ಮುಂಬೈ/ಬೆಂಗಳೂರು: ನಗದು ಹರಿವನ್ನು ಬಿಗಿಗೊಳಿಸಿ, ಹಣದುಬ್ಬರ ಏರಿಕೆಯನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ಬುಧವಾರ ಶೇಕಡ 0.25ರಷ್ಟು ಜಾಸ್ತಿ ಮಾಡಿದೆ. ಆರ್‌ಬಿಐ ರೆಪೊ ದರ ಹೆಚ್ಚಿಸಿರುವುದು 2023ರ ಫೆಬ್ರುವರಿ ನಂತರ ಇದೇ ಮೊದಲು.
ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ರೆಪೊ ದರ ಇನ್ನಷ್ಟು ಜಾಸ್ತಿ ಆಗಬಹುದು, ರೆಪೊ ಸದ್ಯಕ್ಕೆ ಕಡಿಮೆ ಆಗುವ ಸಾಧ್ಯತೆಯಂತೂ ಇಲ್ಲ ಎಂಬುದನ್ನು ಆರ್‌ಬಿಐ ಸ್ಪಷ್ಟಪಡಿಸಿದೆ. ರೆಪೊ ದರ ಏರಿಕೆಯ ಪರಿಣಾಮವಾಗಿ ಗೃಹಸಾಲ, ವಾಹನ ಸಾಲ ಸೇರಿದಂತೆ ವಿವಿಧ ಬಗೆಯ ಸಾಲಗಳ ಮೇಲಿನ ಬಡ್ಡಿ ದರ ಜಾಸ್ತಿ ಆಗಲಿದೆ.
ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಆರೂ ಮಂದಿ ಸದಸ್ಯರು ರೆಪೊ ದರ ಏರಿಕೆ ಪರವಾಗಿ ಒಕ್ಕೊರಲಿನಿಂದ ಮತ ಚಲಾಯಿಸಿದರು. ಈ ಬಾರಿ ರೆಪೊ ದರ ಏರಿಕೆ ಖಚಿತ ಎಂದು ಹಲವು ಮಂದಿ ಬ್ಯಾಂಕಿಂಗ್ ತಜ್ಞರು ಅಂದಾಜು ಮಾಡಿದ್ದರು. ಆದರೆ, 'ತಟಸ್ಥ' ಹಣಕಾಸಿನ ನಿಲುವನ್ನು ಬದಲಾಯಿಸಿ, 'ಜಾಗರೂಕವಾಗಿ ಬಿಗಿಗೊಳಿಸುವ' ನಿಲುವನ್ನು ಎಂಪಿಸಿ ತಳೆದಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
ಆರ್‌ಬಿಐನ ಹಣಕಾಸಿನ ನಿಲುವು ಬದಲಾಗಿರುವುದರಿಂದ, ರೆಪೊ ದರ ಇಳಿಕೆಯ ಸಾಧ್ಯತೆಯು ಸದ್ಯಕ್ಕಂತೂ ಇಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಆರ್‌ಬಿಐ ರೆಪೊ ದರವನ್ನು ಒಂದಿಷ್ಟು ಅವಧಿಗೆ ಇದೇ ಮಟ್ಟದಲ್ಲಿ ಉಳಿಸಿಕೊಳ್ಳಬಹುದು ಅಥವಾ ಇನ್ನೂ ತುಸು ಹೆಚ್ಚು ಮಾಡಬಹುದು ಎಂದು ಪರಿಣತರು ಅಂದಾಜು ಮಾಡಿದ್ದಾರೆ.
ಚಿಲ್ಲರೆ ಹಣದುಬ್ಬರ ಪ್ರಮಾಣವು ಆಗಸ್ಟ್‌ನಲ್ಲಿ ಶೇ 4.82ಕ್ಕೆ ಹೆಚ್ಚಳವಾಗಿದೆ. ಇದು ಆರ್‌ಬಿಐ ನಿಗದಿ ಮಾಡಿಕೊಂಡಿರುವ ಶೇ 4ರ ಮಿತಿಗಿಂತ ಸತತ ಮೂರು ತಿಂಗಳಿನಿಂದ ಹೆಚ್ಚಿನ ಮಟ್ಟದಲ್ಲಿದೆ.
