HEALTH TIPS

Madhya Pradesh | ಸ್ವಘೋಷಿತ ಗೋರಕ್ಷಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶೆ ತಬಸ್ಸುಮ್ ಖಾನ್ ಗೆ ಬೆದರಿಕೆ: ಪೊಲೀಸ್ ರಕ್ಷಣೆ ನೀಡಲು ಹೈಕೋರ್ಟ್ ಆದೇಶ

 ಭೋಪಾಲ್: ಜಾನುವಾರು ಕಳ್ಳಸಾಗಣೆ ಆರೋಪದಡಿ ಟ್ರಕ್ ಚಾಲಕನ ಹತ್ಯೆ ಪ್ರಕರಣದಲ್ಲಿ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬಳಿಕ ಬೆದರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗೆ ಗುರಿಯಾಗಿರುವ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರಿಗೆ ಪೊಲೀಸ್ ರಕ್ಷಣೆ ಒದಗಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಆದೇಶಿಸಿದೆ ಎಂದು  barandbench.com ವರದಿ ಮಾಡಿದೆ.


ನ್ಯಾಯಾಂಗ ಅಧಿಕಾರಿಯ ವಿರುದ್ಧದ ಬೆದರಿಕೆಗಳು ನ್ಯಾಯಾಂಗ ಸ್ವಾತಂತ್ರ್ಯವನ್ನು ನೇರವಾಗಿ ದುರ್ಬಲಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿಯಿಂದ ವೈಯಕ್ತಿಕ ಪ್ರಮಾಣಪತ್ರಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ.

ನ್ಯಾಯಮೂರ್ತಿಗಳಾದ ವಿವೇಕ್ ಅಗರ್ವಾಲ್ ಮತ್ತು ಅವನೀಂದ್ರ ಕುಮಾರ್ ಸಿಂಗ್ ಅವರ ವಿಭಾಗೀಯ ಪೀಠವು ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿತು.

2022ರಲ್ಲಿ ಜಾನುವಾರು ಕಳ್ಳಸಾಗಣೆ ಆರೋಪದಡಿ ಟ್ರಕ್ ಚಾಲಕ ನಝೀರ್ ಅಹ್ಮದ್ ಅವರನ್ನು ಗುಂಪೊಂದು ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರು ಜೂನ್ 12ರಂದು ಏಳು ಮಂದಿಯನ್ನು ಅಪರಾಧಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದರು. ಈ ತೀರ್ಪಿನ ಬಳಿಕ ನ್ಯಾಯಾಧೀಶೆಯ ವಿರುದ್ಧ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ಬಂದಿದೆ.

ತೀರ್ಪಿನ ಬಳಿಕ ನ್ಯಾಯಾಧೀಶೆ ಖಾನ್ ಅವರು ತಮ್ಮ ಧಾರ್ಮಿಕ ಗುರುತಿನ ಕಾರಣದಿಂದಾಗಿ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸುವ ಆರೋಪಗಳು, ಕೊಲೆ ಬೆದರಿಕೆಗಳು, ಕೋಮು ನಿಂದನೆಗಳು, ತಪ್ಪು ಮಾಹಿತಿ ಅಭಿಯಾನಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ದಾಳಿಗಳಿಗೆ ಗುರಿಯಾಗಿದ್ದಾರೆ ಎಂದು ನ್ಯಾಯಾಲಯ ದಾಖಲಿಸಿಕೊಂಡಿದೆ.

"ಮಧ್ಯಂತರ ಕ್ರಮವಾಗಿ, ನರ್ಮದಾಪುರಂ ಜಿಲ್ಲೆಯ ಸಿಯೋನಿಮಲ್ವಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಂಗ ಅಧಿಕಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಪೊಲೀಸ್ ರಕ್ಷಣೆ ಒದಗಿಸಬೇಕು" ಎಂದು ಪೀಠ ಆದೇಶಿಸಿದೆ.

ನ್ಯಾಯಾಧೀಶೆ ಖಾನ್ ವಿರುದ್ಧದ ಬೆದರಿಕೆಗಳು ಮತ್ತು ಆನ್ಲೈನ್ ನಿಂದನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.

