ಮುಝಪ್ಫರಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ) ರವಿವಾರ ಭಾರಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಒಬ್ಬರು ಮೃತಪಟ್ಟಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ.
ಸಂಪರ್ಕ ಸೇವೆಗಳ ಮರುಸ್ಥಾಪನೆ, ಆಹಾರ ಮತ್ತು ಔಷಧಿಗಳ ನಿರಂತರ ಪೂರೈಕೆ, ಬಂಧಿತ ನಾಯಕರ ಬಿಡುಗಡೆ ಹಾಗೂ 38 ಅಂಶಗಳ ಲಿಖಿತ ಒಪ್ಪಂದದ ಅನುಷ್ಠಾನಕ್ಕೆ ಆಗ್ರಹಿಸಿ ಸಾವಿರಾರು ಜನರು ರಸ್ತೆಗಿಳಿದು ಪ್ರತಿಭಟಿಸಿದರು.
ಅನ್ಬ್ ಪ್ರದೇಶದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಪೊಲೀಸರು ಮತ್ತು ಗಡಿ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ ಮತ್ತು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮುಝಪ್ಫರಾಬಾದ್, ರಾವಲಕೋಟ್, ಮಿರ್ಪುರ್, ದಡ್ಯಾಲ್, ದೇರಾಕೋಟ್, ಜೀರೋ ಪಾಯಿಂಟ್, ತಿಯಾತ್ರಿ ನೋಟ್ ಮತ್ತು ಸರೋಸಾಗಳಲ್ಲಿ ಭಾರಿ ಜನಸಮೂಹ ಜಮಾಯಿಸಿತ್ತು ಎಂದು ವರದಿಯಾಗಿದೆ.

