HEALTH TIPS

ಆರೋಪಿಗೆ FIR ಪ್ರತಿಯನ್ನು ನಿರಾಕರಿಸಬಹುದೇ?; ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳೇನು?

ನವದೆಹಲಿ: ರಸ್ತೆ ಜಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರಿಗೆ ಎಫ್‌ಐಆರ್ (ಈIಖ) ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಪ್ರತಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಗಾಝಿಯಾಬಾದ್ ಪೊಲೀಸರಿಗೆ ಆದೇಶಿಸಿದೆ. ಅಯೋಧ್ಯೆಯ ರಾಮಮಂದಿರ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವರದಿ ಮಾಡಿದ್ದ ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಮತ್ತು ಪದೇ ಪದೇ ಮನವಿ ಮಾಡಿದರೂ ಪೊಲೀಸರು ಈIಖ ಪ್ರತಿ ನೀಡುತ್ತಿಲ್ಲ ಎಂದು ಅಭಿಷೇಕ್ ಆರೋಪಿಸಿದ್ದರು. 


ನ್ಯಾಯಾಲಯ ಮಧ್ಯಪ್ರವೇಶಿಸಿದ್ದು ಏಕೆ?

ರಸ್ತೆ ಜಗಳ ಮತ್ತು ನಿಂದನೀಯ ನಡವಳಿಕೆಗೆ ಸಂಬಂಧಿಸಿದಂತೆ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಲು ಆಗಸ್ಟ್ 20ರಂದು ಪೊಲೀಸರ ತಂಡವೊಂದು ತಮ್ಮ ಮನೆಗೆ ಬಂದಿತ್ತು ಎಂದು ಉಪಾಧ್ಯಾಯ ಆರೋಪಿಸಿದ್ದಾರೆ.

ಮರುದಿನ ಎಕ್ಸ್ ಖಾತೆಯಲ್ಲಿ ಬರೆದುಕೊಂಡ ಅವರು, FIR ಪ್ರತಿಯನ್ನು ಪದೇ ಪದೇ ಕೇಳಿದರೂ, ಪೊಲೀಸರು ಆರಂಭದಲ್ಲಿ ತಮಗೆ ಕಳುಹಿಸಿದ ಪುಟದಲ್ಲಿ ಯಾವುದೇ ಕಾನೂನು ಸೆಕ್ಷನ್ ಗಳಾಗಲಿ ಅಥವಾ ಆರೋಪಿತ ಅಪರಾಧದ ವಿವರಗಳಾಗಲಿ ಇರಲಿಲ್ಲ. ನಂತರ ತಮ್ಮ ವಿರುದ್ಧ ಲಕ್ನೋದಲ್ಲಿ ದಾಖಲಾಗಿದ್ದ ಹಳೆಯ FIR ಪ್ರತಿಯನ್ನು ಹಂಚಿಕೊಂಡರು ಎಂದು ದೂರಿದ್ದಾರೆ.

ತಮ್ಮ ಪತ್ರಿಕಾ ವೃತ್ತಿಯಿಂದಾಗಿ ತಮ್ಮನ್ನು ಪೀಡಿಸುವ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಹೊರಿಸಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಪ್ರಕರಣದ FIR ಪ್ರತಿಯನ್ನು ತಮಗೆ ನೀಡಬೇಕು, ನಡಾವಳಿಗಳನ್ನು ವಜಾಗೊಳಿಸಬೇಕು ಅಥವಾ ಪರ್ಯಾಯವಾಗಿ ತನಿಖೆಯನ್ನು ಸ್ವತಂತ್ರ ಸಂಸ್ಥೆಗೆ ವರ್ಗಾಯಿಸಬೇಕು ಎಂದು ಅವರು ಕೋರಿದ್ದರು.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು, ಉಪಾಧ್ಯಾಯ ಅವರಿಗೆ FIR ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಮತ್ತು ಸೆಪ್ಟೆಂಬರ್ 7ರ ವೇಳೆಗೆ ಅನುಪಾಲನಾ ವರದಿ ಸಲ್ಲಿಸುವಂತೆ ಗಾಝಿಯಾಬಾದ್ ಪೊಲೀಸ್ ಕಮಿಷನರ್ಗೆ ನಿರ್ದೇಶನ ನೀಡಿತು. ಜೊತೆಗೆ, ಅವರ ಬಂಧನಕ್ಕೆ ತಡೆ ನೀಡಿದ ಪೀಠವು ಹೆಚ್ಚಿನ ಪರಿಹಾರಕ್ಕಾಗಿ ಸಂಬಂಧಪಟ್ಟ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಿತು.

►ಶಾಸನಬದ್ಧ ಕಾಯ್ದೆಗಳು ಏನು ಹೇಳುತ್ತವೆ?

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 (BNSS), ಪ್ರಕರಣ ದಾಖಲಾದ ತಕ್ಷಣವೇ ಆರೋಪಿಗೆ FIR ಪ್ರತಿ ನೀಡುವುದನ್ನು ಕಡ್ಡಾಯಗೊಳಿಸುವುದಿಲ್ಲ. ಕಾಯ್ದೆಯ ಸೆಕ್ಷನ್ 173(2)ರ ಪ್ರಕಾರ, ದೂರುದಾರರಿಗೆ ಅಥವಾ ಸಂತ್ರಸ್ತರಿಗೆ ಉಚಿತವಾಗಿ FIR ಪ್ರತಿಯನ್ನು ತಕ್ಷಣವೇ ನೀಡಬೇಕಾಗುತ್ತದೆ. ಆದರೆ ಇದರಲ್ಲಿ ಆರೋಪಿಯ ಉಲ್ಲೇಖವಿಲ್ಲ.

ಮ್ಯಾಜಿಸ್ಟ್ರೇಟ್ ಅವರ ಮುಂದೆ ತನಿಖಾ ಸಂಸ್ಥೆಯು ಚಾರ್ಜ್ಶೀಟ್ ಸಲ್ಲಿಸಿ, ತನಿಖೆ ಪೂರ್ಣಗೊಂಡ ನಂತರದ ಹಂತದಲ್ಲಿ ಮಾತ್ರ ಆರೋಪಿಗೆ FIR ದೊರೆಯಲು ಕಾಯ್ದೆಯಲ್ಲಿ ಅವಕಾಶವಿದೆ. ಸೆಕ್ಷನ್ 230ರ ಪ್ರಕಾರ, ಆರೋಪಿಯು ಕೋರ್ಟ್ ಗೆ ಹಾಜರಾದ ಅಥವಾ ಹಾಜರುಪಡಿಸಲಾದ 14 ದಿನಗಳ ಒಳಗೆ FIR ಮತ್ತು ಚಾರ್ಜ್ಶೀಟ್ ಸೇರಿದಂತೆ ಪ್ರಾಸಿಕ್ಯೂಷನ್ ಆಧರಿಸಿರುವ ದಾಖಲೆಗಳ ಪ್ರತಿಗಳನ್ನು ಮ್ಯಾಜಿಸ್ಟ್ರೇಟ್ ಆರೋಪಿಗೆ ಒದಗಿಸಬೇಕಾಗುತ್ತದೆ.

ಈ ಹಂತಕ್ಕಿಂತ ಮುಂಚಿತವಾಗಿ, ಅಂದರೆ ತನಿಖೆಯ ಅವಧಿಯಲ್ಲಿ FIR ಪಡೆಯುವ ಆರೋಪಿಯ ಹಕ್ಕಿನ ಬಗ್ಗೆ ಬಿಎನ್‌ಎಸ್‌ಎಸ್ ಸ್ಪಷ್ಟವಾಗಿ ಉಲ್ಲೇಖಿಸುವುದಿಲ್ಲ. ಈ ರೀತಿಯ ಸ್ಪಷ್ಟ ಕಾನೂನು ನಿಯಮವಿಲ್ಲದಿರುವುದನ್ನು, ಪ್ರಕರಣ ದಾಖಲಾದ ತಕ್ಷಣವೇ FIR ಪಡೆಯುವ ಆರೋಪಿಯ ಹಕ್ಕನ್ನು ಎತ್ತಿಹಿಡಿದ ನ್ಯಾಯಾಲಯದ ವಿವಿಧ ತೀರ್ಪುಗಳ ಮೂಲಕ ಸರಿದೂಗಿಸಲಾಗಿದೆ.

