HEALTH TIPS

ಬೋಳಂಗಳ ಸಿದ್ದಗೊಳ್ಳುತ್ತಿದೆ ಐತಿಹಾಸಿಕ ಕಂಬಳ ಪುನಶ್ಚೇತನಕ್ಕೆ- ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಗೆ ಕೇರಳದಲ್ಲಿ ಒಂದು ಶಾಶ್ವತ ರೇಸ್ ಟ್ರ್ಯಾಕ್

ಉಪ್ಪಳ: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕೋಣಗಳ ಓಟ ಕಂಬಳಕ್ಕೆ ಕಾಸರಗೋಡು ಜಿಲ್ಲೆಯ ಗಡಿಪ್ರದೇಶ ಪೈವಳಿಕೆ ಬೋಳಂಗಳದಲ್ಲಿ ಶಾಶ್ವತ ಕ್ರೀಡಾಂಗಣ ರೂಪುಗೊಂಡಿದ್ದು, ಡಿ. 15 ರಂದು ಮೊತ್ತಮೊದಲ ಬಾರಿಗೆಆಯೋಜನೆಗೊಳ್ಳುತ್ತಿರುವ ಅಣ್ಣ ತಮ್ಮ ಜೋಡುಕೆರೆ ಕಂಬಳದ ಮೂಲಕ ಅಧಿಕೃತ ಚಾಲನೆ ನೀಡಲಾಗುವುದು. ಕಂಬಳ ಸಮಿತಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆಗಳೇ ಮೊದಲಾದ ಸಂಘಟನೆಗಳ ಕಠಿಣ ಪರಿಶ್ರಮದಿಂದ ಜಿಲ್ಲೆಯಲ್ಲಿ ಚೊಚ್ಚಲ ಶಾಶ್ವತ ಕಂಬಳ ಓಟದ ಕ್ರೀಡಾಂಗಣ ಸಜ್ಜಾಗಿದ್ದು, ತುಳುನಾಡಿನ ಪರಂಪರಾಗತ ಕ್ರೀಡೆ ಸಂಸ್ಕøತಿಯ ಉಳಿಯುವಿಕೆಗೆ ಮತ್ತು ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಠಿಗೊಳಿಸುವ ಆಶಯ ಈ ಮೂಲಕ ಸಾಕಾರಗೊಳ್ಳಲಿದೆ. ತುಳುನಾಡಿನ ಭಾಗವಾಗಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮೂರು ಪ್ರದೇಶಗಳಲ್ಲಿ ಪ್ರತಿಷ್ಠಿತ ಕಂಬಳ-ಕೋಣಗಳ ಓಟ ಸ್ಪರ್ಧೆ ನಡೆಯುತ್ತಿತ್ತು. ಇದರಲ್ಲಿ ಅರಿಬೈಲು ಕಂಬಳ ಮಾತ್ರ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ದಿನಗಳ ಹಿಂದೆ ನೆರವೇರಿತ್ತು. ಬಂಗ್ರಮಂಜೇಶ್ವರ ಕಂಬಳವು ಹಲವು ವರ್ಷಗಳಿಂದ ಸ್ಥಗಿತಗೊಂಡಿದೆ. ಕೃಷಿ ಪೂರಕ ಆಚರಣೆ ಸಹಿತ ಪೂರಕ ಸಂಸ್ಕøತಿಯನ್ನು ಉಳಿಸಿ ಬೆಳಸುವಲ್ಲಿ ಬೋಳಂಗಳ ಕಂಬಳ ಯಶಸ್ವಿಯಾಗಲಿದೆ ಎಂಬ ನಂಬಿಕೆ ಜನಸಾಮಾನ್ಯರದ್ದಾಗಿದೆ. ಕಂಬಳದ ಸುಸಜ್ಜಿತ ಓಟದಂಗಣದಿಂದ ಗಡಿನಾಡಿನ ಪೈವಳಿಕೆಯಲ್ಲಿ ಹೊಸ ಮನ್ವಂತರ ಸೃಷ್ಠಿಯಾಗಲಿದೆ. ಅಣ್ಣ ತಮ್ಮ ಜೋಡುಕರೆ ಕಂಬಳ ಸಮಿತಿ ವತಿಯಿಂದ ರೂಪುಗೊಂಡ ಕಂಬಳ ಟ್ರ್ಯಾಕಿಗೆ ಸುಮಾರು 25 ಲಕ್ಷ ರೂ. ಖರ್ಚಾಗಿದೆ. ಪ್ರಥಮ ವರ್ಷದಲ್ಲಿ ಆದ ಖರ್ಚು ಮುಂಬರುವ ವರ್ಷಗಳಲ್ಲಿ ಆಗುವುದಿಲ್ಲ. ಮೊದಲ ಬಾರಿ ಕಂಬಳವನ್ನು ಏರ್ಪಡಿಸುವ ಸಮಿತಿಗೆ ಕಂಬಳ ಅಂಗಣ ನಿರ್ಮಾಣಕ್ಕೆ ಹೆಚ್ಚಿನ ಹಣ ವ್ಯಯವಾಗಿದೆ. ಮುಂಬರುವ ವರ್ಷಗಳಲ್ಲಿ ಕೇರಳ ಮತ್ತು ಕರ್ನಾಟಕದ ಕಂಬಳಾಸಕ್ತರನ್ನು ಆಕರ್ಷಿಸುವ ಇರಾದೆಯು ಕಂಬಳ ಸಮಿತಿಗಿದೆ. ಹಲವು ವರ್ಷಗಳಿಂದ ಕಂಬಳ ವೀಕ್ಷಣೆಗೆ ದೂರದ ಪುತ್ತೂರು, ಮೂಡಬಿದ್ರೆಗೆ ತೆರಳಬೇಕಿದ್ದ ಇಲ್ಲಿನ ಜನಸಾಮಾನ್ಯರು ಪ್ರಸ್ತುತ ಕಂಬಳ ಆಯೋಜನೆಯಿಂದ ತಮ್ಮ ಸ್ವಂತ ಊರಿನಲ್ಲಿ ಕಂಬಳ ವೀಕ್ಷಣೆಯ ಭಾಗ್ಯವನ್ನು ಪಡೆಯಲಿದ್ದಾರೆ. ಕಂಬಳದ ಜೋಡುಕರೆ ಶಾಶ್ವತ ಅಂಗಣ ನಿರ್ಮಾಣಕ್ಕೆ ಸುಮಾರು 10 ಲಕ್ಷ ರೂ.ಗಳು ಖರ್ಚಾಗಿದೆ. ಉಳಿದಂತೆ ಜೋಡಿ ಕೋಣಗಳನ್ನು ಆರೈಕೆ ಮತ್ತು ಸ್ನಾನ ಮಾಡಿಸಿ ಅವುಗಳ ಆಯಾಸ ತಣಿಸಲು ಸುಸಜ್ಜಿತ ನೀರಿನ ಟ್ಯಾಂಕ್ ನಿರ್ಮಾಣವಾಗಿದೆ. ಜೋಡುಕೆರೆ ಕಂಬಳದ ಒಂದು ಬದಿಯಲ್ಲಿ ಶಾಶ್ವತ ವೇದಿಕೆ ನಿರ್ಮಾಣ ಸಹಿತ ನೋಡುಗರಿಗೆ ಸೂಕ್ತ ಸ್ಥಳದ ನಿರ್ಮಾಣಕ್ಕಾಗಿ ಒಟ್ಟು 25 ಲಕ್ಷ ರೂ. ಗಳನ್ನು ವ್ಯಯಿಸಲಾಗಿದೆ. ಅಣ್ಣ ತಮ್ಮ ಜೋಡುಕರೆ ಕಂಬಳದ ಶಾಶ್ವತ ಟ್ರ್ಯಾಕಿನ ಉದ್ದ 180 ಕೋಲುಗಳಾಗಿದ್ದು ಸರಿಸುಮಾರು 134 ಮೀ. ನಷ್ಟಾಗಿದೆ. ಜೋಡುಕರೆಗಳ ಅಗಲ 16 ಕೋಲುಗಳು ಅಂದರೆ 36 ಫೀಟ್. ದಕ್ಷಿಣ ಕನ್ನಡ, ಉಡುಪಿ ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಸಹಕಾರ, ಅಣ್ಣ ತಮ್ಮ ಜೋಡುಕರೆ ಕಂಬಳ ಸಮಿತಿಯ ಮೂಲಕ ಸಾಕಾರಗೊಂಡಿರುವ ಪೈವಳಿಕೆ ಕಂಬಳ ಟ್ರ್ಯಾಕ್ ಜೋಡಿ ಕೋಣಗಳ ಓಟಕ್ಕೆ ಸಜ್ಜಾಗಿದ್ದು. ಡಿ.15 ರಂದು ಉದ್ಘಾಟನೆಯೊಂದಿಗೆ ಲೋಕಾರ್ಪಣೆಗೊಳ್ಳಲಿದೆ. ಉದ್ಘಾಟನಾ ಕಾರ್ಯಕ್ರಮವು ಡಿ.15 ರಂದು ಸಂಜೆ ನಡೆಯಲಿದ್ದು ಕೇಂದ್ರ ಅಂಕಿ ಅಂಶ ಮತ್ತು ಯೋಜನಾ ನಿರ್ವಹಣಾ ಸಚಿವ ಡಿ.