ಕಠ್ಮಂಡು: 'ಒಂದೇ ಸಲಕ್ಕೆ ಐದರಿಂದ ಆರು ಹೆಲಿಕಾಪ್ಟರ್ಗಳು ಇಳಿಯುತ್ತಿದ್ದವು, ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯ ಸಾಗುತ್ತಲೇ ಇತ್ತು. ಕೆಲವೊಮ್ಮೆ ಮಣ್ಣು ತುಂಬಿದ ನೆಲದ ಮೇಲೆ ಹೆಲಿಕಾಪ್ಟರ್ ಲ್ಯಾಂಡ್ ಮಾಡುವುದೇ ದೊಡ್ಡ ಸವಾಲಾಗಿತ್ತು, ಆದರೂ ಜನರ ರಕ್ಷಣೆ ನಡೆಯುತ್ತಲೇ ಸಾಗಿತ್ತು' ಹೀಗೆ ನೇಪಾಳದ ಭೀಕರ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯ ನಡೆಸಿದ ಬಗ್ಗೆ ನೇಪಾಳದ ಮೊದಲ ಮಹಿಳಾ ಹೆಲಿಕಾಪ್ಟರ್ ಕ್ಯಾಪ್ಟನ್ 40 ವರ್ಷದ ಪ್ರಿಯಾ ಅಧಿಕಾರಿ ವಿವರಿಸಿದ್ದರು.
ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಸಾವಿರ ದಾಟಿದೆ. ನೂರಾರು ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ 5 ಸಾವಿರಕ್ಕೂ ಹೆಚ್ಚು ಜನರ ಸುಳಿವೇ ಇಲ್ಲ.
ಕಾರ್ಯಾಚರಣೆ, ನೇಪಾಳದ ರಸುವಾ ಜಿಲ್ಲೆಯಲ್ಲಿನ ಪರಿಸ್ಥಿತಿ ಬಗ್ಗೆ 'ಸಿಎನ್ಎನ್' ಜತೆ ಮಾತನಾಡಿರುವ ಪ್ರಿಯಾ ಅವರು, 'ಇಷ್ಟು ದೊಡ್ಡ ಪ್ರಮಾಣದಲ್ಲಿ ದುರಂತ ಸಂಭವಿಸಿದ್ದನ್ನು ನೋಡಿರಲಿಲ್ಲ. ನಾವು ಮಾಡುತ್ತಿರುವ ಸರಣಿ ವಿಮಾನ ಪ್ರಯಾಣಗಳಿಂದಾಗಿ ನಮ್ಮಲ್ಲಿ ಹೆಚ್ಚಿನವರು ತೀವ್ರ ಬಳಲಿದ್ದಾರೆ. ರಸುವಾ ಜಿಲ್ಲೆಯ ತಿಮುರೆ ಹಳ್ಳಿಯಲ್ಲಿ ಸುಮಾರು 20 ಹೆಲಿಕಾಪ್ಟರ್ಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ' ಎಂದಿದ್ದಾರೆ.
'ಬದುಕುಳಿದವರನ್ನು ರಕ್ಷಣಾ ವಾಹನಕ್ಕೆ ಅಥವಾ ವಿಮಾನಕ್ಕೆ ಕರೆತರುವ ಮೊದಲೇ ಅಪಾಯ ಆರಂಭವಾಗುತ್ತದೆ. ಕೆಲವು ಪ್ರದೇಶಗಳು ಎಷ್ಟು ದಪ್ಪನೆಯ ಕೆಸರಿನಿಂದ ಆವೃತವಾಗಿವೆಯೆಂದರೆ, ಅಲ್ಲಿ ಹೆಲಿಕಾಪ್ಟರ್ಗಳು ಸುರಕ್ಷಿತವಾಗಿ ಇಳಿದು ಎಂಜಿನ್ ಸ್ಥಗಿತಗೊಳಿಸಲು ಸಾಧ್ಯವಾಗುವುದಿಲ್ಲ. ರಕ್ಷಣಾ ಕಾರ್ಯಾಚರಣೆಯುದ್ದಕ್ಕೂ ಪೈಲಟ್ಗಳು ಹೆಲಿಕಾಪ್ಟರ್ನ ಎಂಜಿನ್ ಅನ್ನು ಚಾಲನೆಯಲ್ಲಿಯೇ ಇರಿಸಬೇಕಾಗುತ್ತದೆ' ಎಂದಿದ್ದಾರೆ.
'ಮೊದಲ ಎರಡು ದಿನಗಳಲ್ಲಿ 200 ಕ್ಕೂ ಹೆಚ್ಚು ಜನರನ್ನು ಆ ಪ್ರದೇಶದಿಂದ ಸ್ಥಳಾಂತರಿಸಲಾಯಿತು, ಕಾರ್ಯಾಚರಣೆಯಲ್ಲಿ ಸೇನೆಯ ಆಗಸ್ಟಾ ಹೆಲಿಕಾಪ್ಟರ್ಗಳು ಸೇರಿದಂತೆ ಆರು ಹೆಲಿಕಾಪ್ಟರ್ಗಳು ಭಾಗಿಯಾಗಿದ್ದವು. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಾವಿರಾರು ಜನರ ಜೀವ, ಐದು ಜಲವಿದ್ಯುತ್ ಯೋಜನೆಗಳು ಸಂಪೂರ್ಣವಾಗಿ ನಾಶವಾಗಿವೆ. ಇವೆಲ್ಲದರ ನಡುವೆ ಬದುಕುಳಿದವರ ನಿಟ್ಟುಸಿರ ನಗು, ಕೊಂಚ ನೆಮ್ಮದಿ ಕೊಡುತ್ತದೆ' ಎಂದಿದ್ದಾರೆ.
ಯಾರು ಪ್ರಿಯಾ ಅಧಿಕಾರಿ?
ಪುರುಷ ಪ್ರಧಾನ ಕ್ಷೇತ್ರದಲ್ಲಿ, ಮೊದಲ ಮಹಿಳಾ ಹೆಲಿಕಾಪ್ಟರ್ ಕ್ಯಾಪ್ಟನ್ ಆಗಿ ಛಾಪು ಮೂಡಿಸಿದವರು ಪ್ರಿಯಾ ಅಧಿಕಾರಿ.
ಪರಿಸರ ವಿಜ್ಞಾನ ಓದಿರುವ ಪ್ರಿಯಾ ಆರಂಭದಲ್ಲಿ ವಿಮಾನಗಳಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಫಿಲಿಫ್ಪೀನ್ಸ್ನಲ್ಲಿ ಹೆಲಿಕಾಪ್ಟರ್ ಚಾಲನಾ ತರಬೇತಿ ಪಡೆದು, 2017ರಲ್ಲಿ ಪೂರ್ಣಕಾಲಿಕ ಹೆಲಿಕಾಪ್ಟರ್ ಪೈಲಟ್ ಆದರು.

