ವಾಷಿಂಗ್ಟನ್: ಅಮೆರಿಕದಲ್ಲಿ ಜನ್ಮದತ್ತ ಪೌರತ್ವ ನಿಯಮಕ್ಕೆ ಕಡಿವಾಣ ಹಾಕಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಮುಂದಾಗಿದೆ. ಅದರ ಭಾಗವಾಗಿ, ಇನ್ಮುಂದೆ ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಪಾಸ್‌ಪೋರ್ಟ್ ಪಡೆಯಲು, ಅವರ ಪೋಷಕರು ತಮ್ಮ ಪೌರತ್ವ ಅಥವಾ ವಲಸೆ ದಾಖಲೆಗಳನ್ನು (Immigration status) ಸಲ್ಲಿಸುವುದು ಕಡ್ಡಾಯವಾಗಿದೆ.
ಅಮೆರಿಕದ ವಿದೇಶಾಂಗ ಇಲಾಖೆ (State Department) ಸಿದ್ಧಪಡಿಸಿರುವ ಹೊಸ ನಿಯಮಗಳ ಕರಡು ಪ್ರತಿಯಲ್ಲಿ ಈ ಪ್ರಸ್ತಾವನೆ ಇದೆ. ಆಗಸ್ಟ್ 6 ರಂದು ಟ್ರಂಪ್ ಹೊರಡಿಸಿದ್ದ ಕಾರ್ಯಾದೇಶವನ್ನು (EO 14418) ಅನುಷ್ಠಾನಗೊಳಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರವಾಸಿಗರು (ಮುಖ್ಯವಾಗಿ ಗರ್ಭಿಣಿಯರು) ಎಂದು ಹೇಳಿಕೊಂಡು ಅಮೆರಿಕಕ್ಕೆ ಬರುತ್ತಾರೆ. ಆದರೆ ಅವರ ಮೂಲ ಉದ್ದೇಶ, ಇಲ್ಲಿಯೇ ಮಗುವಿಗೆ ಜನ್ಮ ನೀಡುವುದು ಹಾಗೂ ಆ ಮೂಲಕ ಜನ್ಮದತ್ತ ಪೌರತ್ವ ದೊರೆಯುವಂತೆ ನೋಡಿಕೊಳ್ಳುವುದು. ಈ 'ಬರ್ತ್ ಟೂರಿಸಂ'ಗೆ ಕಡಿವಾಣ ಹಾಕುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಹೊಸ ಪ್ರಸ್ತಾವನೆಯಲ್ಲಿ ಏನಿದೆ?
ಹಾಲಿ ಇರುವ ನಿಯಮ: ಪ್ರಸ್ತುತ ನಿಯಮಗಳ ಪ್ರಕಾರ, ಅಮೆರಿಕದಲ್ಲಿ ಜನಿಸಿದ ಮಗುವಿನ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ಪೋಷಕರು ಮಗುವಿನೊಂದಿಗಿನ ಫೋಟೊ ಮತ್ತು ತಮ್ಮ ಗುರುತಿನ ಚೀಟಿಯನ್ನು (Photo ID) ನೀಡಿದರೆ ಸಾಕಾಗುತ್ತದೆ. ಅರ್ಜಿ ನಮೂನೆಯಲ್ಲಿ ಪೌರತ್ವದ ವಿವರಗಳನ್ನು ಭರ್ತಿ ಮಾಡಿದರೂ, ಅದಕ್ಕೆ ಪ್ರತ್ಯೇಕ ದಾಖಲೆ ಸಾಬೀತುಪಡಿಸುವುದು ಕಡ್ಡಾಯವಾಗಿರಲಿಲ್ಲ.
ಏನು ಬದಲಾವಣೆ: ಹೊಸ ನಿಯಮ ಜಾರಿಗೆ ಬಂದರೆ, ಪೋಷಕರು ಅಮೆರಿಕದ ಪ್ರಜೆಗಳಾಗಿದ್ದರೆ ತಮ್ಮ ಪಾಸ್‌ಪೋರ್ಟ್ ಅಥವಾ ಜನನ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ವಿದೇಶಿ ಪ್ರಜೆಗಳು/ವಲಸಿಗರಾಗಿದ್ದರೆ ಗ್ರೀನ್ ಕಾರ್ಡ್ ಅಥವಾ I-94 ಫಾರ್ಮ್‌ನಂತಹ ವಲಸೆ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಲಿದೆ.
