ಹೈದರಾಬಾದ್/ತಿರುವನಂತಪುರಂ/ಚೆನ್ನೈ: ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಅಕ್ಕಿ ಬೆಲೆ ಕಳೆದ ಎರಡು ತಿಂಗಳಲ್ಲಿ ಶೇ 10ರಿಂದ 20ರವರೆಗೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಮನೆ ದಿನಸಿ ವೆಚ್ಚ ಹೆಚ್ಚಾಗಿದ್ದು, ಮಾಸಿಕ ಗೃಹ ಬಜೆಟ್ಗೆ ಹೆಚ್ಚುವರಿ ಹೊರೆ ಬಿದ್ದಿದೆ.
ತಜ್ಞರ ಪ್ರಕಾರ, ಎಲ್ ನಿನೊ ಪರಿಣಾಮ, ತೀವ್ರ ಮಳೆ ಕೊರತೆ, ಬರದ ಆತಂಕ ಹಾಗೂ ಖಾಸಗಿ ವ್ಯಾಪಾರಿಗಳು ಹೆಚ್ಚುವರಿ ದಾಸ್ತಾನು ಮಾಡಿಕೊಂಡಿದ್ದು ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಮುಂದಿನ ದಿನಗಳಲ್ಲಿ ಅಕ್ಕಿ ಉತ್ಪಾದನೆ ಕುಸಿಯುವ ಭೀತಿಯಿಂದ ವ್ಯಾಪಾರಿಗಳು ಉತ್ತಮ ಗುಣಮಟ್ಟದ ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸುತ್ತಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗಿ ಬೆಲೆ ಮತ್ತಷ್ಟು ಏರಿದೆ.
ಆಂಧ್ರದಲ್ಲಿ ಶೇ 20ರವರೆಗೆ ಏರಿಕೆ
ಆಂಧ್ರ ಪ್ರದೇಶದಲ್ಲಿ ಎಚ್ಎಂಟಿ, ಬಿಪಿಟಿ, ಆರ್ಎನ್ಆರ್, ಸಾಂಬಾ ಮಸೂರಿ ಸೇರಿದಂತೆ ಜನಪ್ರಿಯ ಅಕ್ಕಿ ತಳಿಗಳ ಬೆಲೆ ಕಳೆದ ಎರಡು ತಿಂಗಳಲ್ಲಿ ಶೇ 10ರಿಂದ 20ರವರೆಗೆ ಹೆಚ್ಚಳ ಕಂಡಿದೆ. '26 ಕೆಜಿ ಅಕ್ಕಿ ಚೀಲದ ಬೆಲೆ ₹200 ಹೆಚ್ಚಾಗಿದೆ. ಮಳೆ ಕೊರತೆಯಿಂದ ಬೆಳೆ ಹಾನಿಯಾಗಿರುವುದರಿಂದ ಸಗಟು ವ್ಯಾಪಾರಿಗಳು ದರ ಹೆಚ್ಚಿಸಿದ್ದಾಗಿ ಅಂಗಡಿ ಮಾಲೀಕರು ತಿಳಿಸಿದ್ದಾರೆ' ಎಂದು ವಿಜಯವಾಡದ ನಿವಾಸಿ ಎ. ಶರತ್ ಹೇಳಿದರು.
ಕಳೆದ ಎರಡು ತಿಂಗಳಲ್ಲಿ ವಿವಿಧ ತಳಿಗಳ ಅಕ್ಕಿಯ ಸಗಟು ದರ ಪ್ರತಿ ಕ್ವಿಂಟಲ್ಗೆ ₹1,000ರಿಂದ ₹1,500ರವರೆಗೆ ಏರಿಕೆಯಾಗಿದೆ ಎಂದು ಚಿಲ್ಲರೆ ವ್ಯಾಪಾರಿಗಳು ಹೇಳಿದರು.
