HEALTH TIPS

ಜೂನ್‌ ತಿಂಗಳ ಮಳೆ ಪ್ರಮಾಣ 126 ವರ್ಷಗಳಲ್ಲೇ ಅತ್ಯಂತ ಕಳಪೆ ಮಟ್ಟಕ್ಕೆ!

ನವದೆಹಲಿ: ದೇಶದಲ್ಲಿ ಜೂನ್ ತಿಂಗಳ ಮಳೆ ಪ್ರಮಾಣವು 126 ವರ್ಷಗಳಲ್ಲೇ ಮೂರನೇ ಅತ್ಯಂತ ಕಳಪೆ ಮಟ್ಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ದೇಶದಾದ್ಯಂತ ಸೋಮವಾರದವರೆಗೆ ಕೇವಲ 92.1 ಮಿಲಿಮೀಟರ್ ಮುಂಗಾರು ಮಳೆಯಾಗಿದ್ದು, ಶೇಕಡ 42ರಷ್ಟು ಕೊರತೆ ಹೊಂದಿದೆ.

1901ರಿಂದ ಈಚೆಗೆ ಜೂನ್ ತಿಂಗಳ ಮಳೆ ಪ್ರಮಾಣವು 100 ಮಿಲಿಮೀಟರ್‌ಗಿಂತ ಕಡಿಮೆಯಿದ್ದದ್ದು ಕೇವಲ ನಾಲ್ಕು ಬಾರಿ ಮಾತ್ರ.

ಇದರಲ್ಲಿ 2009 ಅತ್ಯಂತ ಕಳಪೆ ವರ್ಷ ಆಗಿದ್ದು, ಆಗ ದೇಶದಲ್ಲಿ ಕೇವಲ 87.5 ಮಿಲಿಮೀಟರ್‌ ಮಳೆಯಾಗಿತ್ತು. ಬಳಿಕ 1905ರಲ್ಲಿ 92.3 ಮಿಮೀ ಮಳೆಯಾಗಿತ್ತು. ಇಂದು ಈ ತಿಂಗಳು ಕೊನೆಗೊಳ್ಳುವುದರಿಂದ, ಈ ಬಾರಿಯ ಜೂನ್ ತಿಂಗಳು ಅತ್ಯಂತ ಕಡಿಮೆ ಮಳೆಯಾದ ತಿಂಗಳಾಗುವ ಸಾಧ್ಯತೆಗಳಿವೆ.

ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ದಾಖಲೆಗಳ ಪ್ರಕಾರ, ಜೂನ್ ಮಳೆಯು 100 ಮಿಮೀಗಿಂತ ಕಡಿಮೆಯಿದ್ದ ಇತರ ಎರಡು ವರ್ಷಗಳೆಂದರೆ 2014 (93 ಮಿಮೀ) ಮತ್ತು 1926 (97.4 ಮಿಮೀ). ಜೂನ್‌ನಲ್ಲಿ ಕಳಪೆ ಮಳೆಯಾಗಿದ್ದ ಇನ್ನುಳಿದ ಮೂರು ವರ್ಷಗಳೆಂದರೆ 1902 (109 ಮಿಮೀ), 1912 (106.8 ಮಿಮೀ) ಮತ್ತು 1923 (101.7 ಮಿಮೀ).

ದೀರ್ಘಾವಧಿಯ ಸರಾಸರಿ ಜೂನ್ ಮಳೆ ಪ್ರಮಾಣವು 165 ಮಿಮೀಗಿಂತ ಹೆಚ್ಚಿರುತ್ತದೆ ಎಂದು ಐಎಂಡಿ ತಿಳಿಸಿದೆ.

ಈ ವರ್ಷ ನೈರುತ್ಯ ಮುಂಗಾರು ತಡವಾಗಿ ಆಗಮಿಸಿತಲ್ಲದೆ, ನಡುವೆ 11 ದಿನಗಳ ಕಾಲ ಸ್ಥಗಿತಗೊಂಡಿತ್ತು. ಕೃಷಿ ದೃಷ್ಟಿಯಿಂದ ಉತ್ತರ ಪ್ರದೇಶ, ಮಧ್ಯಪ್ರದೇಶದ ಮತ್ತು ಗುಜರಾತ್ ಸೇರಿದಂತೆ ಮಧ್ಯ, ಉತ್ತರ ಮತ್ತು ಪಶ್ಚಿಮ ಭಾರತಕ್ಕೆ ಇನ್ನೂ ಪ್ರವೇಶಿಸಿಲ್ಲ.

