ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ಶನಿವಾರ 675ಕ್ಕೆ ಏರಿಕೆಯಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಶೋಧ ಮತ್ತು ಪರಿಹಾರ ಕಾರ್ಯಗಳನ್ನು ಮುಂದುವರಿಸಿವೆ. ಅಲ್ಲದೆ, ಚೀನಾ ಭಾಗದಲ್ಲಿಯೂ ಏಳು ಜನ ಮೃತಪಟ್ಟಿದ್ದಾರೆ.
ಇನ್ನೂ 2,426 ಮಂದಿ ನಾಪತ್ತೆಯಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 2,465 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಮತ್ತೊಂದೆಡೆ, ಭೋಟೆ ಕೋಶಿ ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದು ಮತ್ತೊಂದು ಪ್ರವಾಹದ ಭೀತಿಯೂ ಆವರಿಸಿದೆ.
ನಾಪತ್ತೆ ಆದವರಲ್ಲಿ 517 ವಿದೇಶಿಯರು ಮತ್ತು ಜಲವಿದ್ಯುತ್ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 933 ಕಾರ್ಮಿಕರು ಸೇರಿದ್ದಾರೆ. ಅಲ್ಲದೆ 45 ಸೈನಿಕರು, 40 ಪೊಲೀಸ್ ಅಧಿಕಾರಿಗಳು, 19 ವಲಸೆ ಮತ್ತು ಕಸ್ಟಮ್ಸ್ ಅಧಿಕಾರಿಗಳೂ ನಾಪತ್ತೆಯಾಗಿದ್ದಾರೆ.
ಶೋಧ ಕಾರ್ಯದಲ್ಲಿ 11,000 ಸಿಬ್ಬಂದಿ:
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ 5,000ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಸೇರಿದಂತೆ 11,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನೇಪಾಳ ನಿಯೋಜಿಸಿದೆ.
ಇಲ್ಲಿಯವರೆಗೆ 163 ವಿದೇಶಿಯರು ಸೇರಿದಂತೆ ಒಟ್ಟು 2,465 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ನೇಪಾಳ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗ ಮಾಹಿತಿ ನೀಡಿದೆ. ರಸುವಾ ಮತ್ತು ತ್ರಿಶೂಲಿಯಲ್ಲಿನ ವಿವಿಧ ಜಲವಿದ್ಯುತ್ ಯೋಜನೆಗಳ ಸುರಂಗಗಳಿಂದ 191 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ.
113 ಭಾರತೀಯರು ಸ್ಥಳಾಂತರ:
ವಿದೇಶಿಯರ ಪೈಕಿ 113 ಭಾರತೀಯರು, 26 ಚೀನೀಯರು, ದಕ್ಷಿಣ ಕೊರಿಯಾದ 15 ಮಂದಿ, ಜರ್ಮನಿಯ ನಾಲ್ವರು, ಇಟಲಿ, ಅಮೆರಿಕದ ತಲಾ ಇಬ್ಬರು ಮತ್ತು ಒಮನ್‌ನ ಒಬ್ಬ ಪ್ರಜೆಯನ್ನು ಸ್ಥಳಾಂತರಿಸಲಾಗಿದೆ ಎಂದು ಅದು ತಿಳಿಸಿದೆ.
ಒಟ್ಟು 2,265 ಜನರನ್ನು ಹೆಲಿಕಾಪ್ಟರ್‌ಗಳ ಮೂಲಕ ಮತ್ತು 200 ಮಂದಿಯನ್ನು ಭೂಮಾರ್ಗದ ಮೂಲಕ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಧುಂಚೆ ಮತ್ತು ತ್ರಿಶೂಲಿಯಲ್ಲಿ ಸ್ಥಾಪಿಸಲಾಗಿರುವ ತುರ್ತು ಆರೋಗ್ಯ ಕೇಂದ್ರಗಳಲ್ಲಿ 1,706 ಮಂದಿಗೆ ವೈದ್ಯಕೀಯ ನೆರವು ನೀಡಲಾಗಿದೆ.
ಪ್ರವಾಹ ಮತ್ತು ಭೂಕುಸಿತದ ಭೀತಿಯಿಂದ ಬುಧವಾರ ಮುಚ್ಚಲಾಗಿದ್ದ ಮುಗ್ಲಿಂಗ್-ಕಠ್ಮಂಡು ಹೆದ್ದಾರಿಯಲ್ಲಿ ಸಂಚಾರವನ್ನು ಶನಿವಾರ ಪುನರಾರಂಭಿಸಲಾಗಿದೆ. ಇದು ರಾಜಧಾನಿಯನ್ನು ದೇಶದ ಇತರ ಭಾಗಗಳ ಜತೆಗೆ ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿದೆ.