ಆಹಾರ ಮತ್ತು ಇಂಧನ ಬೆಲೆ ಏರಿಕೆ, ಮುಂಗಾರು ಮಳೆ ಕೊರತೆ ಹಾಗೂ ಎಲ್-ನಿನೊ ಪರಿಸ್ಥಿತಿಯ ಕಾರಣದಿಂದಾಗಿ ಹಣದುಬ್ಬರ ಹೆಚ್ಚಳದ ಭೀತಿಯು ಹಿಂದಿನ ವರ್ಷದಲ್ಲಿ ಇದ್ದಿದ್ದಕ್ಕಿಂತ ಹೆಚ್ಚಾಗಿದೆ ಎಂದು ಆರ್‌ಬಿಐ ಎಚ್ಚರಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಣದುಬ್ಬರ ಪ್ರಮಾಣದ ಅಂದಾಜನ್ನು ಆರ್‌ಬಿಐ ಶೇ 5.2ಕ್ಕೆ ಹೆಚ್ಚಿಸಿದೆ. ಈ ಮೊದಲು ಶೇ 5ರಷ್ಟು ಹಣದುಬ್ಬರ ಇರಬಹುದು ಎಂಬ ಅಂದಾಜು ಇತ್ತು.
ಸಂಜಯ್ ಮಲ್ಹೋತ್ರಾ, ಆರ್‌ಬಿಐ ಗವರ್ನರ್ರೆಪೊ ದರ ಇಳಿಕೆ ಸದ್ಯಕ್ಕೆ ಇಲ್ಲ. ಮುಂದೆ ಪರಿಸ್ಥಿತಿ ಆಧರಿಸಿ ದರ ಇದೇ ಮಟ್ಟದಲ್ಲಿ ಇರಬಹುದು ಅಥವಾ ಹೆಚ್ಚಳ ಕಾಣಬಹುದು.
ಇನ್ನೂ ಎಷ್ಟು ಹೆಚ್ಚಬಹುದು?
ಆರ್‌ಬಿಐ ತನ್ನ ಹಣಕಾಸಿನ ನಿಲುವನ್ನು ಬದಲಾಯಿಸಿದ ನಂತರ, ರೆಪೊ ದರವು ಇನ್ನೂ ಶೇ 0.50ಯಷ್ಟು ಏರಿಕೆ ಕಾಣಬಹುದು ಎಂದು ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿದ್ದಾರೆ.
'ಮುಂದಿನ ದಿನಗಳಲ್ಲಿ ರೆಪೊ ದರವು ಶೇ 0.50ಯಷ್ಟು ಹೆಚ್ಚಳ ಕಾಣಬಹುದು. ಅಲ್ಲದೆ, ಜಾಗತಿಕ ಮಟ್ಟದಲ್ಲಿ ಸಮಸ್ಯೆಗಳು ಮುಂದುವರಿದಲ್ಲಿ ದರವು ಮತ್ತಷ್ಟು ಏರಿಕೆ ಆಗಬಹುದು' ಎಂದು ಕೋಟಕ್ ಮಹೀಂದ್ರ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಉಪಾಸನಾ ಭಾರದ್ವಾಜ್ ಹೇಳಿದ್ದಾರೆ. ಏರಿಕೆಯು ಶೇ 0.75ರವರೆಗೂ ಇರಬಹುದು ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪ್ರಧಾನ ಅರ್ಥಶಾಸ್ತ್ರಜ್ಞೆ ಸಾಕ್ಷಿ ಗುಪ್ತಾ ಅಂದಾಜಿಸಿದ್ದಾರೆ.
