ಕೋಲಾಘಾಟ್: ಟಿಎಂಸಿಯ ಭಿನ್ನಮತೀಯ ಸಂಸದರಾದ ಜೂನ್ ಮಾಲಿಯಾ ಮತ್ತು ದೀಪಕ್ ಅಧಿಕಾರಿ (ದೇವ್) ಅವರು ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ನಡೆದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಡಳಿತಾತ್ಮಕ ಸಭೆಯಲ್ಲಿ ಮಂಗಳವಾರ ಭಾಗಿಯಾಗಿದ್ದರು.
ಟಿಎಂಸಿ ಸಂಸದೀಯ ಘಟಕದಲ್ಲಿ ಬಿರುಕು ಮೂಡಿರುವ ನಡುವೆಯೇ ಅವರು ಸಭೆಯಲ್ಲಿ ಭಾಗಿಯಾಗಿದ್ದರು.
ಮೇದಿನಿಪುರ ಸಂಸದೆ ಮಾಲಿಯಾ ಮತ್ತು ಘಾಟಾಲ್ ಸಂಸದ ದೇವ್ ಅವರು ಟಿಎಂಸಿ ಬಂಡಾಯ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ಸಭೆಯಲ್ಲಿ ಬಂಡಾಯ ಶಾಸಕಿ ಶೆವುಲಿ ಸಾಹಾ ಅವರೂ ಪಾಲ್ಗೊಂಡಿದ್ದರು.
'ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ. ಹಾಗಾಗಿ ಮುಖ್ಯಮಂತ್ರಿ ಅವರ ಸಭೆಯಲ್ಲಿ ಭಾಗಿಯಾಗಿದ್ದೆ' ಎಂದು ಸಹಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
'ವಿರೋಧ ಪಕ್ಷಗಳ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗಿಯಾಗುತ್ತಿರುವುದು ನಿಜವಾದ ಬದಲಾವಣೆಯ ಸೂಚಕ' ಎಂದು ಬಿಜೆಪಿ ಶಾಸಕ ಅಶೋಕ್ ದಿಂಡಾ ಹೇಳಿದ್ದಾರೆ.
'ಇದಕ್ಕೂ ಮೊದಲು ಟಿಎಂಸಿ ಸರ್ಕಾರವು ವಿರೋಧ ಪಕ್ಷಗಳ ಸಂಸದರು ಮತ್ತು ಶಾಸಕರಿಗೆ ಆಡಳಿತಾತ್ಮಕ ಸಭೆಗೆ ಆಹ್ವಾನ ನೀಡುತ್ತಿರಲಿಲ್ಲ. ಆದರೆ ನಮ್ಮ ಸರ್ಕಾರವು ಪಕ್ಷಾತೀತವಾಗಿ ಎಲ್ಲರಿಗೂ ಆಹ್ವಾನ ನೀಡುತ್ತಿದೆ' ಎಂದಿದ್ದಾರೆ.
ಟಿಎಂಸಿ ನಾಯಕ ಸಬ್ಯಸಾಚಿ ಬಂಧನ
ಕೋಲ್ಕತ್ತ: ಸುಲಿಗೆ ಮತ್ತು ಬೆದರಿಕೆ ಆರೋಪದ ಮೇಲೆ ಟಿಎಂಸಿ ನಾಯಕ ಸಬ್ಯಸಾಚಿ ದತ್ ಅವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಬಿಧಾನ್‌ನಗರ ನಗರ ಪಾಲಿಕೆಯ ಮಾಜಿ ಮುಖ್ಯಸ್ಥ ದತ್ ಅವರನ್ನು ಪಶ್ಚಿಮ ಬಂಗಾಳದ ಉತ್ತರ ಪರಗಣ 24ನಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಗಿದೆ. ನ್ಯಾಯಾಲಯವು ದತ್ ಅವರನ್ನು ಐದು ದಿನ ಪೊಲೀಸ್ ವಶಕ್ಕೆ ನೀಡಿದೆ ಎಂದು ತಿಳಿಸಿದರು.
ಉದ್ಯಮಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿ ಬಂಧಿಸಿದ್ದಾರೆ ಎಂದರು. ದತ್ ಅವರು 2026ರ ವಿಧಾನಸಭೆ ಚುನಾವಣೆ ವೇಳೆ ಬಾರಾಸತ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದಕ್ಕೂ ಮೊದಲು 2019ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಒಂದು ವರ್ಷದ ಬಳಿಕ ಟಿಎಂಸಿಗೆ ಹಿಂದಿರುಗಿದ್ದರು.
ರಾಜಕೀಯ ನೈತಿಕತೆಯ ಅಧಃಪತನ
ನವದೆಹಲಿ: ಪಕ್ಷದ ಬಂಡಾಯ ಸಂಸದರ ವಿರುದ್ಧ ಟಿಎಂಸಿ ನಾಯಕರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ಕೀರ್ತಿ ಆಜಾದ್ ಅವರು ಮಂಗಳವಾರ ವಾಗ್ದಾಳಿ ನಡೆಸಿದರು.
ಪಕ್ಷದ ಕಾರ್ಯಕರ್ತರು ಕಿರುಕುಳ ಮತ್ತು ರಾಜಕೀಯ ದಾಳಿ ಎದುರಿಸುತ್ತಿರುವ ಸಂದರ್ಭದಲ್ಲಿ ಅವರನ್ನು ಕೈಬಿಟ್ಟು ಬಿಜೆಪಿ ಜೊತೆ ಸಖ್ಯ ಬೆಳೆಸುತ್ತಿರುವ ಸಂಸದರಲ್ಲಿ ರಾಜಕೀಯ ನೈತಿಕತೆಯ ಕೊರತೆ ಇದೆ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಯಾನರ್ಜಿ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವ ಸುಖೇಂದು ಶೇಖರ್ ರಾಯ್ ಅವರ ಹೆಸರನ್ನು ಉಲ್ಲೇಖಿಸಿ 'ಪಕ್ಷದ ವಿರುದ್ಧ ಅಸಮಾಧಾನ ಇದ್ದರೆ ರಾಯ್ ಅವರ ಹಾದಿಯಲ್ಲಿಯೇ ನಡೆಯಬೇಕು' ಎಂದು ಹೇಳಿದರು.

