ನವದೆಹಲಿ: ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಜಾತಿ ಆಧಾರಿತ ತಾರತಮ್ಯ ನಿರ್ಮೂಲನೆ ಉದ್ದೇಶದಿಂದ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ರೂಪಿಸಿರುವ ಸಮಾನತೆ ನಿಯಮಗಳ ಕುರಿತು ಮರುಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.
ಇದು ಯುಜಿಸಿ ರೂಪಿಸಿರುವ ನಿಯಮಾವಳಿಗೆ ಸಂಬಂಧಿಸಿದ ವಿಚಾರ. ಹೀಗಾಗಿ ಈ ಕುರಿತು ಮರುಪರಿಶೀಲನೆ ನಡೆಸಲಾಗುತ್ತಿದೆ' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತಿಳಿಸಿದರು.
ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿ.ಮೋಹನಾ ಅವರು ಇದ್ದ ಪೀಠ ನಡೆಸಿತು.
ಮೆಹ್ತಾ ಅವರ ವಾದ ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ಪೀಠವು, ಈ ವಿಚಾರಕ್ಕೆ ಪ್ರತಿಯಾಗಿ ನಾಲ್ಕು ವಾರಗಳ ಒಳಗಾಗಿ ಸಮಗ್ರ ಪ್ರಮಾಣಪತ್ರ ಸಲ್ಲಿಸುವಂತೆ ಯುಜಿಸಿಗೆ ಸೂಚಿಸಿತು. ಅರ್ಜಿದಾರರು ಏನಾದರೂ ಪ್ರತಿಕ್ರಿಯೆ ಸಲ್ಲಿಸಲು ಬಯಸಿದಲ್ಲಿ, ಯುಜಿಸಿ ಪ್ರಮಾಣಪತ್ರ ಸಲ್ಲಿಸಿದ ನಂತರ ಎರಡು ವಾರಗಳ ಒಳಗಾಗಿ ಸಲ್ಲಿಸಬಹುದು ಎಂದೂ ಪೀಠ ಹೇಳಿತು.
'ವಿಶ್ವವಿದ್ಯಾಲಯ ಅನುದಾನಗಳ ಆಯೋಗ(ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜನ) ನಿಯಮಗಳು - 2026'ರ ಸಿಂಧುತ್ವ ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿದೆ.
ಈ ನಿಯಮಗಳನ್ನು ರೂಪಿಸಿದ ಬಗೆಯ ಕುರಿತು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಈ ನಿಯಮಗಳು ಎಲ್ಲರನ್ನೂ ಒಳಗೊಳ್ಳುವ ಸ್ವರೂಪ ಹೊಂದಿಲ್ಲ ಎಂದು ಹೇಳಿದ್ದ ಕೋರ್ಟ್, ಈ ನಿಯಮಗಳಿಗೆ ತಡೆ ನೀಡಿ ಜನವರಿ 29ರಂದು ಆದೇಶಿಸಿತ್ತು.

