ಭೋಪಾಲ್: ರುದ್ರಭೂಮಿಗೆ ಅಕ್ರಮವಾಗಿ ಪ್ರವೇಶಿಸಿ ಅಂತ್ಯಕ್ರಿಯೆಯ ವಿಧಿವಿಧಾನಗಳಿಗೆ ಅಡ್ಡಿಪಡಿಸಿದ ಆರೋಪದಲ್ಲಿ ಸ್ವಯಂಘೋಷಿತ ಅಘೋರಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸ್ವಯಂಘೋಷಿತ ಅಘೋರಿಯು ಉರಿಯುತ್ತಿದ್ದ ಚಿತೆಯ ಬಳಿ ಮಾನವನ ಮಾಂಸ ಸೇವಿಸುವಂತೆ ಕಾಣುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಂಧಿತ ಆರೋಪಿಯನ್ನು ಕಾಳಿ ಅಲಿಯಾಸ್ ನಂದಗಿರಿ ಎಂದು ಗುರುತಿಸಲಾಗಿದ್ದು, ತಾನು ಕಿನ್ನರ್ ಅಖಾಡದ ಮಹಾಮಂಡಲೇಶ್ವರ ಎಂದು ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.
ವಿಡಿಯೋ ವೈರಲ್ ಆದ ಬಳಿಕ ಸೇನಾಪತಿ ಕಾಲ್ ಭೈರವ್ ಸಮಿತಿಯು ಜೀವಾಜಿಗಂಜ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಈ ಬಂಧನ ನಡೆದಿದೆ.
ಉಜ್ಜಯಿನಿ ಮಹಾನಗರ ಪಾಲಿಕೆ ವ್ಯಾಪ್ತಿಯ ಚಕ್ರತೀರ್ಥ ಸ್ಮಶಾನದಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಈ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ವೈರಲ್ ದೃಶ್ಯಗಳಲ್ಲಿ ಆರೋಪಿಯು ಕತ್ತಿ ಹಿಡಿದು ಉರಿಯುತ್ತಿದ್ದ ಚಿತೆಯ ಬಳಿ ನಿಂತಿರುವುದು ಹಾಗೂ ಅಲ್ಲಿಂದ ಮಾಂಸವನ್ನು ತಿನ್ನುತ್ತಿರುವಂತೆ ಕಂಡುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಠಾಣಾಧಿಕಾರಿ ಪ್ರತೀಕ್ ಶರ್ಮಾ, ವಿಡಿಯೋ ವೈರಲ್ ಆದ ಬಳಿಕ ಈ ಘಟನೆ ಪೊಲೀಸರ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಆರೋಪಿಯೇ ಈ ದೃಶ್ಯಗಳನ್ನು ಚಿತ್ರೀಕರಿಸಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ರುದ್ರಭೂಮಿಗೆ ಅಕ್ರಮ ಪ್ರವೇಶ ಹಾಗೂ ಮಾನವ ಅವಶೇಷಗಳಿಗೆ ಅಗೌರವ ತೋರಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 301 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧನದ ಬಳಿಕ ಆರೋಪಿಯನ್ನು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪಾ ಪ್ರಜಾಪತಿ ತಿಳಿಸಿದ್ದಾರೆ.
ಘಟನೆಯನ್ನು ಜೂನಾ ಅಖಾಡದ ಮಹಾಮಂಡಲೇಶ್ವರ ಶೈಲೇಶಾನಂದ ಗಿರಿ ಖಂಡಿಸಿದ್ದು, ನಾಗರಿಕ ಸಮಾಜದಲ್ಲಿ ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