►FIR ಪಡೆಯುವ ಹಕ್ಕಿನ ಬಗ್ಗೆ ಕೋರ್ಟ್ ಗಳು ಹೇಳಿದ್ದೇನು?

'ಕೋರ್ಟ್ ಆನ್ ಇಟ್ಸ್ ಓನ್ ಮೋಷನ್ (ಅಜಯ್ ಚೌಧರಿ) vs ರಾಜ್ಯ' (2010) ಪ್ರಕರಣದಲ್ಲಿ ದೆಹಲಿ ಹೈಕೋರ್ಟ್, ಬಿಎನ್‌ಎಸ್‌ಎಸ್ ಸೆಕ್ಷನ್ 230ರಲ್ಲಿ ಉಲ್ಲೇಖಿಸಲಾದ ಹಂತಕ್ಕೂ ಮುನ್ನವೇ, ಅಂದರೆ ತನಿಖೆಯ ಅವಧಿಯಲ್ಲೇ ಆರೋಪಿಗೆ FIR ಪ್ರತಿ ಸಿಗುವಂತೆ ಮಾಡಲು ಒಂದು ವ್ಯವಸ್ಥೆಯನ್ನು ರೂಪಿಸಿತು.

ಅದರಂತೆ, ಆರೋಪಿ ಅಥವಾ ಅವರ ಪರ ಅಧಿಕೃತ ಸಂಬಂಧಿಕರು ಠಾಣಾಧಿಕಾರಿಗೆ ಅರ್ಜಿ ಸಲ್ಲಿಸಬಹುದು. ಠಾಣಾಧಿಕಾರಿಯು ಈ ಕೋರಿಕೆಯನ್ನು ಸೂಕ್ತ ಕಾರಣಗಳೊಂದಿಗೆ ಸಹಾಯಕ ಪೊಲೀಸ್ ಕಮಿಷನರ್ (ACP)ಗೆ ರವಾನಿಸಬೇಕಾಗುತ್ತದೆ. ACP ಏಳು ಕೆಲಸದ ದಿನಗಳ ಒಳಗೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ FIR ನೀಡಲು ನಿರಾಕರಿಸಿದರೆ, ಆರೋಪದ ಸ್ವರೂಪ ಮತ್ತು ತನಿಖೆಯ ಹಂತವನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವ ಹಿರಿಯ ಪೊಲೀಸ್ ಅಧಿಕಾರಿಯ ಮುಂದೆ ಅದನ್ನು ಪ್ರಶ್ನಿಸಬಹುದು.

ಪ್ರಕರಣ ದಾಖಲಾದ 24 ಗಂಟೆಗಳ ಒಳಗೆ FIRಗಳನ್ನು ತಮ್ಮ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡುವ ಮೂಲಕ ಈ ತೀರ್ಪು FIRಗಳು ಸುಲಭವಾಗಿ ಸಿಗುವಂತೆ ಮಾಡಿದೆ. ಸೂಕ್ಷ್ಮ ಅಪರಾಧಗಳಿಗೆ ಸಂಬಂಧಿಸಿದ FIRಗಳನ್ನು DCP ಅಥವಾ ಅದಕ್ಕಿಂತ ಮೇಲ್ಪಟ್ಟ ದರ್ಜೆಯ ಅಧಿಕಾರಿಯ ತೀರ್ಮಾನದೊಂದಿಗೆ ಪ್ರಕಟಿಸದೆ ತಡೆಹಿಡಿಯಬಹುದು.