ಮುಂಗಾರು ಪ್ರವೇಶಿಸಿದರೂ ಮಹಾರಾಷ್ಟ್ರ, ಒಡಿಶಾ, ಬಿಹಾರ, ಛತ್ತೀಸಗಢ ಮತ್ತು ತೆಲಂಗಾಣದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

ಜೂನ್ 27ರಂದು ರಾಷ್ಟ್ರ ರಾಜಧಾನಿ ದೆಹಲಿಗೆ ಮುಂಗಾರು ಪ್ರವೇಶಿಸಬೇಕಿತ್ತು. ಆದರೆ, ಅದು ಆಗಿಲ್ಲ. ಜುಲೈ ಮೊದಲ ವಾರದಲ್ಲಿ ದೆಹಲಿಯಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಆದಾಗ್ಯೂ, ಮುಂಗಾರು ಚುರುಕುಗೊಂಡರೂ ಅದು ದೀರ್ಘಕಾಲ ಉಳಿಯಲಾರದು ಎಂದು ಹಿರಿಯ ಹವಾಮಾನ ತಜ್ಞರೊಬ್ಬರು ತಿಳಿಸಿದ್ದಾರೆ.

ಪ್ರಬಲ 'ಎಲ್ ನಿನೊ' ಉಂಟಾಗುವ ಭೀತಿಯಿಂದಾಗಿ ಐಎಂಡಿ ಕಳೆದ ತಿಂಗಳು ತನ್ನ ದೀರ್ಘಾವಧಿಯ ಮುಂಗಾರು ಮುನ್ಸೂಚನೆಯನ್ನು ಜೂನ್ ಮತ್ತು ಸೆಪ್ಟೆಂಬರ್ ನಡುವಿನ ಸರಾಸರಿ ಮಳೆಯ ಶೇಕಡ 90ಕ್ಕೆ ಇಳಿಸಿತ್ತು. ಮುಂಗಾರು ಕೊರತೆಯಾಗಬಹುದಾದ ಎಚ್ಚರಿಕೆಗಳು ರೈತರಲ್ಲಿ ಆತಂಕ ಮೂಡಿಸಿವೆ.

ಜೂನ್‌ನಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ, ಮಳೆಯ ಹಂಚಿಕೆಯನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗಿರುವುದರಿಂದ ಈಗಲೇ ಆತಂಕ ಪಡುವುದು ಅನಗತ್ಯ ಎನ್ನುತ್ತಾರೆ ಹವಾಮಾನ ತಜ್ಞರು.

'ಮುಂಗಾರು ಪ್ರವೇಶಿಸಿರುವ ರಾಜ್ಯಗಳನ್ನು ಗಮನಿಸಿದರೆ, ಇದುವರೆಗೆ ಉತ್ತಮ ಮಳೆಯಾಗಿದೆ. ಅಲ್ಲದೆ, ಕಳೆದ ವರ್ಷ ಹೆಚ್ಚುವರಿ ಮಳೆಯಾಗಿದ್ದರಿಂದ ಅಂತರ್ಜಲ ಮತ್ತು ಜಲಾಶಯಗಳ ಸ್ಥಿತಿ ಪರವಾಗಿಲ್ಲ' ಎಂದು ಐಎಂಡಿಯ ಮಾಜಿ ಮಹಾನಿರ್ದೇಶಕ ಕೆ.ಜೆ. ರಮೇಶ್ 'ಡೆಕ್ಕನ್ ಹೆರಾಲ್ಡ್'ಗೆ ತಿಳಿಸಿದ್ದಾರೆ.