ಈ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರ ಆ ಮಗುವಿಗೆ ಪಾಸ್‌ಪೋರ್ಟ್ ನೀಡಬೇಕೋ ಬೇಡವೋ ಎಂದು ನಿರ್ಧರಿಸುತ್ತದೆ.
ಯಾರಿಗೆಲ್ಲ ತೊಂದರೆ?
ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಸರ್ಕಾರದ ಉದ್ಯೋಗಿಗಳು
ವಂಚನೆ ಅಥವಾ ಹಣಕಾಸಿನ ವ್ಯವಹಾರದ ಮೂಲಕ ಪೌರತ್ವ ಪಡೆಯಲು ಯತ್ನಿಸಿದವರು
'ಏಲಿಯನ್ ಎನಿಮಿ' (ಶತ್ರು ದೇಶದ ಪ್ರಜೆಗಳು) ಎಂದು ವರ್ಗೀಕರಿಸಲ್ಪಟ್ಟವರು
ಕಾನೂನು ಸಮರ ಮತ್ತು ವಿರೋಧ:
ಟ್ರಂಪ್ ಆಡಳಿತದ ಈ ನಿರ್ಧಾರಕ್ಕೆ ಈಗಾಗಲೇ ವ್ಯಾಪಕ ಕಾನೂನು ಸವಾಲುಗಳು ಎದುರಾಗಿವೆ. ಅಮೆರಿಕದಲ್ಲಿ ಜನಿಸಿದ ಯಾವುದೇ ವ್ಯಕ್ತಿಯು ಜನ್ಮದತ್ತ ಪೌರತ್ವಕ್ಕೆ ಅರ್ಹ ಎಂಬ ಕಾನೂನನ್ನು ರದ್ದುಗೊಳಿಸುವ ಕಾರ್ಯಾದೇಶಕ್ಕೆ ಟ್ರಂಪ್ ಅವರು ಈ ಹಿಂದೆ ಸಹಿ ಹಾಕಿದ್ದರು. ಆದರೆ, 2026ರ ಜೂನ್ 30ರಂದು ಈ ಕಾರ್ಯಾದೇಶವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು.
ಸುಪ್ರೀಂ ಕೋರ್ಟ್ ಆದೇಶವು 'ದುರದೃಷ್ಟಕರ' ಎಂದಿದ್ದ ಟ್ರಂಪ್ ಇದೀಗ ಕೆಲವು ಹೊಂದಾಣಿಕೆಗಳನ್ನು ಅಳವಡಿಸಿಕೊಂಡ ಹೊಸ ಕಾರ್ಯಾದೇಶಕ್ಕೆ ಇತ್ತೀಚೆಗೆ ಸಹಿ ಹಾಕಿದ್ದಾರೆ.
ಪ್ರಸ್ತುತ ಹೊಸ ಕಾರ್ಯಾದೇಶದ ವಿರುದ್ಧವೂ ಫೆಡರಲ್ ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಕಾನೂನು ಸಮರ ಮುಂದುವರಿದಿದೆ.
1868ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು, ಅಮೆರಿಕದಲ್ಲಿ ಜನಿಸಿದವರೆಲ್ಲರೂ ಅಮೆರಿಕದ ನಾಗರಿಕರು ಎಂಬ ಕಾನೂನನ್ನು ಜಾರಿಗೊಳಿಸಲಾಗಿತ್ತು. ನಾಗರಿಕ ಯುದ್ಧದ ಬಳಿಕ, ಗುಲಾಮರ ಮಕ್ಕಳಿಗಾಗಿ ಈ ಕಾನೂನನ್ನು ಜಾರಿಗೆ ತರಲಾಗಿತ್ತು. ಆದರೆ ಇಂದು, ಇದೊಂದು ಉದ್ಯಮವಾಗಿ ಬೆಳೆಯುತ್ತಿದೆ ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು.