'ರಾಮ್ ನಂದ್ ರಾಥೋಡ್ vs ಹಿಮಾಚಲ ಪ್ರದೇಶ ರಾಜ್ಯ' (2014) ಪ್ರಕರಣದಲ್ಲೂ ಹಿಮಾಚಲ ಪ್ರದೇಶ ಹೈಕೋರ್ಟ್ ಇದೇ ರೀತಿಯ ತೀರ್ಪು ನೀಡಿತ್ತು. FIRನಲ್ಲಿ ತಮ್ಮ ಹೆಸರು ಇರುವ ಶಂಕೆ ವ್ಯಕ್ತಪಡಿಸುವ ವ್ಯಕ್ತಿಯು ಪೊಲೀಸರಿಂದ ಪ್ರಮಾಣೀಕೃತ ಪ್ರತಿಯನ್ನು ಕೋರಬಹುದು, ಅದನ್ನು 24 ಗಂಟೆಗಳ ಒಳಗೆ ಒದಗಿಸಬೇಕು ಎಂದು ಕೋರ್ಟ್ ಹೇಳಿತ್ತು. ಜೊತೆಗೆ, ಸೂಕ್ಷ್ಮ ಪ್ರಕರಣಗಳನ್ನು ಹೊರತುಪಡಿಸಿ, ಉಳಿದ FIRಗಳನ್ನು ಅದೇ ಸಮಯದ ಒಳಗೆ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲು ಸೂಚಿಸಿತ್ತು.

►ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳೇನು?

'ಯೂತ್ ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ vs ಯೂನಿಯನ್ ಆಫ್ ಇಂಡಿಯಾ' (2016) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ನಿಯಮಗಳನ್ನು ಇಡೀ ದೇಶಕ್ಕೆ ಅನ್ವಯಿಸಿ ಆದೇಶಿಸಿತು. CRPC ಸೆಕ್ಷನ್ 207ರ (ಈಗಿನ ಬಿಎನ್‌ಎಸ್‌ಎಸ್ ಸೆಕ್ಷನ್ 230) ಅಡಿಯಲ್ಲಿ ನಿಗದಿಯಾದ ಹಂತಕ್ಕಿಂತ ಮುಂಚಿತವಾಗಿಯೇ ಆರೋಪಿಯು FIR ಪ್ರತಿ ಪಡೆಯಲು ಅರ್ಹನಾಗಿರುತ್ತಾನೆ ಎಂದು ಕೋರ್ಟ್ ಪುನರುಚ್ಚರಿಸಿತು.

ಪ್ರಕರಣ ದಾಖಲಾದ 24 ಗಂಟೆಗಳ ಒಳಗೆ FIRಗಳನ್ನು ಪೊಲೀಸ್ ವೆಬ್ಸೈಟ್ ಗಳಲ್ಲಿ ಅಪ್ಲೋಡ್ ಮಾಡಬೇಕು. ಒಂದು ವೇಳೆ ಅಂತಹ ವೆಬ್ಸೈಟ್ ಇಲ್ಲದಿದ್ದರೆ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು. ಭೌಗೋಳಿಕ ಸಂಪರ್ಕದ ಸಮಸ್ಯೆಗಳು ಅಥವಾ ಇತರ ಅನಿವಾರ್ಯ ತೊಂದರೆಗಳಿದ್ದರೆ ಈ ಸಮಯವನ್ನು 48 ಗಂಟೆಗಳವರೆಗೆ ವಿಸ್ತರಿಸಬಹುದು. ಸಂಪರ್ಕ ಸಾಧಿಸಲು ತೀವ್ರ ಕಷ್ಟವಿರುವ ಪ್ರದೇಶಗಳಲ್ಲಿ ಇದನ್ನು 72 ಗಂಟೆಗಳವರೆಗೆ ವಿಸ್ತರಿಸಲು ಅವಕಾಶವಿದೆ.