ವಿ.ಸದಾನಂದ ಗೌಡ ಭಾಗವಹಿಸುವರು. ಕೇರಳ ಕಂದಾಯ ಸಚಿವ ಇ.ಚಂದ್ರಶೇಖರನ್, ಹಣಕಾಸು ಸಚಿವ ಥಾಮಸ್ ಐಸಾಕ್ ಸಹಿತ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಮತ್ತು ಕೇರಳ ರಾಜ್ಯ ಜನಪ್ರತಿನಿಧಿಗಳು ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರಥಮ ವರ್ಷದ ಪೈವಳಿಕೆ ಅಣ್ಣ ತಮ್ಮ ಜೋಡುಕೆರೆ ತುಳುನಾಡ ಕಂಬಳ ಡಿ. 15 ಮತ್ತು 16 ರಂದು ನಡೆಯಲಿದೆ. ಈ ಸಂದರ್ಭ ಡಿ.13 ರಿಂದ 16 ತನಕ ಜನಪದ ಕ್ರೀಡೆಗಳ ಗ್ರಾಮೀಣ ಮೇಳವು ವಿಜೃಂಭಿಸಲಿದೆ. ಡಿ.13 ರಂದು ಗ್ರಾಮೀಣ ಕ್ರೀಡೆ ಮತ್ತು ಬೋಳಂಗಳೋತ್ಸವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಗಳು, ಕಯ್ಯಾರು ಕ್ರಿಸ್ತರಾಜ ಇಗರ್ಜಿ ಧರ್ಮಗುರು ವಂದನೀಯ ರೆ.ಫಾ.ವಿಕ್ಟರ್ ಡಿ'ಸೋಜಾ, ಚೇರಾಲಿನ ಸಿರಾಜುದ್ದೀನ್ ಫೈಝ್ ಉಸ್ತಾದ್ ಮಾರ್ಗದರ್ಶನದೊಂದಿಗೆ, ಪೈವಳಿಕೆ ಅರಮನೆಯ ಅರಸ ರಂಗತ್ರೈಯ ಬಲ್ಲಾಳ್, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೆಲು ಕೂಳೂರು ಇವರ ಸಾರಥ್ಯದಲ್ಲಿ ಕಂಬಳ ಸಹಿತ ಗ್ರಾಮೀಣ ಉತ್ಸವ ನಡೆಯಲಿದೆ. ಡಿ.13 ರಂದು ಬೆಳಿಗ್ಗೆ 10 ಗಂಟೆಗೆ ಪೈವಳಿಕೆಯಿಂದ ಬೋಳಂಗಳೋತ್ಸವದ ಶೋಭಾಯಾತ್ರೆ, ಬೆಳಿಗ್ಗೆ 10.30 ಕ್ಕೆ ಜನಪದ ಕ್ರೀಡೆ ಮತ್ತು ಗ್ರಾಮೀಣ ಮೇಳದ ಉದ್ಘಾಟನೆ, ಡಿ.14 ರಂದು ಪ್ರಗತಿ ಬಂಧು ಒಕ್ಕೂಟದ ಪದಗ್ರಹಣ ಮತ್ತು ಜ್ಞಾನಜ್ಯೋತಿ ನವಜೀವನ ಸಮಿತಿ ಉದ್ಘಾಟನೆ ಮಧ್ಯಾಹ್ನ 2 ಕ್ಕೆ ಆದರ್ಶ ದಂಪತಿ ಕಾರ್ಯಕ್ರಮ ಉದ್ಘಾಟನೆ, 2.30 ಕ್ಕೆ ಮಹಿಳಾ ಕಬಡ್ಡಿ ಪಂದ್ಯಾಟ, ಸಂಜೆ 6ಕ್ಕೆ ಹಿರಣ್ಯಾಕ್ಷ ವಧೆ ಯಕ್ಷಗಾನ ಬಯಲಾಟ, ಡಿ.15 ಶನಿವಾರದಂದು ಅಣ್ಣ ತಮ್ಮ ಜೋಡುಕೆರೆ ಕಂಬಳ ಪ್ರಾರಂಭ ನಡೆಯಲಿದೆ. ಏನಂತಾರೆ: ಕಂಬಳ ತುಳುನಾಡಿನ ಜನಪದ ಕ್ರೀಡೆಯಾಗಿದೆ. ಬಾರ್ಕೂಡಿನಿಂದ ಚಂದ್ರಗಿರಿ ತನಕ ಹಬ್ಬಿದ್ದ ತುಳುನಾಡಿನ ಕಂಬಳ ಕ್ರೀಡೆ ಪ್ರಖ್ಯಾತವಾಗಿದೆ. ಶತಮಾನಗಳ ಹಿಂದೆ ಪೈವಳಿಕೆ, ಚಿಪ್ಪಾರು ಪ್ರದೇಶಗಳಲ್ಲಿ ಕಂಬಳಗಳು ನಡೆಯುತ್ತಿದ್ದವು. ಹಿಂದೆ ಬಂಗ್ರಮಂಜೇಶ್ವರ ಹೊಳೆ ತಟದಲ್ಲೂ ಕಂಬಳ ನಿರಂತರವಾಗಿ ನಡೆಯುತ್ತಿತ್ತು, ಆದರೆ ಪ್ರಸ್ತುತ ಸ್ಥಗಿತವಾಗಿದೆ. ಮಾಜಿ ಶಾಸಕರಾಗಿದ್ದ ಚೆರ್ಕಳಂ ಅಬ್ದುಲ್ಲಾ ಅವರು ಕೂಡಾ ಕಂಬಳದ ಉಳಿಕೆಯ ಬಗ್ಗೆ ಹಲವು ಬಾರಿ ಮಾತನಾಡಿದ್ದರು. ಪ್ರಸ್ತುತ ಕಂಬಳ ಸಮಿತಿ ಊರ ಜನತೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳ ಶ್ರಮದ ಫಲವಾಗಿ ಪೈವಳಿಕೆಯ ಬೋಳಂಗಳದಲ್ಲಿ ಶಾಶ್ವತ ಜೋಡುಕರೆ ಕಂಬಳ ಅಂಗಣ ನಿರ್ಮಾಣವಾಗಿದೆ. ಪ್ರತಿವರ್ಷ ಇಲ್ಲಿ ಕಂಬಳ ನಡೆಯುವ ಮೂಲಕ ತುಳುನಾಡಿನ ಪರಂಪರಾಗತ ಕೋಣಗಳ ಓಟ ಕಂಬಳದ ಅನನ್ಯ ಸಂಸ್ಕøತಿ ಬೆಳೆಯಲಿ. ರಂಗತ್ರೈ ಬಲ್ಲಾಳ್ ಅರಸರು. ಪೈವಳಿಕೆ ಅರಮನೆ ಅಣ್ಣ ತಮ್ಮ ಜೋಡುಕರೆ ಕಂಬಳ ಸಮಿತಿ ಗೌರವಾಧ್ಯಕ್ಷರು. ...................................................................................................................................... ಕಾಸರಗೋಡು ಜಿಲ್ಲೆಯಲ್ಲಿ ದೇವರ ಕಂಬಳವು ಅರಿಬೈಲು ಮತ್ತು ಮೀಯಪದವು ಸಮೀಪದ ಕೂಳೂರುಬೀಡಿನಲ್ಲಿ ನಡೆಯುತ್ತದೆ. ವರ್ಷಗಳ ಹಿಂದೆ ಬಂಗ್ರಮಂಜೇಶ್ವರದ ಹೊಳೆ ಪರಿಸರದಲ್ಲಿ ಜೋಡುಕರೆ ಕಂಬಳ ನಡೆಯುತ್ತಿತ್ತು. ಆದರೆ ಅಲ್ಲಿನ ಕಂಬಳ ಪ್ರಸ್ತುತ ನಿಂತಿದೆ. ಪೈವಳಿಕೆಯ ಬೋಳಂಗಳದಲ್ಲಿ ಆರಂಭಗೊಳ್ಳಲಿರುವ ಕಂಬಳವು ಶಾಶ್ವತವಾಗಿ ಮುನ್ನಡೆಯಲಿದ್ದು. ಪ್ರಥಮ ವರ್ಷದಲ್ಲಿ ಸುಮಾರು 125 ಜೋಡಿ ಕೋಣಗಳು ಕಂಬಳ ಕ್ರೀಡೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಯತೀಶ್ ಭಂಡಾರಿ ಕಂಬಳ ಸಮಿತಿ ಕಾರ್ಯದರ್ಶಿ ಕೌಡೂರು ಬೀಡು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries