ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಇಟ್ಟಿಗೆ ಭಟ್ಟಿಯೊಂದರ (ಗೂಡು) ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಛತ್ತೀಸಗಢ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಕೇಲಂ ಪ್ರದೇಶದಲ್ಲಿರುವ ಇಟ್ಟಿಗೆ ಗೂಡಿನಲ್ಲಿದ್ದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಉಗ್ರರು ಶುಕ್ರವಾರ ಸಂಜೆ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭೂಪೇಂದರ್, ದೀಪಕ್ ರತ್ರಾಯ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅನಂತ್ನಾಗ್ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಉಗ್ರರು ಗುಂಡಿಕ್ಕಿ ಕೊಂದ 10 ದಿನಗಳ ಅಂತರದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ.
2024ರ ಫೆಬ್ರುವರಿ 7ರಂದು ಶ್ರೀನಗರದ ಶಹೀದ್ ಗಂಜ್ ಪ್ರದೇಶದಲ್ಲಿ ಪಂಜಾಬ್ ಮೂಲದ ಅಮೃತ್ಪಾಲ್ ಸಿಂಗ್ ಮತ್ತು ರೋಹಿತ್ ಮಸಿಹ್ ಎಂಬ ಹೊರರಾಜ್ಯದ ಕಾರ್ಮಿಕರನ್ನು ಉಗ್ರನೊಬ್ಬ ಗುಂಡಿಕ್ಕಿ ಕೊಂದಿದ್ದ.