ಆರೋಪಿಯು ತನ್ನ ಪ್ರತಿನಿಧಿಯ ಮೂಲಕ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗೆ ಅಥವಾ ಪೊಲೀಸ್ ವರಿಷ್ಠಾಧಿಕಾರಿಗೆ ಪ್ರಮಾಣೀಕೃತ ಪ್ರತಿಯನ್ನು ಕೋರಿ ಅರ್ಜಿ ಸಲ್ಲಿಸಬಹುದು. ಅದನ್ನು 24 ಗಂಟೆಗಳ ಒಳಗೆ ಒದಗಿಸಬೇಕಾಗುತ್ತದೆ. FIR ಪ್ರತಿಯನ್ನು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಅಥವಾ ವಿಶೇಷ ನ್ಯಾಯಾಧೀಶರಿಗೆ ಕಳುಹಿಸಿದ ನಂತರ, ಆರೋಪಿಯು ನೇರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಎರಡು ಕೆಲಸದ ದಿನಗಳ ಒಳಗೆ ಪ್ರತಿಯನ್ನು ಪಡೆದುಕೊಳ್ಳಬಹುದು.

ಈ ನಿಯಮಗಳ ನಡುವೆಯೂ, 'ಸೂಕ್ಷ್ಮ ಸ್ವರೂಪದ' ಅಪರಾಧಗಳಿಗೆ ಸಂಬಂಧಿಸಿದ FIRಗಳನ್ನು ವೆಬ್ಸೈಟ್ಗಳಲ್ಲಿ ಪ್ರಕಟಿಸುವುದರಿಂದ ನ್ಯಾಯಾಲಯ ವಿನಾಯಿತಿ ನೀಡಿದೆ.

►'ಸೂಕ್ಷ್ಮ ಅಪರಾಧ'ಗಳ ವಿನಾಯಿತಿ ಎಂದರೇನು?

ಲೈಂಗಿಕ ದೌರ್ಜನ್ಯದ ಅಪರಾಧಗಳು, 'ಪೋಕ್ಸೋ' (POCSO) ಕಾಯ್ದೆಯಡಿ ದಾಖಲಾಗುವ ಪ್ರಕರಣಗಳು ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ 'ಸೂಕ್ಷ್ಮ ಅಪರಾಧಗಳು' ಎಂದು ವರ್ಗೀಕರಿಸಿದೆ. ಗೌಪ್ಯತೆ ಮತ್ತು ಪ್ರಕರಣದ ಸ್ವರೂಪವನ್ನು ಪರಿಗಣಿಸಿ ಇಂತಹ FIRಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವುದರಿಂದ ತಡೆಹಿಡಿಯಬಹುದು. ಈ ಪಟ್ಟಿ ಅಂತಿಮವಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ತೀರ್ಮಾನವನ್ನು DSP ಅಥವಾ ತತ್ಸಮಾನ ದರ್ಜೆಗಿಂತ ಕೆಳಗಿನ ಹಂತದ ಅಧಿಕಾರಿಯು ತೆಗೆದುಕೊಳ್ಳುವಂತಿಲ್ಲ. ಈ ತೀರ್ಮಾನದಿಂದ ಸಂಕಷ್ಟಕ್ಕೆ ಒಳಗಾದ ವ್ಯಕ್ತಿಯು SP ಅಥವಾ ತತ್ಸಮಾನ ದರ್ಜೆಯ ಅಧಿಕಾರಿಯನ್ನು ಸಂಪರ್ಕಿಸಬಹುದು. ಅವರು ಈ ಕುರಿತು ಮೂರು ದಿನಗಳ ಒಳಗೆ ನಿರ್ಧಾರ ಕೈಗೊಳ್ಳಲು ಮೂವರು ಸದಸ್ಯರ ಸಮಿತಿಯನ್ನು ರಚಿಸಬೇಕಾಗುತ್ತದೆ.

