ಕಾಸರಗೋಡು: ಬಚ್ಚಲುಮನೆಯಲ್ಲಿ ಕಟ್ಟಿ ಹಾಕಿದ್ದ ಕೋಳಿಯನ್ನು ಹೆಬ್ಬಾವು ಹಗ್ಗ ಸಹಿತ ನುಂಗಿದ್ದು, ಪಾರಾಗಲಾಗದೆ ಚಡಪಡಿಸುತ್ತಿದ್ದ ಹೆಬ್ಬಾವನ್ನು ಉರಗತಜ್ಞರ ಸಹಾಯದಿಂದ ರಕ್ಷಿಸಲಾಗಿದೆ. ಪೆರಿಯ ಆಯಂಬಾರ ಕಾನತ್ತಿಲ್ ನಿವಾಸಿ ಮಾಲತಿ ಎಂಬವರ ಮನೆಯ ಹುಂಜವನ್ನು ಹೆಬ್ಬಾವು ನುಂಗಿದೆ. ಎಂದಿನಂತೆ ಬುಧವಾರ ಕೋಳಿಗೆ ಆಹಾರ ನೀಡಲು ಮಾಲತಿ ತೆರಳಿದಾಗ, ಕೋಳಿ ನಾಫತ್ತೆಯಾಗಿದ್ದು, ಇನ್ನೊಂದು ಪಾಶ್ರ್ವದಲ್ಲಿ ಕೋಳಿಯನ್ನು ಹಗ್ಗ ಸಹಿತ ನುಂಗಿದ ಸ್ಥಿತಿಯಲ್ಲಿ ಹೆಬ್ಬಾವು ಕಾಣಿಸಿಕೊಂಡಿತ್ತು.
ಕೋಳಿಯನ್ನು ಬಿಗಿದ ಸ್ಥಿತಿಯಲ್ಲೇ ನುಂಗಿದ ಪರಿಣಾಮ ಹೆಬ್ಬಾವಿಗೆ ಅಲ್ಲಿಂದ ಕದಲಲಾಗದ ಸ್ಥಿತಿ ನಿರ್ಮಾಣವಾಗಿತ್ತು.
ನಂತರ ಸ್ನೇಕ್ ರೆಸ್ಕ್ಯೂವರ್ ಹಾಗೂ ಪರಿಸರ ಕಾರ್ಯಕರ್ತ ಕೆಪಿಎಸ್ ಪನಯಾಲ್ ಸ್ಥಳಕ್ಕಾಗಮಿಸಿ, ಕೋಳಿಯನ್ನು ಕಟ್ಟಿಹಾಕಲಾದ ಹಗ್ಗವನ್ನು ತುಂಡರಿಸಿ ಹೆಬ್ಬಾವನ್ನು ರಕ್ಷಿಸಿದ್ದಾರೆ.


