ನವದೆಹಲಿ: ಬಿಹಾರದ ಜಮೂಯಿ ಜಿಲ್ಲೆಯಲ್ಲಿ ಯುವತಿ ಹಾಗೂ ಆಕೆಯ ಗೆಳೆಯನ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದ ಆರೋಪದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಸೋಮವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಜೋಡಿಯನ್ನು ಸೆ.19ರಂದು ರಾತ್ರಿ ವೇಳೆ ತಡೆದ ಗುಂಪೊಂದು, ಯುವತಿಯನ್ನು ಎಳೆದಾಡಿ ಕಿರುಕುಳ ನೀಡಿದ ಮತ್ತು ಯುವಕನ ಮೇಲೆ ಹಲ್ಲೆ ನಡೆಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
'ತಕ್ಷಣ ಎಫ್‌ಐಆರ್ ದಾಖಲಿಸಬೇಕು. ಲಭ್ಯವಿರುವ ವಿಡಿಯೊ ಆಧರಿಸಿ, ಎಲ್ಲ ಆರೋಪಿಗಳನ್ನು ಗುರುತಿಸಬೇಕು ಮತ್ತು ಬಂಧಿಸಬೇಕು ಹಾಗೂ ಕಾಲಮಿತಿಯಲ್ಲಿ ಪಾರದರ್ಶಕ ತನಿಖೆ ನಡೆಸಬೇಕು' ಎಂದು ಆಯೋಗವು ಬಿಹಾರದ ಡಿಜಿಪಿಗೆ ಪತ್ರ ಬರೆದಿದೆ.
'ಜೋಡಿಯ ಭದ್ರತೆಯನ್ನು ಖಾತರಿಪಡಿಸಬೇಕು, ಕಾನೂನು ಹಾಗೂ ಮಾನಸಿಕ ಬೆಂಬಲ ನೀಡಬೇಕು. ಅವರ ಖಾಸಗಿತನ ರಕ್ಷಣೆಯ ದೃಷ್ಟಿಯಿಂದ, ವಿಡಿಯೊ ಮತ್ತಷ್ಟು ಪ್ರಸಾರವಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಹಾಗೂ ಕ್ರಮ ಕೈಗೊಂಡ ಬಗ್ಗೆ ಏಳು ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು' ಎಂದು ಆಯೋಗವು ರಾಜ್ಯ ಸರ್ಕಾರಕ್ಕೂ ನಿರ್ದೇಶನ ನೀಡಿದೆ.
'ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಮೂವರನ್ನು ಬಂಧಿಸಲಾಗಿದ್ದು, ಇತರರಿಗಾಗಿ ಶೋಧ ನಡೆದಿದೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