ಮಧ್ಯಪ್ರದೇಶದ ನ್ಯಾಯಾಂಗ ಅಧಿಕಾರಿಗಳ ಭದ್ರತೆಗೆ ಸಂಬಂಧಿಸಿದಂತೆ 2016ರಿಂದ ಬಾಕಿ ಇರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಈ ವಿಷಯವನ್ನು ಪರಿಗಣಿಸಿದ ಹೈಕೋರ್ಟ್, "ನರ್ಮದಾಪುರಂನ ನ್ಯಾಯಾಂಗ ಅಧಿಕಾರಿಗಳಲ್ಲಿ ಒಬ್ಬರು ನೀಡಿದ ಆದೇಶದ ಹಿನ್ನೆಲೆಯಲ್ಲಿ ಸಮಾಜದ ಕೆಲವರಿಂದ ನಿರಂತರ ಬೆದರಿಕೆಗಳು ಬರುತ್ತಿರುವುದು ಮಾಧ್ಯಮ ವರದಿಗಳು ಮತ್ತು ಇತರ ಮೂಲಗಳಿಂದ ನಮ್ಮ ಗಮನಕ್ಕೆ ಬಂದಿದೆ. ಇದು ಅತ್ಯಂತ ಗಂಭೀರ ವಿಷಯ" ಎಂದು ಹೇಳಿದೆ.

ನ್ಯಾಯಾಧೀಶೆ ಖಾನ್ ಎದುರಿಸುತ್ತಿರುವ ಬೆದರಿಕೆಗಳು ನ್ಯಾಯಾಂಗ ಅಧಿಕಾರಿಗಳ ಸ್ವಾತಂತ್ರ್ಯ ಮತ್ತು ನಿರ್ಭೀತ ಕಾರ್ಯನಿರ್ವಹಣೆಗೆ ನೇರ ಸವಾಲಾಗಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

"ಇಂತಹ ಚಟುವಟಿಕೆಗಳು ನ್ಯಾಯಾಂಗ ಅಧಿಕಾರಿಗಳ ನ್ಯಾಯಾಂಗ ಸ್ವಾತಂತ್ರ್ಯ ಮತ್ತು ನಿರ್ಭೀತ ಕಾರ್ಯನಿರ್ವಹಣೆಗೆ ನೇರ ಅಡ್ಡಿಯಾಗುತ್ತವೆ" ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಂಗ ಆದೇಶಗಳನ್ನು ಪ್ರಶ್ನಿಸಲು ಮೇಲ್ಮನವಿ ಅಥವಾ ಪರಿಷ್ಕರಣೆ ಸೇರಿದಂತೆ ಕಾನೂನಿನಲ್ಲಿ ಒದಗಿಸಿರುವ ಮಾರ್ಗಗಳನ್ನಷ್ಟೇ ಅನುಸರಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

"ನ್ಯಾಯಾಂಗ ಅಧಿಕಾರಿ ನೀಡಿದ ಆದೇಶವು ಸಮಾಜದ ನಿರ್ದಿಷ್ಟ ವರ್ಗದವರಿಗೆ ಇಷ್ಟವಾಗಿಲ್ಲ ಎಂಬ ಕಾರಣಕ್ಕೆ ಅವರನ್ನು ಬೆದರಿಸಲು ಅವಕಾಶ ನೀಡಲಾಗುವುದಿಲ್ಲ" ಎಂದು ಪೀಠ ಹೇಳಿದೆ.

ವಿಚಾರಣೆ ವೇಳೆ, ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರಿಗೆ ಈಗಾಗಲೇ ಪೊಲೀಸ್ ರಕ್ಷಣೆ ಒದಗಿಸಲಾಗಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಆದರೆ, ನ್ಯಾಯಾಂಗ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಇದುವರೆಗೆ ಕೈಗೊಂಡ ಕ್ರಮಗಳ ವಿವರಗಳನ್ನು ಒಳಗೊಂಡ ಪ್ರಮಾಣಪತ್ರವನ್ನು ಸಲ್ಲಿಸುವಂತೆ ನರ್ಮದಾಪುರಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಇದಲ್ಲದೆ, ಬೆದರಿಕೆಗೆ ಕಾರಣರಾದವರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿಯಿಂದ ವೈಯಕ್ತಿಕ ಪ್ರಮಾಣಪತ್ರಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 9ಕ್ಕೆ ನಿಗದಿಪಡಿಸಲಾಗಿದೆ.

ಅರ್ಜಿದಾರರ ಪರವಾಗಿ ವಕೀಲ ಬ್ರಜೇಶ್ ನಾಥ್ ಮಿಶ್ರಾ ಹಾಜರಾಗಿದ್ದರು. ರಾಜ್ಯದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಜಾನ್ವಿ ಪಂಡಿತ್ ಮತ್ತು ಡೆಪ್ಯುಟಿ ಅಡ್ವೊಕೇಟ್ ಜನರಲ್ ಅಭಿಜೀತ್ ಅವಸ್ಥಿ ವಾದ ಮಂಡಿಸಿದರು. ಮಧ್ಯಸ್ಥಿಕೆದಾರರ ಪರವಾಗಿ ವಕೀಲ ರೋಹನ್ ಹಾರ್ನೆ ಹಾಜರಾಗಿದ್ದರು. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries