ಕೀವ್: ಉಕ್ರೇನ್ ರಾಜಧಾನಿ ಕೀವ್ ಮೇಲೆ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ರಷ್ಯಾ ನಡೆಸಿದ ದಾಳಿಯಲ್ಲಿ 9 ಮಂದಿ ಸಾವಿಗೀಡಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ದಾಳಿಯಿಂದ ನಗರದ ಹಲವು ಮನೆಗಳು ಹಾನಿಗೊಳಗಾಗಿದ್ದು, ಅಲ್ಲಲ್ಲಿ ಬೆಂಕಿ ಹೊತ್ತಿಕೊಂಡಿತ್ತು ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.
'27 ಕ್ಷಿಪಣಿಗಳ ಪೈಕಿ ಒಂದನ್ನು ಮಾತ್ರವೇ ನಮಗೆ ಹೊಡೆದುರುಳಿಸಲು ಸಾಧ್ಯವಾಯಿತು. ನಮ್ಮ ಬಳಿ ಪೇಟ್ರಿಯಟ್ ಕ್ಷಿಪಣಿ ನಿರೋಧಕ ವ್ಯವಸ್ಥೆಯ ಕೊರತೆ ಇರುವುದೇ ರಷ್ಯಾಗೆ ದಾಳಿ ನಡೆಸಲು ಹಾಗೂ ನಾಗರಿಕರನ್ನು ಕೊಲ್ಲಲು ಪ್ರೋತ್ಸಾಹ ನೀಡಿದೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಷ್ಯಾ ದಾಳಿಯಲ್ಲಿ ಲಿಥುವೇನಿಯಾದ ರಾಯಭಾರ ಕಚೇರಿಯು ಹಾನಿಗೊಳಗಾಗಿದೆ. ಕಚೇರಿ ಹಾನಿಗೊಳಗಾಗಿರುವ ಚಿತ್ರಗಳನ್ನು ಆ ದೇಶದ ವಿದೇಶಾಂಗ ಸಚಿವರು ಪ್ರಕಟಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಪರಸ್ಪರ ದಾಳಿಯು ಇತ್ತೀಚೆಗೆ ಮತ್ತೆ ತೀವ್ರಗೊಂಡಿದೆ.
'ನಗರದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಲಾಗುತ್ತಿದೆ. ಎಲ್ಲರೂ ಸುರಕ್ಷಿತ ಸ್ಥಳಗಳಲ್ಲಿ ಇರಿ' ಎಂದು ಕೀವ್ ಮೇಯರ್ ಟೆಲಿಗ್ರಾಮ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಪೀಡಿತ ಪ್ರದೇಶಗಳಿಂದ 105 ಮಂದಿಯನ್ನು ರಕ್ಷಿಸಲಾಗಿದೆ.
ರಷ್ಯಾ ದಾಳಿಯನ್ನು ಹಿಮ್ಮೆಟ್ಟಿಸಲು ವಾಯು ರಕ್ಷಣಾ ವ್ಯವಸ್ಥೆಯ ಕೊರತೆ ಇದೆ. ನ್ಯಾಟೊ ಶೃಂಗಸಭೆಯಲ್ಲಿ, ಉಕ್ರೇನ್‌ಗೆ ವಾಯು ರಕ್ಷಣಾ ಬೆಂಬಲವನ್ನು ನೀಡಲು ಒಪ್ಪಿಕೊಂಡಿರುವ ದೇಶಗಳು ಸಾಧ್ಯವಾದಷ್ಟು ಬೇಗ ಈ ನೆರವನ್ನು ಒದಗಿಸುವಂತೆ ಮಿತ್ರರಾಷ್ಟ್ರಗಳನ್ನು ಉಕ್ರೇನ್ ಒತ್ತಾಯಿಸಿದೆ. ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಲು ಅಮೆರಿಕ ನಿರ್ಮಿತ ಪೇಟ್ರಿಯಟ್ ವಾಯು ರಕ್ಷಣಾ ವ್ಯವಸ್ಥೆ ಒದಗಿಸುವಂತೆ ಅದು ಮನವಿ ಮಾಡಿದೆ.
'ಮಿಲಿಟರಿ ಸಲಕರಣೆಗಳ ಕೈಗಾರಿಕಾ ಪ್ರದೇಶಗಳು ಹಾಗೂ ಲಾಜಿಸ್ಟಿಕ್ಸ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಕೀವ್‌ನಲ್ಲಿ ಭಾರಿ ದಾಳಿ ನಡೆಸಲಾಗಿದೆ. ಉಕ್ರೇನ್‌ನ 274 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ' ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
ಅuಣ-oಜಿಜಿ box - ಅಮೆರಿಕ ಹಿಂದೇಟು? ಪೇಟ್ರಿಯಟ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿಕೊಳ್ಳಲು ಉಕ್ರೇನ್‌ಗೆ ಪರವಾನಗಿ ನೀಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಹೇಳಿದ್ದರು. ಆದರೆ ಈಗ ತಮ್ಮ ನಿರ್ಧಾರದಿಂದ ಅವರು ಹಿಂದೆ ಸರಿದಿರುವಂತೆ ತೋರುತ್ತಿದೆ. 'ಪರವಾನಗಿ ನೀಡುವ ನಿರ್ಧಾರದ ಬಗ್ಗೆ ಅಮೆರಿಕ ಬಹಳ ಜಾಗರೂಕವಾಗಿರಬೇಕು' ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಹಾಗೂ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಮಂಗಳವಾರ ಮಾತುಕತೆ ನಡೆಸಿದ್ದರು. ಪರವಾನಗಿ ನೀಡಲು ಟ್ರಂಪ್ ಒಪ್ಪಿಗೆ ನೀಡಿದ್ದಾರೆ ಎಂದು ಸಭೆ ಬಳಿಕ ಝೆಲೆನ್‌ಸ್ಕಿ ಹೇಳಿದ್ದರು.