ಅಂದರೆ, ರೆಪೊ ಏರಿಕೆ ಕಂಡಂತೆಲ್ಲ ಅದಕ್ಕೆ ಅನುಗುಣವಾಗಿ ಸಾಲಗಳ ಮೇಲಿನ ಬಡ್ಡಿ ದರವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಸಾಲದ ಕಂತು ಎಷ್ಟು ಹೆಚ್ಚಬಹುದು?
ಗೃಹಸಾಲಕ್ಕೆ ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಶೇ 7.25ರಿಂದ
ಶೇ 10.50ರವರೆಗೆ ಬಡ್ಡಿ ದರ ಇದೆ. ಬಡ್ಡಿ ದರವು ವ್ಯಕ್ತಿಯ ಕ್ರೆಡಿಟ್ ಅಂಕವನ್ನು ಕೂಡ ಆಧರಿಸಿರುತ್ತದೆ.
₹50 ಲಕ್ಷ ಮೊತ್ತದ ಗೃಹಸಾಲ ಪಡೆದ ವ್ಯಕ್ತಿಯು ಶೇ 7.25ರಷ್ಟು ಬಡ್ಡಿ ದರದಲ್ಲಿ 25 ವರ್ಷಗಳಲ್ಲಿ ಸಾಲ ತೀರಿಸುವುದಿದ್ದರೆ ತಿಂಗಳಿಗೆ ₹36,140 ಇಎಂಐ ಪಾವತಿಸಬೇಕು. ಅಸಲು ಮತ್ತು ಬಡ್ಡಿ ಸೇರಿಸಿ ಆತ ಬ್ಯಾಂಕಿಗೆ
ಒಟ್ಟು ₹1.08 ಕೋಟಿ ಪಾವತಿಸುತ್ತಾನೆ.
ರೆಪೊ ದರದಲ್ಲಿನ ಏರಿಕೆಯನ್ನು ಬ್ಯಾಂಕ್ ಗ್ರಾಹಕರಿಗೆ ಪೂರ್ತಿಯಾಗಿ ವರ್ಗಾವಣೆ ಮಾಡಿದರೆ, ₹50 ಲಕ್ಷದ ಸಾಲವನ್ನು ಶೇ 7.50ರ ಬಡ್ಡಿ ದರದಲ್ಲಿ ತೀರಿಸಲು ವ್ಯಕ್ತಿಯು ತಿಂಗಳಿಗೆ ₹36,950 ಇಎಂಐ ಪಾವತಿಸಬೇಕು. ಅಸಲು ಮತ್ತು ಬಡ್ಡಿಯನ್ನು ಸೇರಿಸಿ ಆತ ಬ್ಯಾಂಕಿಗೆ 25 ವರ್ಷಗಳಲ್ಲಿ ₹1.10 ಕೋಟಿ ಪಾವತಿಸಬೇಕಾಗುತ್ತದೆ.
ಬಡ್ಡಿ ಹೆಚ್ಚಳ ಆದಾಗ ಬ್ಯಾಂಕುಗಳು ಹಾಲಿ ಗ್ರಾಹಕರಿಗೆ ಸಾಲದ ಕಂತಿನ ಮೊತ್ತ ಹೆಚ್ಚಿಸಿಕೊಳ್ಳುವ ಅಥವಾ ಕಂತುಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಆಯ್ಕೆಯನ್ನು ನೀಡುವುದಿದೆ.
ಠೇವಣಿ ಬಡ್ಡಿ ಏರಿಕೆ: ರೆಪೊ ದರ ಏರಿಕೆಯ ಘೋಷಣೆ ಹೊರಬಿದ್ದ ನಂತರ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರವನ್ನು ಶೇ 0.40ವರೆಗೆ ಹೆಚ್ಚಿಸುತ್ತಿರುವಾಗಿ ಬಜಾಜ್ ಫೈನಾನ್ಸ್ ತಿಳಿಸಿದೆ.



