ಕೊಂಡೆವೂರಿನ ಸೋಮಯಾಗಕ್ಕೆ "ಜೋಗಿ" ಸಮುದಾಯದ "ನೆಲುವು" ತಯಾರಿ ಮುಹೂರ್ತ
0
ಡಿಸೆಂಬರ್ 17, 2018
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2019ರ ಫೆಬ್ರವರಿ 18 ರಿಂದ 24 ರ ವರೆಗೆ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದಲ್ಲಿ ಉಪಯೋಗಿಸಲ್ಪಡುವ ವಿವಿಧ ವಸ್ತುಗಳನ್ನು ಆಯಾ ಸಮುದಾಯದವರೇ ಮಾಡಿ, ಯಾಗಕ್ಕೆ ಸಮರ್ಪಣೆ ಮಾಡುವ ಉದ್ದೇಶದಿಂದ ಭಾನುವಾರ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಜೋಡುಕಲ್ಲಿನ 'ನವೋದಯ ನಗರ'ಕ್ಕೆ ಭೇಟಿ ನೀಡಿ, ಯಾಗಕ್ಕೆ ಬೇಕಾದ "ನೆಲುವು/ಸಿಕ್ಕ"(ಮೊಸರಿನ ಕುಡಿಕೆ ಇತ್ಯಾದಿಗಳನ್ನು ನೇತುಹಾಕಲು ಬಳಸುವ ಸಾಧನ)ವನ್ನು ತಯಾರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಉಪಸ್ಥಿತರಿದ್ದ ಸಮುದಾಯದ ಬಂಧು ಭಗಿನಿಯರೊಡನೆ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಪೂಜೆ ಮತ್ತು ಸತ್ಸಂಗಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಗಳು ಹಿಂದೂ ಸಮಾಜದ ಸಮಸ್ತ ಸಮುದಾಯದವರು ಒಂದಾಗಿ ಮಾದರಿ ಭಾರತವನ್ನು ನಿರ್ಮಾಣ ಮಾಡಬೇಕಿದೆ ಎಂದು ಕರೆನೀಡಿದರು.
ವೇದಿಕೆಯಲ್ಲಿ ಜೋಗಿ ಸಮುದಾಯದ ಪ್ರಮುಖರಾದ ಮಹಾಲಿಂಗ ಜೋಗಿ, ಸಂಜೀವ ಜೋಗಿ, ಕೃಷ್ಣ ಜೋಗಿ, ಚನಿಯಪ್ಪ ಜೋಗಿ, ದುಷ್ವಂತ್ ಮತ್ತು ಕರುಣಾಕರ ರೈ ಕಳ್ಳಿಗೆಬೀಡು ಹಾಗೂ ಗ್ರಾ.ಪಂ. ಸದಸ್ಯೆ ಕಾವೇರಿ ಉಪಸ್ಥಿತರಿದ್ದರು. ರೂಪೇಶ್ ಸ್ವಾಗತಿಸಿ, ವಂದಿಸಿದರು. ಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚೆರುಗೋಳಿ ಕಾರ್ಯಕ್ರಮ ನಿರ್ವಹಿಸಿದದರು. ಕನ್ಯಾಕುಮಾರಿ ಪ್ರಾರ್ಥನಾ ಗೀತೆಹಾಡಿದರು.

