ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಶುಕ್ರವಾರ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಯಾವುದೇ ಪರಿಸ್ಥಿತಿಯಲ್ಲೂ ವಾಣಿಜ್ಯ ನೌಕೆಗಳು ಮತ್ತು ನಾವಿಕರ ಮೇಲಿನ ದಾಳಿಗಳನ್ನು ತಪ್ಪಿಸುವಂತೆ ಆಗ್ರಹಿಸಿದ್ದಾರೆ.
ವಾಣಿಜ್ಯ ನೌಕೆಗಳು ಮತ್ತು ನಾವಿಕರ ಮೇಲೆ ಯಾರೇ ನಡೆಸುವ ದಾಳಿಯನ್ನು ಭಾರತವು ಖಂಡಿಸುತ್ತದೆ ಎಂದು ಜೈಶಂಕರ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪಶ್ಚಿಮ ಏಶ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ಭಾರತದ ತೀವ್ರ ಕಳವಳವನ್ನೂ ಜೈಶಂಕರ್ ತಿಳಿಸಿದ್ದಾರೆ.
ಪ್ರಸ್ತುತ ಬೆಳವಣಿಗೆಗಳು ಮತ್ತು ನಡೆಯುತ್ತಿರುವ ಚರ್ಚೆಗಳ ಕುರಿತು ಇರಾನ್‌ನ ದೃಷ್ಟಿಕೋನವನ್ನು ತಿಳಿದುಕೊಂಡಿದ್ದೇನೆ. ಭಾರತವು ಯಾವಾಗಲೂ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಸರಕಾರದ ಪ್ರಕಾರ, 2026 ರಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಕೊಲ್ಲಿ ಪ್ರದೇಶಗಳಲ್ಲಿ 10 ನಾವಿಕರು ಸೇರಿದಂತೆ 16 ಭಾರತೀಯ ಪ್ರಜೆಗಳು ಜೀವ ಕಳೆದುಕೊಂಡಿದ್ದಾರೆ ಹಾಗೂ 75 ಭಾರತೀಯರು ಗಾಯಗೊಂಡಿದ್ದಾರೆ.

