ನವದೆಹಲಿ: 2020ರ ದೆಹಲಿ ಗಲಭೆ ವೇಳೆ ಗುಪ್ತಚರ ಬ್ಯೂರೊ ಅಧಿಕಾರಿ ಅಂಕಿತ್ ಶರ್ಮಾ ಕೊಲೆ ಪ್ರಕರಣದ ಸಂಬಂಧ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಹಾಗೂ ಇತರ ನಾಲ್ವರಿಗೆ ದೆಹಲಿ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರು ತೀರ್ಪು ಪ್ರಕಟಿಸಿದ್ದಾರೆ.
ಅಲ್ಲದೆ ಮರಣದಂಡಣೆ ವಿಧಿಸಬೇಕು ಎನ್ನುವ ದೆಹಲಿ ಪೊಲೀಸರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು, ಈ ಪ್ರಕರಣವು ಮರಣದಂಡನೆ ವಿಧಿಸಬೇಕಾದ ಅಪರೂಪದಲ್ಲೇ ಅಪರೂಪದ' ಪ್ರಕರಣಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮರಣದಂಡನೆಗೆ ನ್ಯಾಯಾಲಯ ನಿರಾಕರಣೆ
ಶಿಕ್ಷೆಯ ಪ್ರಮಾಣದ ಕುರಿತು ವಾದ ಆಲಿಸಿದ ನ್ಯಾಯಾಲಯ, ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು ಎಂಬ ದೆಹಲಿ ಪೊಲೀಸರ ಮನವಿಯನ್ನು ತಿರಸ್ಕರಿಸಿತು. ಅಪರಾಧಿಗಳನ್ನು ಸುಧಾರಿಸಲು ಸಾಧ್ಯವಿಲ್ಲ ಅಥವಾ ಜೈಲಿನಲ್ಲಿದ್ದರೂ ಸಮಾಜಕ್ಕೆ ಅಪಾಯಕಾರಿಗಳಾಗಿರುತ್ತಾರೆ ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಅಪರಾಧಿಗಳಲ್ಲಿ ಹಿಂಸಾತ್ಮಕ ಪ್ರವೃತ್ತಿ ಅಥವಾ ಅಪರಾಧ ಮಾಡುವ ಸ್ವಭಾವವಿದೆ ಎಂಬುದಕ್ಕೆ ಯಾವುದೇ ದಾಖಲೆಗಳನ್ನು ಸರ್ಕಾರ ಮಂಡಿಸಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
'ಮರಣದಂಡನೆ ಕೊನೆಯ ಆಯ್ಕೆಯಾಗಿದ್ದು, ಅಪರಾಧಿಗಳನ್ನು ಸಂಪೂರ್ಣವಾಗಿ ಸುಧಾರಿಸಲು ಸಾಧ್ಯವಿಲ್ಲ ಎಂಬುದು ದೃಢಪಟ್ಟಾಗ ಮಾತ್ರ ಅದನ್ನು ವಿಧಿಸಬಹುದು' ಎಂದು ನ್ಯಾಯಾಲಯ ತಿಳಿಸಿದೆ.
ಶಿಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ ತಾಹಿರ್ ಹುಸೇನ್, 'ಹೈಕೋರ್ಟ್‌ನಲ್ಲಿ ನನಗೆ ನ್ಯಾಯ ಸಿಗಲಿದೆ' ಎಂದು ಹೇಳಿದರು.
ಪೊಲೀಸರ ವಾದ ಏನಿತ್ತು?
ಈ ಹಿಂದೆ ದೆಹಲಿ ಪೊಲೀಸರು ಐವರು ಅಪರಾಧಿಗಳಿಗೂ ಮರಣದಂಡನೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. 'ಅಂಕಿತ್ ಶರ್ಮಾ ಅವರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಅವರಿಗೆ ಯಾವುದೇ ಕರುಣೆ ತೋರಿಸಲಾಗಿಲ್ಲ. ಇಂತಹ ಕೃತ್ಯ ಎಸಗಿದವರಿಗೆ ಯಾವುದೇ ದಯೆ ತೋರಬಾರದು' ಎಂದು ವಿಶೇಷ ಸರ್ಕಾರಿ ವಕೀಲ ಮಧುಕರ್ ಪಾಂಡೆ ವಿನಂತಿಸಿದ್ದರು.
ಪ್ರಕರಣದ ಹಿನ್ನೆಲೆ
2020ರ ದೆಹಲಿ ಗಲಭೆ ವೇಳೆ ಗುಂಪೊಂದು ಅಂಕಿತ್ ಶರ್ಮಾ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಅವರ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿತ್ತು. ಹಿಂದೂಗಳ ವಿರುದ್ಧ ದ್ವೇಷದ ಉದ್ದೇಶದಿಂದ ಶಸ್ತ್ರಸಜ್ಜಿತ ಗುಂಪು ಗಲಭೆ, ಬೆಂಕಿ ಹಚ್ಚುವಿಕೆ, ದರೋಡೆ ನಡೆಸಿದ್ದು, ಅದೇ ಗುಂಪಿನ ಸದಸ್ಯನಾಗಿದ್ದ ತಾಹಿರ್ ಹುಸೇನ್ ಅಂಕಿತ್ ಶರ್ಮಾ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂಬುದನ್ನು ಪೊಲೀಸರು ನ್ಯಾಯಾಲಯದ ಮುಂದೆ ಸಾಬೀತು ಮಾಡಿದ್ದರು.
ಜುಲೈ 13ರಂದು ನ್ಯಾಯಾಲಯ ತಾಹಿರ್ ಹುಸೇನ್ ಹಾಗೂ ಇತರ ನಾಲ್ವರನ್ನು ಅಂಕಿತ್ ಶರ್ಮಾ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಿತ್ತು.
ಕಾವೇರಿ ನೀರು ಬಿಡುಗಡೆ ವಿರೋಧಿಸಿ ಆಗಸ್ಟ್ 13ರಂದು ಕರ್ನಾಟಕ ಬಂದ್: ವಾಟಾಳ್
ಯಾವೆಲ್ಲ ಕಲಂಗಳಡಿ ಶಿಕ್ಷೆ?
ತಾಹಿರ್ ಹುಸೇನ್ ಅವರನ್ನು ಭಾರತೀಯ ದಂಡ ಸಂಹಿತೆಯ 302 (ಕೊಲೆ), 365 (ಅಪಹರಣ), 147 (ಗಲಭೆ), 148 (ಮಾರಕಾಸ್ತ್ರಗಳೊಂದಿಗೆ ಗಲಭೆ), 153ಎ (ವೈಷಮ್ಯ ಪ್ರಚೋದನೆ), 188 (ಸಾರ್ವಜನಿಕ ಸೇವಕರ ಆದೇಶ ಉಲ್ಲಂಘನೆ) ಹಾಗೂ 149 (ಕಾನೂನುಬಾಹಿರ ಗುಂಪಿನ ಸದಸ್ಯತ್ವ) ಕಲಂಗಳಡಿ ದೋಷಿಯೆಂದು ನ್ಯಾಯಾಲಯ ಘೋಷಿಸಿತ್ತು.

