ತಿರುವನಂತಪುರಂ: ನೂರುಲ್ ಇಸ್ಲಾಂ ವಿಶ್ವವಿದ್ಯಾಲಯ ಮತ್ತು ನಿಮ್ಸ್ ಮೆಡಿಸಿಟಿ ಜಂಟಿಯಾಗಿ ಆಯೋಜಿಸಿರುವ 8ನೇ ಎಪಿಜೆ ಪ್ರಶಸ್ತಿ ಪ್ರದಾನ ಸಮಾರಂಭ ಇಂದು (ಆಗಸ್ಟ್ 1) ನಡೆಯಲಿದೆ.
ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷೆ ಮತ್ತು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಪ್ರಧಾನ ಸಲಹೆಗಾರ್ತಿ ಡಾ. ಸೌಮ್ಯ ಸ್ವಾಮಿನಾಥನ್ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ಲೋಕಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಈ ಪ್ರಶಸ್ತಿಯು ರೂ. 1 ಲಕ್ಷ ನಗದು ಬಹುಮಾನ, ಪ್ರಶಸ್ತಿಫಲಕ ಮತ್ತು ಪ್ರಶಂಸಾಪತ್ರವನ್ನು ಹೊಂದಿದೆ. ತಮ್ಮ ಕ್ಷೇತ್ರಗಳಲ್ಲಿ ಅಸಾಧಾರಣ ಶ್ರೇಷ್ಠತೆಯನ್ನು ತೋರಿಸಿದ ಮತ್ತು ತಮ್ಮ ವಿಶಿಷ್ಟ ಸಾಧನೆಗಳಿಂದ ದೇಶದ ಖ್ಯಾತಿಯನ್ನು ಹೆಚ್ಚಿಸಿದ ಗಣ್ಯ ವ್ಯಕ್ತಿಗಳನ್ನು ಗೌರವಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಡಾ. ಸೌಮ್ಯ ಸ್ವಾಮಿನಾಥನ್ ಅವರು ಮೇ 2, 1959 ರಂದು ಚೆನ್ನೈನಲ್ಲಿ ಜನಿಸಿದರು, ಭಾರತೀಯ ಹಸಿರು ಕ್ರಾಂತಿಯ ಪಿತಾಮಹ ಡಾ. ಎಂ. ಎಸ್. ಸ್ವಾಮಿನಾಥನ್ ಮತ್ತು ಖ್ಯಾತ ಶಿಕ್ಷಣ ತಜ್ಞೆ ಮೀನಾ ಸ್ವಾಮಿನಾಥನ್ ಅವರ ಪುತ್ರಿ.
ಅವರು ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಮತ್ತು ನವದೆಹಲಿಯ ಏಮ್ಸ್ ನಿಂದ ಪೀಡಿಯಾಟ್ರಿಕ್ಸ್‍ನಲ್ಲಿ ಎಂಡಿ ಪದವಿಯನ್ನು ಪೂರ್ಣಗೊಳಿಸಿದರು. ಅವರು ಲಾಸ್ ಏಂಜಲೀಸ್‍ನ ಮಕ್ಕಳ ಆಸ್ಪತ್ರೆ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ.
ಸೌಮ್ಯ ಸ್ವಾಮಿನಾಥನ್ ಅವರು ಲಂಡನ್‍ನಲ್ಲಿ ಪ್ರತಿಷ್ಠಿತ 'ಫೆಲೋ ಆಫ್ ದಿ ರಾಯಲ್ ಸೊಸೈಟಿ' (ಎಫ್.ಆರ್.ಎಸ್.) ಮನ್ನಣೆ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ವಿಶ್ವ ಆರೋಗ್ಯ ಸಂಸ್ಥೆಯ ಇತಿಹಾಸದಲ್ಲಿ ಮೊದಲ ಮುಖ್ಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದರು ಮತ್ತು ಅಔಗಿIಆ-19 ಸಾಂಕ್ರಾಮಿಕ ಸಮಯದಲ್ಲಿ ಜಾಗತಿಕ ಲಸಿಕೆ ಸಂಶೋಧನೆ ಮತ್ತು ತಡೆಗಟ್ಟುವಿಕೆ ಪ್ರಯತ್ನಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸಾರ್ವಜನಿಕ ಆರೋಗ್ಯ ಮತ್ತು ಕ್ಷಯ (TB) ಮತ್ತು HIV ಸಂಶೋಧನೆಯ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿರುವ ಡಾ. ಸೌಮ್ಯ ಸ್ವಾಮಿನಾಥನ್, ಈ ಹಿಂದೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಹಾನಿರ್ದೇಶಕಿಯಾಗಿ ಮತ್ತು ಭಾರತ ಸರ್ಕಾರದ ಆರೋಗ್ಯ ಸಂಶೋಧನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

