ಚೆನ್ನೈ/ ತಿರುವನಂತಪುರಂ: ವಸತಿ ಯೋಜನೆ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ನಿರ್ಮಾಣ ವಸ್ತುಗಳು ಸಾಕಷ್ಟು ಲಭ್ಯತೆಯಿರುವುದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಪುದುಚೇರಿ ಹೊರತುಪಡಿಸಿ, ನೆರೆಯ ರಾಜ್ಯಗಳಿಗೆ ಮೂರು ತಿಂಗಳ ಕಾಲ ಗಟ್ಟಿ ಶಿಲೆಗಳನ್ನು ಸಾಗಣೆ ಮಾಡುವುದನ್ನು ತಮಿಳುನಾಡು ಸರ್ಕಾರವು ನಿಷೇಧಿಸಿದೆ.
ಜಲ್ಲಿಕಲ್ಲು, ಎಂ-ಸ್ಯಾಂಡ್, ಉರುಳು ಕಲ್ಲು, ಕಟ್ಟಡ ಹಾಗೂ ರಸ್ತೆ ನಿರ್ಮಾಣಕ್ಕೆ ಬಳಸಲು ಕಲ್ಲುಗಳನ್ನು ಸಾಗಣೆ ಮಾಡುವುದನ್ನು ನಿಷೇಧಿಸಲಾಗಿದೆ. ಕೇರಳ ಹಾಗೂ ಕರ್ನಾಟಕಕ್ಕೆ ತಮಿಳುನಾಡಿನಿಂದ ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ಸಾಗಣೆ ಮಾಡಲಾಗುತ್ತಿತ್ತು.
ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರಮುಖ ಹೆದ್ದಾರಿ ಯೋಜನೆ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಮೂಲ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲು ಗಟ್ಟಿಶಿಲೆ ಹಾಗೂ ನಿರ್ಮಾಣ ವಸ್ತುಗಳನ್ನು ಅನಿಯಂತ್ರಿತವಾಗಿ ಪೂರೈಸಲು ಸರ್ಕಾರವು ತನ್ನ ನಿರ್ಧಾರವನ್ನು ಸಡಿಲಿಸಬೇಕು ಎಂದು ಕೇರಳ ಸರ್ಕಾರವು ತಮಿಳುನಾಡು ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಹೆಚ್ಚುತ್ತಿರುವ ಮೂಲಸೌಕರ್ಯ, ವಸತಿ ಹಾಗೂ ಕೈಗಾರಿಕಾ ಅಭಿವೃದ್ಧಿ ಚಟುವಟಿಕೆಗಳಿಂದ ರಾಜ್ಯದ ಕ್ವಾರಿಗಳಲ್ಲಿ ಉತ್ಪಾದನೆಯಾಗುತ್ತಿರುವ ಗಟ್ಟಿಶಿಲೆ ಹಾಗೂ ಜಲ್ಲಿಯು ಸ್ಥಳೀಯ ಬೇಡಿಕೆಯನ್ನು ಪೂರೈಸುವಷ್ಟಿದೆ. ಹೀಗಾಗಿ, ಹೊರರಾಜ್ಯಗಳಿಗೆ ಸಾಗಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಸರ್ಕಾರದ ಪರವಾಗಿ ಆದೇಶ ಹೊರಡಿಸಿರುವ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