ಸೂಕ್ಷ್ಮತೆಯ ಆಧಾರದ ಮೇಲೆ FIR ಪ್ರತಿಯನ್ನು ತಡೆಹಿಡಿದಿದ್ದರೂ ಸಹ, ಆರೋಪಿ ಅಥವಾ ಅವರ ಪರ ಅಧಿಕೃತ ಪ್ರತಿನಿಧಿಯು FIR ಸಲ್ಲಿಕೆಯಾಗಿರುವ ಮ್ಯಾಜಿಸ್ಟ್ರೇಟ್ ಗೆ ಪ್ರಮಾಣೀಕೃತ ಪ್ರತಿಯನ್ನು ಕೋರಿ ಅರ್ಜಿ ಸಲ್ಲಿಸಬಹುದು. ಮ್ಯಾಜಿಸ್ಟ್ರೇಟ್ ಅದನ್ನು ತಕ್ಷಣವೇ ಹಾಗೂ ಮೂರು ದಿನಗಳ ಒಳಗೆ ಒದಗಿಸಬೇಕಾಗುತ್ತದೆ. ಮುಖ್ಯವಾಗಿ, ಮ್ಯಾಜಿಸ್ಟ್ರೇಟ್ ಅವರಿಂದ ಪ್ರತಿ ಪಡೆಯಲು ಆರೋಪಿಯು ಮೊದಲು ಪೊಲೀಸರ ಬಳಿಗೇ ಹೋಗಬೇಕೆಂಬ ನಿಯಮವಿಲ್ಲ.

►ಇದರ ಪರಿಣಾಮಗಳೇನು?

ಸಿಸಿಟಿಎನ್‌ಎಸ್ (CCTNS) ಪೋರ್ಟಲ್ ಮೂಲಕ FIRಗಳನ್ನು ವೆಬ್ಸೈಟ್ ಗೆ ಅಪ್ಲೋಡ್ ಮಾಡಬೇಕೆಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪೊಲೀಸರು ನಿಯಮಿತವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ದಿಲ್ಲಿಯ ವಕೀಲ ನಿಪುಣ್ ಸಕ್ಸೇನಾ ಹೇಳುತ್ತಾರೆ.

"ಒಮ್ಮೆ FIR ದಾಖಲಾಗಿ ಕಾನೂನು ಪ್ರಕ್ರಿಯೆ ಆರಂಭವಾದ ನಂತರ, ಆರೋಪಿಗೆ FIR ರದ್ದತಿ ಅಥವಾ ನಿರೀಕ್ಷಣಾ ಜಾಮೀನಿನಂತಹ ಕಾನೂನು ಪರಿಹಾರಗಳನ್ನು ಕೋರುವ ಹಕ್ಕು ಸಿಗುತ್ತದೆ. FIR ಪ್ರತಿ ಸಿಗದಿದ್ದರೆ ಈ ಪರಿಹಾರಗಳನ್ನು ಸರಿಯಾಗಿ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ" ಎಂದು ಅವರು ವಿವರಿಸಿದ್ದಾರೆ.

ತಮ್ಮ ವಿರುದ್ಧ ಹೊರಿಸಲಾದ ಆರೋಪಗಳನ್ನು ತಿಳಿದುಕೊಳ್ಳಲು ದೋಷಾರೋಪಣೆ ಹಂತದವರೆಗೆ ಆರೋಪಿಯನ್ನು ಕಾಯಿಸುವುದು ಸೂಕ್ತವಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ತೀರ್ಪು ಗುರುತಿಸಿದೆ ಎಂದು ಸಕ್ಸೇನಾ ಹೇಳಿದ್ದಾರೆ. ಏಕೆಂದರೆ, ಇದು ನ್ಯಾಯಸಮ್ಮತ ವಿಚಾರಣೆಯ ಹಕ್ಕು ಮತ್ತು ನೈಸರ್ಗಿಕ ನ್ಯಾಯದ ತತ್ವಗಳಿಗೆ ಧಕ್ಕೆ ತರುತ್ತದೆ.

"ಹೊಸ ಅಪರಾಧ ಕಾನೂನುಗಳನ್ನು ಜಾರಿಗೆ ತಂದಾಗ, ಆರಂಭಿಕ ಹಂತದಲ್ಲೇ ಆರೋಪಿಗೆ FIR ಪ್ರತಿ ಸಿಗುವಂತೆ ಸ್ಪಷ್ಟ ನಿಯಮ ರೂಪಿಸಲು ಉತ್ತಮ ಅವಕಾಶವಿತ್ತು. ಆದರೆ ಅಂತಹ ಯಾವುದೇ ನಿಯಮವನ್ನು ಸೇರಿಸದಿರುವುದು ದುರದೃಷ್ಟಕರ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries