ನವದೆಹಲಿ: ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಹೊಸ 'ಮುಸ್ಲಿಂ ಲೀಗ್' ಪಕ್ಷವಾಗಿ ಮಾರ್ಪಟ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ನಿರ್ಧರಿಸಿರುವುದನ್ನು ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನವೀನ್, 'ಈ ಗೀತೆಯನ್ನು ಎದೆಯ ಮೇಲೆ ಹೊತ್ತು ದೇಶಕ್ಕಾಗಿ ಬಲಿದಾನ ಮಾಡಿದ ಸಾವಿರಾರು ಹುತಾತ್ಮರಿಗೆ ಬಗೆದ ಅಪಮಾನವಾಗಿದೆ' ಎಂದಿದ್ದಾರೆ.
ವಂದೇ ಮಾತರಂನ ಎಲ್ಲ ಚರಣಗಳನ್ನು ಹಾಡುವುದರ ಬಗ್ಗೆ ಎದ್ದಿರುವ ವಿವಾದವೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಮುನ್ನೆಲೆಗೆ ಬಂತು. ಈ ಸಂದರ್ಭದಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಕುರಿತಾದ ಸಿಡಬ್ಲ್ಯುಸಿಯ 1937ರ ಸಭೆಯ ನಿರ್ಧಾರವನ್ನು ಪಾಲಿಸುವುದಾಗಿ ಕಾಂಗ್ರೆಸ್ ಪುನರುಚ್ಚರಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ನವೀನ್, 'ಕಾಂಗ್ರೆಸ್ ಪಕ್ಷವು ವಂದೇ ಮಾತರಂಗೆ ಮಾಡುತ್ತಿರುವ ಅಪಮಾನಕ್ಕೆ ಈಗ ನಿರ್ಣಯದ ಮೂಲಕ ಅಧಿಕೃತ ರೂಪ ನೀಡಿದೆ. ಇನ್ನು ಮುಂದೆ ಕಾಂಗ್ರೆಸ್ ವೇದಿಕೆಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಸಿಡಬ್ಲ್ಯುಸಿ ನಿರ್ಧರಿಸಿದೆ. ಕಾಂಗ್ರೆಸ್ ಇಂದಿನ ಹೊಸ ಮುಸ್ಲಿಂ ಲೀಗ್ ಆಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ವಿವಾದವನ್ನು ಪರೋಕ್ಷವಾಗಿ ಉಲ್ಲೇಖಿಸಿರುವ ನಿತಿನ್, ಕೆಲವೇ ದಿನಗಳ ಹಿಂದೆ, ಒಬ್ಬ ವ್ಯಕ್ತಿಯ ನಡವಳಿಕೆಯಲ್ಲಿ ಇದೇ ಅವಮಾನ ಬಯಲಾದಾಗ, ಕಾಂಗ್ರೆಸ್ ಅದನ್ನು ಕಾಕತಾಳೀಯ ಎಂದು ತಳ್ಳಿಹಾಕಿತ್ತು. ಇಂದು, ಆ ಅವಮಾನವೇ ಕಾಂಗ್ರೆಸ್ನ ನೀತಿಯಾಗಿ ಬದಲಾಗಿದೆ. ಇದು ಕೇವಲ ರಾಜಕೀಯ ಸಮರ್ಥನೆಯಷ್ಟೇ ಅಲ್ಲ. ಕಾಂಗ್ರೆಸ್ ಪಕ್ಷವು ವೋಟ್ ಬ್ಯಾಂಕ್ಗಾಗಿ ಪದೇ ಪದೇ ದೇಶದ ಸ್ವಾಭಿಮಾನವನ್ನೇ ಅಡವಿಡುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.

