗೂ ಮಾದರಿಯಾಗಬಹುದು ಎಂದು ಅವರು ಹೇಳಿದ್ದಾರೆ.
ಈ ಉಪಕ್ರಮವನ್ನು ಸರ್ಕಾರಿ ಶಿಕ್ಷಣದ ಪರವಾಗಿ ನೀಡಲಾದ ಬಲವಾದ ಸಂದೇಶ ಹಾಗೂ ಸಾರ್ವಜನಿಕ ಸಂಸ್ಥೆಗಳನ್ನು ಬಲಪಡಿಸುವಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ರಾಜಸ್ಥಾನದಲ್ಲಿ ಬೇಸಿಗೆ ರಜೆವಿಸ್ತರಣೆ
ರಾಜಸ್ಥಾನ ಸರ್ಕಾರವು 2026-27ರ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ತಿದ್ದುಪಡಿ ಮಾಡಿದೆ. ಸರ್ಕಾರಿ ಶಾಲೆಗಳಿಗೆ ಬೇಸಿಗೆ ರಜೆಯ ಅವಧಿಯನ್ನು ವಿಸ್ತರಿಸಿದೆ. ರಾಜ್ಯದ ಶಾಲೆಗಳಲ್ಲಿ ಬೇಸಿಗೆ ರಜೆಗಳು ಈಗ 35 ದಿನಗಳ ಬದಲಿಗೆ 43 ದಿನಗಳವರೆಗೆ ಇರುತ್ತವೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪರಿಷ್ಕೃತ ಆದೇಶಗಳನ್ನು ಹೊರಡಿಸಿದೆ.
ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಬೇಸಿಗೆ ರಜೆಯನ್ನು ಮೇ 17 ರಿಂದ ಜೂನ್ 20, 2026 ರವರೆಗೆ ನಿಗದಿಪಡಿಸಲಾಗಿತ್ತು. ಈಗ ಅದನ್ನು ಜೂನ್ 28, 2026 ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಚ್ಚುವರಿಯಾಗಿ ಎಂಟು ದಿನಗಳ ರಜೆಯ ಪ್ರಯೋಜನವನ್ನು ಪಡೆಯಲಿದ್ದಾರೆ.
ಬೇಸಿಗೆ ರಜೆ ಕಡಿತ ಮತ್ತು ಅಧಿಕೃತ ರಜೆ ರದ್ದುಗೊಳಿಸುವುದರ ವಿರುದ್ಧ ವಿವಿಧ ಶಿಕ್ಷಕರ ಸಂಘಟನೆಗಳು ಆಂದೋಲನ ನಡೆಸಿದ್ದವು. ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಶಿಕ್ಷಣ ಸಚಿವರು ಅವರ ಬೇಡಿಕೆಗಳ ಕುರಿತು ಚರ್ಚಿಸಿದರು. ಚರ್ಚೆಯ ನಂತರ, ಜೂನ್ 28 ರವರೆಗೆ ಬೇಸಿಗೆ ರಜೆಯನ್ನು ವಿಸ್ತರಿಸಲು ಮತ್ತು ಸಂಸ್ಥೆಗಳ ಮುಖ್ಯಸ್ಥರಿಗೆ ಅಧಿಕೃತ ರಜೆಯನ್ನು ಪುನಃಸ್ಥಾಪಿಸಲು ಒಪ್ಪಂದಕ್ಕೆ ಬರಲಾಯಿತು. ರಾಜ್ಯ ಉಪ ಕಾರ್ಯದರ್ಶಿ ಅಲೋಕ್ ಜೈನ್ ಹೊರಡಿಸಿದ ಆದೇಶದಲ್ಲಿ ಪರಿಷ್ಕೃತ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೆ ತರಲಾಗುವುದು ಎಂದು ತಿಳಿಸಲಾಗಿದೆ.

