ಬೆಂಗಳೂರು: ಷೇರು ಹೂಡಿಕೆ ಸೇವೆಗಳನ್ನು ಒದಗಿಸುವ ಕೋಟಕ್ ಸೆಕ್ಯುರಿಟೀಸ್ ಲಿಮಿಟೆಡ್ ತನ್ನ ಬ್ರ್ಯಾಂಡ್ ಹೆಸರು ಬದಲಾವಣೆ ಮಾಡಿದ್ದು, ಅದಕ್ಕೆ 'ಕೋಟಕ್ ನಿಯೊ' ಎಂಬ ಹೊಸ ಹೆಸರು ನೀಡಿದೆ.
ಗ್ರಾಹಕರು ಹಣಕಾಸಿನ ಮಾರುಕಟ್ಟೆಗಳಲ್ಲಿ ಹೆಚ್ಚಿನ ಆಯ್ಕೆಯನ್ನು ಬಯಸುತ್ತಿದ್ದಾರೆ, ಹೂಡಿಕೆ ಕೆಲಸಗಳು ಯಾವುದೇ ಅಡ್ಡಿ ಇಲ್ಲದೆ ಪೂರ್ಣಗೊಳ್ಳಬೇಕು ಎಂದು ಇಚ್ಛಿಸುತ್ತಿದ್ದಾರೆ ಹಾಗೂ ತಜ್ಞರ ಸಲಹೆಯ ಅಗತ್ಯವನ್ನು ಅವರು ಬಯಸುತ್ತಿದ್ದಾರೆ.
ಈ ಬದಲಾವಣೆಗಳನ್ನು 'ಕೋಟಕ್ ನಿಯೊ' ಪ್ರತಿಬಿಂಬಿಸುತ್ತಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
'ಗ್ರಾಹಕರ ಅಗತ್ಯಗಳು ವಿಕಾಸ ಕಾಣುತ್ತಿವೆ. ಇಂದು ಗ್ರಾಹಕರು ಷೇರುಗಳು, ಮ್ಯೂಚುವಲ್ ಫಂಡ್‌ಗಳು ಅಥವಾ ಡೆರಿವೆಟಿವ್‌ಗಳ ಬಗ್ಗೆ ಮಾತ್ರವೇ ಆಲೋಚನೆ ಮಾಡುತ್ತಿಲ್ಲ. ಸಂಪತ್ತು ಸೃಷ್ಟಿಸುವುದು ಹೇಗೆ, ಹೂಡಿಕೆಗಳಲ್ಲಿ ವೈವಿಧ್ಯ ತರುವುದು ಹೇಗೆ, ಅರ್ಥ ವ್ಯವಸ್ಥೆಯಲ್ಲಿನ ಬೇರೆ ಬೇರೆ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಸುತ್ತಿದ್ದಾರೆ. ಕೋಟಕ್ ನಿಯೊ ಮೂಲಕ ಆ ಎಲ್ಲ ಅವಕಾಶಗಳನ್ನು ಒಂದೆಡೆ ತರುವುದು ನಮ್ಮ ಗುರಿ' ಎಂದು ಕೋಟಕ್ ನಿಯೊ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀಪಾಲ್ ಶಾ ಹೇಳಿದ್ದಾರೆ.



