ನವದೆಹಲಿ: 2025ರಲ್ಲಿ ಸರ್ಕಾರಿ ಸಂಸ್ಥೆಗಳ ವಿರುದ್ಧ ಒಟ್ಟು 70,584 ಭ್ರಷ್ಟಾಚಾರ ದೂರುಗಳು ದಾಖಲಾಗಿವೆ. ಬ್ಯಾಂಕಿಂಗ್ ಕ್ಷೇತ್ರದ ವಿರುದ್ಧವೇ ಅತಿ ಹೆಚ್ಚು ದೂರುಗಳು ದಾಖಲಾಗಿದ್ದು, ರೈಲ್ವೆ ಇಲಾಖೆ ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ಜಾಗೃತ ಆಯೋಗ (CVC)ದ ವಾರ್ಷಿಕ ವರದಿ ತಿಳಿಸಿದೆ.
ಒಟ್ಟು ದೂರುಗಳ ಪೈಕಿ 64,905ನ್ನು ಮುಖ್ಯ ಜಾಗೃತ ಅಧಿಕಾರಿಗಳು (CVO) 2025ರ ಡಿಸೆಂಬರ್ 31ರೊಳಗೆ ವಿಲೇವಾರಿ ಮಾಡಿದ್ದಾರೆ. ಇನ್ನೂ 5,679 ದೂರುಗಳು ಬಾಕಿ ಇವೆ. ಈ ಪೈಕಿ 2,002 ದೂರುಗಳು ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ.
ಬ್ಯಾಂಕಿಂಗ್ ಕ್ಷೇತ್ರದ ವಿರುದ್ಧ 9,933 ದೂರುಗಳು ದಾಖಲಾಗಿದ್ದು, 9,520ನ್ನು ವಿಲೇವಾರಿ ಮಾಡಲಾಗಿದೆ. 413 ದೂರುಗಳು ಬಾಕಿ ಇವೆ.
ರೈಲ್ವೆ ಇಲಾಖೆ ವಿರುದ್ಧ 9,381 ದೂರುಗಳು ಬಂದಿವೆ. ಈ ಪೈಕಿ 8,754ನ್ನು ವಿಲೇವಾರಿ ಮಾಡಲಾಗಿದ್ದು, 627 ದೂರುಗಳು ಬಾಕಿ ಇವೆ.
ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ವಿರುದ್ಧ 6,531, ಸ್ಥಳೀಯ ಸಂಸ್ಥೆಗಳ ವಿರುದ್ಧ 4,834 ದೂರುಗಳು ದಾಖಲಾಗಿವೆ.
ಕಲ್ಲಿದ್ದಲು ವಲಯದ ವಿರುದ್ಧ 4,118, ಹಣಕಾಸು ಇಲಾಖೆಯ ವಿರುದ್ಧ 3,107, ದಿಲ್ಲಿ ಸರ್ಕಾರದ ವಿರುದ್ಧ 2,804, ಪೆಟ್ರೋಲಿಯಂ ಸಚಿವಾಲಯದ ವಿರುದ್ಧ 2,722, ದಿಲ್ಲಿ ಪೊಲೀಸರ ವಿರುದ್ಧ 2,633, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ವಿರುದ್ಧ 2,139 ಹಾಗೂ ಗೃಹ ವ್ಯವಹಾರಗಳ ಸಚಿವಾಲಯದ ವಿರುದ್ಧ 2,036 ದೂರುಗಳು ದಾಖಲಾಗಿವೆ ಎಂದು ವರದಿ ಹೇಳಿದೆ.