ಮರಳಿದ 54 ಕನ್ನಡಿಗರು
ದೇವನಹಳ್ಳಿ: ಪ್ರವಾಹಪೀಡಿತ ನೇಪಾಳದಲ್ಲಿ ಸಿಲುಕಿದ್ದ ರಾಜ್ಯದ 54 ಪ್ರವಾಸಿಗರು ಸುರಕ್ಷಿತವಾಗಿ ಶನಿವಾರ ರಾತ್ರಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರನ್ನು ಕಂಡ ಕೂಡಲೇ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರುಬಿಟ್ಟರು.
'ಜೀವ ಉಳಿದಿದ್ದೇ ದೊಡ್ಡ ಅದೃಷ್ಟ. ಆ ಕ್ಷಣಗಳನ್ನು ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ' ಎಂದು ಬದುಕಿಬಂದವರು ಅನುಭವ ಹಂಚಿಕೊಂಡರು.
ಹಾವೇರಿ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದವರಿದ್ದ ಈ ತಂಡ ಆ. 23ರಂದು ನೇಪಾಳ ಪ್ರವಾಸ ಕೈಗೊಂಡಿತ್ತು. ಪ್ರವಾಸಿಗರ ಸುರಕ್ಷಿತ ವಾಪಸಾತಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿತ್ತು. ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ, ಬಳಿಕ ಉತ್ತರ ಪ್ರದೇಶದ ಗೋರಖ್ಪುರಕ್ಕೆ ಕರೆತರಲಾಗಿತ್ತು. ಅಲ್ಲಿಂದ ವಿಮಾನದ ಮೂಲಕ ಅವರು ಬೆಂಗಳೂರಿಗೆ ವಾಪಸಾದರು.
ಗಂಡಕ್ ನದಿಯಲ್ಲಿ ಮೂರು ಶವ ಪತ್ತೆ
ಕುಶಿನಗರ: ಪಕ್ಕದ ನೇಪಾಳದಲ್ಲಿನ ಭೀಕರ ಪ್ರವಾಹದಿಂದ ಭಾರತದ ಭೂ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದಿರಬಹುದಾದ ಮೂರು ಮೃತದೇಹಗಳನ್ನು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಗಂಡಕ್ ನದಿಯಿಂದ ಶನಿವಾರ ಹೊರತೆಗೆಯಲಾಗಿದೆ. ಪೊಲೀಸರು ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 'ಪತ್ತೆಯಾದ ಮೃತದೇಹಗಳ ಕುರಿತ ಮಾಹಿತಿಯನ್ನು ನೇಪಾಳದ ಗಡಿಭಾಗದ ಜಿಲ್ಲೆಗಳ ಅಧಿಕಾರಿಗಳ ಜತೆ ಹಂಚಿಕೊಳ್ಳಲಾಗಿದೆ' ಎಂದು ಖಡ್ಡಾ ಪೊಲೀಸ್ ಠಾಣಾಧಿಕಾರಿ ಸಂದೀಪ್ ಸಿಂಗ್ ಹೇಳಿದ್ದಾರೆ. ಗಂಡಕ್ ನದಿಯಲ್ಲಿ ವಾಹನಗಳು ಗೃಹೋಪಯೋಗಿ ವಸ್ತುಗಳು ಅನಿಲ ಸಿಲಿಂಡರ್‌ಗಳು ಪೀಠೋಪಕರಣಗಳು ಮರದ ದಿಮ್ಮಿಗಳು ಮತ್ತು ತ್ಯಾಜ್ಯದಂತಹ ವಸ್ತುಗಳು ತೇಲುತ್ತಾ ದಡಕ್ಕೆ ಬರುತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೆರವಿಗೆ 11 ಸದಸ್ಯರ ಭಾರತ ತಂಡ
ಕಠ್ಮಂಡು: ಪ್ರವಾಹದಿಂದ ನಲುಗಿರುವ ನೇಪಾಳಕ್ಕೆ ನೆರವಾಗಲು 11 ಸದಸ್ಯರ ಭಾರತೀಯ ತಜ್ಞರ ತಂಡವೊಂದು ಶನಿವಾರ ಇಲ್ಲಿಗೆ ಬಂದಿಳಿಯಿತು. ನೇಪಾಳ ಸರ್ಕಾರದ ಕೋರಿಕೆ ಮೇರೆಗೆ ವೈದ್ಯಕೀಯ ಸಿಬ್ಬಂದಿ ಮತ್ತು ಸುರಂಗ ರಕ್ಷಣಾ ಕಾರ್ಯಾಚರಣೆಯ ತಜ್ಞರನ್ನು ಒಳಗೊಂಡ ತಂಡವನ್ನು ಕಳುಹಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿಯ ಮೂಲಗಳು ತಿಳಿಸಿವೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಾರಿಗೆ ಸೇವೆಯನ್ನು ಪುನರಾರಂಭಿಸಲು 42 ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸುವ ಕಾರ್ಯಕ್ಕೆ ನೆರವಾಗುವಂತೆ ನೇಪಾಳ ಸರ್ಕಾರವು ಭಾರತ ಮತ್ತು ಚೀನಾವನ್ನು ಕೋರಿತ್ತು.