ಓಣಂ ಮುನ್ನ ಕೇರಳದಲ್ಲೂ ಬೆಲೆ ಏರಿಕೆ
ಓಣಂ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿಯೂ ಅಕ್ಕಿ ದರ ಭಾರಿ ಏರಿಕೆಯಾಗಿದೆ. ಸಾಮಾನ್ಯ ಬಳಕೆಯ ಅಕ್ಕಿ ಬ್ರ್ಯಾಂಡ್ಗಳ ಬೆಲೆ ಪ್ರತಿ ಕೆಜಿಗೆ ₹7 ಏರಿಕೆಯಾಗಿದೆ. ಹಬ್ಬದ ಖರೀದಿ ಆರಂಭವಾದ ಬಳಿಕ ಬೆಲೆ ಇನ್ನಷ್ಟು ಹೆಚ್ಚಾಗುವ ಮತ್ತು ಕಾಳಸಂತೆಯಲ್ಲಿ ಮಾರಾಟವಾಗುವ ಆತಂಕವನ್ನೂ ವ್ಯಾಪಾರಿಗಳು ವ್ಯಕ್ತಪಡಿಸಿದ್ದಾರೆ.
ಕೇರಳ ತನ್ನ ಒಟ್ಟು ಅಕ್ಕಿ ಅಗತ್ಯದ ಸುಮಾರು ಶೇ 75ರಷ್ಟು ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಿಂದ ಆಮದು ಮಾಡಿಕೊಳ್ಳುವುದರಿಂದ ಇತರ ರಾಜ್ಯಗಳ ಉತ್ಪಾದನೆ ಕುಸಿತದ ಪರಿಣಾಮ ನೇರವಾಗಿ ಬೀಳುತ್ತಿದೆ.
ತಮಿಳುನಾಡಿನಲ್ಲಿ ತಾತ್ಕಾಲಿಕ ಏರಿಕೆ
ತಮಿಳುನಾಡಿನಲ್ಲಿ ಅಕ್ಕಿ ಬೆಲೆ ಪ್ರತಿ ಕೆಜಿಗೆ ₹ 5ರಿಂದ ₹15 ರವರೆಗೆ ಏರಿಕೆಯಾಗಿದೆ. ಆದರೆ ರಾಜ್ಯದಲ್ಲಿ ಸದ್ಯಕ್ಕೆ ಅಕ್ಕಿ ಕೊರತೆ ಇಲ್ಲ ಎಂದು ತಮಿಳುನಾಡು ರೈಸ್ ಮಿಲ್ ಮಾಲೀಕರ ಸಂಘ ಹೇಳಿದೆ.
ಆಂಧ್ರ ಪ್ರದೇಶ ಹಾಗೂ ಕರ್ನಾಟಕದಿಂದ ಬರುವ ಸೋನಾ ಮಸೂರಿ ಸೇರಿದಂತೆ ಕೆಲವು ತಳಿಗಳ ಬೆಲೆ ಮಾತ್ರ ಹೆಚ್ಚಿದ್ದು, ಸ್ಥಳೀಯ ತಳಿಗಳ ಬೆಲೆಯಲ್ಲಿ ಏರಿಕೆ ಇಲ್ಲ. ರಾಜ್ಯದ ಒಟ್ಟು ಬೇಡಿಕೆಯ ಶೇ 70ರಷ್ಟು ಅಕ್ಕಿ ಸ್ಥಳೀಯ ಉತ್ಪಾದನೆಯಿಂದಲೇ ಪೂರೈಕೆಯಾಗುತ್ತಿದೆ ಎಂದು ಸಂಘದ ಕಾರ್ಯದರ್ಶಿ ಎ.ಸಿ. ಮೋಹನ್ ತಿಳಿಸಿದ್ದಾರೆ.
ಕರ್ನಾಟಕದಲ್ಲೂ ಉತ್ಪಾದನೆ ಕುಸಿತದ ಆತಂಕ
ಕರ್ನಾಟಕದಲ್ಲಿಯೂ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಅಕ್ಕಿ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ. ರಾಜ್ಯದ ಅಕ್ಕಿಯ ಕಣಜ ಎಂದೇ ಪ್ರಸಿದ್ಧವಾಗಿರುವ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಕೊರತೆಯಿಂದ ರೈತರು ಭತ್ತದ ಬದಲು ಕಡಿಮೆ ನೀರು ಬೇಕಾಗುವ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ.
ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕೂಡ ರೈತರಿಗೆ ಪರ್ಯಾಯ ಬೆಳೆ ಬೆಳೆಯುವಂತೆ ಸಲಹೆ ನೀಡಿದ್ದಾರೆ.
ಮಳೆ ಕೊರತೆಯ ಪರಿಣಾಮ
ಆಂಧ್ರ ಪ್ರದೇಶದಲ್ಲಿ ಮುಂಗಾರು ಮಳೆ ಕೊರತೆ ಶೇ 51ರಿಂದ 54ರಷ್ಟಿದೆ. ಜುಲೈ ತಿಂಗಳಲ್ಲಿ ಮಾತ್ರ ಶೇ 69ರಷ್ಟು ಮಳೆ ಕೊರತೆ ದಾಖಲಾಗಿದೆ. ಇದರಿಂದ 1.07 ಲಕ್ಷ ಹೆಕ್ಟೇರ್ ಭತ್ತದ ಬೆಳೆ ಹಾನಿಯಾಗುವ ಸಾಧ್ಯತೆ ಇದೆ.
ತೆಲಂಗಾಣದಲ್ಲಿ ಮಳೆ ಕೊರತೆ ಶೇ 25ರಿಂದ 30ರಷ್ಟಿದ್ದು, ಭತ್ತದ ಬೆಳೆಯ ವಿಸ್ತೀರ್ಣ 69.89 ಲಕ್ಷ ಎಕರೆಗಳಿಂದ 38.51 ಲಕ್ಷ ಎಕರೆಗೆ ಇಳಿಯುವ ಸಾಧ್ಯತೆಯಿದೆ.
ಬೆಲೆ ನಿಯಂತ್ರಣಕ್ಕೆ ಸರ್ಕಾರಗಳ ಕ್ರಮ
ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೆಲವು ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡಿವೆ. ಆಂಧ್ರ ಪ್ರದೇಶದಲ್ಲಿ, ರೈತ ಬಜಾರ್ಗಳ ಮೂಲಕ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ಸಬ್ಸಿಡಿ ದರದಲ್ಲಿ ಅಕ್ಕಿ ಮಾರಾಟ ಆರಂಭಿಸಲಾಗಿದೆ. ಸೂಪರ್ ಫೈನ್ ಅಕ್ಕಿಯನ್ನು ₹ 52 ಪ್ರತಿ ಕೆಜಿ, ಬಿಪಿಟಿ ತಳಿಗಳನ್ನು ₹50-52ರಲ್ಲಿ ಮಾರಾಟ ಮಾಡಲಾಗುತ್ತಿದೆ.
ಕೇರಳ ಸರ್ಕಾರ, ಓಣಂ ಹಿನ್ನೆಲೆಯಲ್ಲಿ ಆದ್ಯತೆಯೇತರ ಪಡಿತರ ಚೀಟಿದಾರರಿಗೆ ಸಬ್ಸಿಡಿ ದರದಲ್ಲಿ ಅಕ್ಕಿ ವಿತರಣೆ ಹಾಗೂ ಆರು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಓಣಂ ಕಿಟ್ ವಿತರಿಸುವುದಾಗಿ ಘೋಷಿಸಿದೆ.
ಮುಂದಿನ ವರ್ಷ ಆಹಾರ ಭದ್ರತೆ ಬಗ್ಗೆ ಆತಂಕ
ಕಳೆದ ವರ್ಷದ ಭತ್ತದ ದಾಸ್ತಾನು ಇರುವುದರಿಂದ ಈ ವರ್ಷ ಸಂಕಷ್ಟ ಎದುರಾಗುವುದಿಲ್ಲ. ಆದರೆ ಈ ಬಾರಿಯ ಕುರವೈ ಮತ್ತು ಸಾಂಬಾ ಬೆಳೆ ವಿಫಲವಾದರೆ ಮುಂದಿನ ವರ್ಷ ಆಹಾರ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ತಮಿಳುನಾಡು ಕಾವೇರಿ ರೈತರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಆರ್. ಪಾಂಡಿಯನ್ ಹೇಳಿದರು.

