ಕುಂಬಳೆ: ಅನಂತಪುರದ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇಬ್ಬರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇಂದು (ಭಾನುವಾರ) ಬೆಳಿಗ್ಗೆ 10 ಗಂಟೆ ಸುಮಾರಿಗೆ ಅನಂತಪುರಂ ಕೈಗಾರಿಕಾ ಎಸ್ಟೇಟ್‍ನಲ್ಲಿರುವ ಆಕ್ಸಿಜನ್ ಪ್ರೋಮ್ಯಾಕ್ಸ್ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದೆ.
ಕೋಳಿ ತ್ಯಾಜ್ಯದಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಯಾಗಿರುವ ಇಲ್ಲಿಯ ಅವಘಡದಲ್ಲಿ ಒಡಿಶಾ ಮೂಲದ ಕಾರ್ಮಿಕ ಮಹೇಶ್ವರ (19) ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡ ತನುಜಿ (24) ಅವರನ್ನು ಮಂಗಳೂರಿನ ಆಸ್ಪತ್ರೆಗೆ ಮತ್ತು ಸಿದ್ಧಾನಂದ (21) ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಖಾನೆಯಲ್ಲಿನ ಬಾಯ್ಲರ್ ಸ್ಪೋಟಿಸಿ ಅನಿಲ ತೀವ್ರವಾಗಿ ಹೊರಬಂದಾಗ, ಸ್ಥಳದಲ್ಲಿದ್ದ ಕಾರ್ಮಿಕರು ಹತ್ತಿರದ ಆಳವಾದ ಕೋಳಿ ತ್ಯಾಜ್ಯ ಗುಂಡಿಗೆ ಎಸೆಯಲ್ಪಟ್ಟರು. ಅವರನ್ನು ರಕ್ಷಿಸಲು ಪ್ರಯತ್ನಿಸುವಾಗ ಇನ್ನಿಬ್ಬರು ಅವಘಡಕ್ಕೀಡಾಗಿದ್ದಾರೆ. ಕಾರ್ಖಾನೆಯ ಇತರ ಕಾರ್ಮಿಕರು ಮೂವರನ್ನು ಮೇಲೇತ್ತಿ ಆಸ್ಪತ್ರೆಗೆ ಕರೆದೊಯ್ದರು. ಮಹೇಶ್ವರ ಆಸ್ಪತ್ರೆಯಲ್ಲಿ ನಿಧನರಾದರು.
ಅನಂತಪುರ ಪ್ರದೇಶದ ಹಲವು ಕಾರ್ಖಾನೆಗಳು ಈಗಾಗಲೇ ವಿನಾಶಕಾರಿಯಾಗಿ ಆತಂಕ ಸೃಷ್ಟಿಸಿದ್ದು, ಇದೇ ಆಕ್ಸಿಜನ್ ಕಾರ್ಖಾನೆಯಲ್ಲಿ ಈ ಹಿಂದೆಯೇ ಅವಘಡಗಳು ಸಂಭವಿಸಿ ಜೀವಹಾನಿಗಳು ವರದಿಯಾಗಿದ್ದವು. ಜೊತೆಗೆ ಕಾರ್ಖಾನೆಯಿಂದ ಹೊರಬಿಡುವ ಕಲುಷಿತ ನೀರು ಪರಿಸರ ಪ್ರದೇಶದ ಬಾವಿಗಳನ್ನು ಹಾನಿಗೊಳಿಸುತ್ತಿದ್ದು, ಹೊರ ಸೂಸುವ ಹೊಗೆಯ ಪರಿಣಾಮ ಪರಿಸರದ ನಾಲ್ಕು ಕಿಲೋಮೀಟರ್ ಗಳಷ್ಟು ವ್ಯಾಪ್ತಿಯಲ್ಲಿ ತೀವ್ರ ಆರೋಗ್ಯ ಸಮಸ್ಯೆಗಳು ಜನರಲ್ಲಿ ಕಂಡುಬಂದಿದೆ. ಈ ಮಧ್ಯೆ ಜನಪ್ರತಿನಿಧಿಗಳು ತೋರಿಕೆಗಷ್ಟೇ ಭರವಸೆ ನೀಡಿ ತಲೆ ಸವರುತ್ತಿದ್ದು, ಜನಸಾಮಾನ್ಯರ ಬದುಕು ಹತಾಶೆಗೊಳಪಡಿಸಿ ತೀವ್ರ ಆತಂಕದಲ್ಲಿ ಕಳೆಯುವಂತಾಗಿದೆ.

-MAHESHWARA.jpeg)
.jpg)