2015 ಪ್ರಬಲ 'ಎಲ್ ನಿನೊ' ವರ್ಷವಾಗಿದ್ದರೂ, ಮುಂಗಾರು ಹಂಗಾಮು ಶೇಕಡ 14ರಷ್ಟು ಕೊರತೆಯೊಂದಿಗೆ ಕೊನೆಗೊಂಡಾಗ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಕೇವಲ 12 ಲಕ್ಷ ಟನ್‌ಗಳಷ್ಟು ಕೊರತೆಯಾಗಿತ್ತು ಎಂದು ರಮೇಶ್ ಹೇಳಿದ್ದಾರೆ.

'ಪಾಸಿಟಿವ್ ಇಂಡಿಯನ್ ಓಷನ್ ಡೈಪೊಲ್' (ಪಿಐಒಡಿ) ಎಲ್ ನಿನೊದ ದುಷ್ಪರಿಣಾಮಗಳನ್ನು ಸ್ವಲ್ಪ ಮಟ್ಟಿಗೆ ತಡೆದಿತ್ತು. 2015-16ರಲ್ಲಿ ಕೇಂದ್ರ ಸರ್ಕಾರದ ಗುರಿಗೆ ಹೋಲಿಸಿದರೆ 11.82 ಮಿಲಿಯನ್ ಟನ್ ಅಥವಾ ಶೇಕಡಾ 4.5ರಷ್ಟು ಆಹಾರ ಧಾನ್ಯ ಉತ್ಪಾದನೆಯ ಕೊರತೆ ಅನುಭವಿಸಿತ್ತು.

ಈ ಬಾರಿ ಕೇಂದ್ರ ಕೃಷಿ ಸಚಿವಾಲಯವು ದುರ್ಬಲ ಮುಂಗಾರಿನಿಂದ ಬಾಧಿತವಾಗಬಹುದಾದ ಸುಮಾರು 315 ಸೂಕ್ಷ್ಮ ಜಿಲ್ಲೆಗಳನ್ನು ಗುರುತಿಸಿದೆ. ಇವುಗಳಲ್ಲಿ 111 ಜಿಲ್ಲೆಗಳನ್ನು ಹೆಚ್ಚಿನ ಆದ್ಯತೆಯ ವಿಭಾಗಕ್ಕೆ ಸೇರಿಸಲಾಗಿದ್ದು, ಅಲ್ಲಿ ನೀರಾವರಿ ವ್ಯಾಪ್ತಿ ಶೇಕಡ 25ಕ್ಕಿಂತ ಕಡಿಮೆಯಿದೆ. ಇನ್ನುಳಿದ 76 ಜಿಲ್ಲೆಗಳು ಮಧ್ಯಮ ಆದ್ಯತೆಯ ವಿಭಾಗಕ್ಕೆ ಒಳಪಟ್ಟಿದ್ದು, ಅಲ್ಲಿ ನೀರಾವರಿ ವ್ಯಾಪ್ತಿ ಶೇಕಡ 25-50ರಷ್ಟಿದೆ.

ಈ ಜಿಲ್ಲೆಗಳಲ್ಲಿ ಹೆಚ್ಚಿನವು ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ಕರ್ನಾಟಕ, ಬಿಹಾರ, ಜಾರ್ಖಂಡ್, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾ ಸೇರಿದಂತೆ 12 ರಾಜ್ಯಗಳಲ್ಲಿ ಹರಡಿಕೊಂಡಿವೆ.

ದೆಹಲಿಯ ಹಲವು ಕಡೆಗಳಲ್ಲಿ ಬಿಸಿಗಾಳಿಯ ವಾತಾವರಣ ಕಂಡುಬಂದಿದೆ. ಭಾನುವಾರ ಮತ್ತು ಸೋಮವಾರ ಹರಿಯಾಣ ಮತ್ತು ದೆಹಲಿಯ ಕೆಲವೆಡೆ ಗುಡುಗು ಸಹಿತ ಮಳೆಯಾಗಿರುವುದರಿಂದ ಇಂದು (ಮಂಗಳವಾರ) ಮಳೆ ಮುಂದುವರಿಯುವ ಸಾಧ್ಯತೆಯಿಲ್ಲ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries