ತಪ್ಪಸ್ಸಿಗರ ಸಾಧನೆಯಿಂದ ಪ್ರಪಂಚ ಜೀವಂತ- ಸುಬ್ರಹ್ಮಣ್ಯ ಶ್ರೀ
0
ಫೆಬ್ರವರಿ 24, 2019
ಉಪ್ಪಳ: ಗುರು ಶಿಷ್ಯರ ಮೂಲಕ ಉಚ್ಛಾರ ಮತ್ತು ಶ್ರವಣದಿಂದ ಅಪೌರುಷೇಯ ಎಂದೆನಿಸಿಕೊಂಡ ಅತ್ಯುನ್ನತ ಶಕ್ತಿಯ ವೈದಿಕ ಪರಂಪರೆ ಇಂದಿಗೂ ಉಳಿದಿದೆ. ಪ್ರಸ್ತುತ ಕರ್ಮವನ್ನು ಬೋಧಿಸುವ ವಿಚಾರಗಳು ನಷ್ಟಗೊಳ್ಳುತ್ತಿರಲು ವ್ಯಾಪಕವಾಗುತ್ತಿರುವ ಲೌಕಿಕ ಆಸಕ್ತಿಗಳು ಕಾರಣವಾಗಿವೆ. ಪ್ರಕೃತಿವಿರೋಧೀ ಚಿಂತನೆಗಳು, ಸಮಗ್ರ ಅಧ್ಯಯನದ ಕೊರತೆ ಸಮಾಹದಲ್ಲಿ ಋಣಾತ್ಮಕ ಚಿಂತನೆಗಳು ಹೆಚ್ಚಲು ಸಹಕರಿಸುತ್ತಿವೆ. ಇಂತಹುದರ ಮಧ್ಯೆಯೂ ಜಗತ್ತು ಸಮತೋಲನವನ್ನು ಕಾಯ್ದಿರಿಸಲು ಹಿಮಾಲಯದ ತಪ್ಪಲಿನಲ್ಲಿ ಚಳಿಯನ್ನು ಸಹಿಸಿ ತಪೋ ನಿರತರಾದ ಸಾಧಕರ ಸಾಧನೆಯೇ ಮುಖ್ಯವಾಗುತ್ತಿದೆ ಎಂದು ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುತ್ತಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪ್ರಯುಕ್ತ ಶನಿವಾರ ಬೆಳಿಗ್ಗೆ ನಡೆದ ಅನುಗ್ರಹ ಸಂದೇಶ ಸಭೆಯಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಜಗತ್ತು ಒಂದು ಮನೆಯಾದರೆ ಭಾರತದ ದೇಶ ಮನೆಯೊಳಗಿರುವ ಪವಿತ್ರವಾದ ದೇವರ ಮನೆ ಎಂಬುದು ಹಿರಿಯರ ಮಾತು. ಇಂತಹ ವಿಶಿಷ್ಟ ಜಾಗೃತ ಕೇಂದ್ರವೆನಿಸಿದ ಭಾರತದ ಸಹಿತ ಜಗತ್ತಿನಲ್ಲಿ ಮುಕ್ಕಾಲು ಭಾಗವೂ ಋಣಾತ್ಮಕ ಚಿಂತನೆಗಳು ಅಡಕವಾಗಿದ್ದು, ಕೇವಲ ಸ್ವಲ್ಪ ಮಟ್ಟಿನ ಧನಾತ್ಮಕ ಚಿಂತನೆಗಳಿಂದ ಜಗತ್ತು ಇಂದು ಜೀವಂತಗೊಂಡಿರುವುದು ವಿಶೇಷ. ಸಾಧಕರ ಸಾಧನೆಯ ಫಲವಾಗಿ ಪ್ರಪಂಚ ಇಂದು ಬದುಕುತ್ತಿದೆ. ಕಲಿಯುಗದಲ್ಲಿ ಅಲ್ಪ ಧರ್ಮಾಚರಣಣೆಯಿದ್ದರೂ ನೆಮ್ಮದಿಯಿಂದ ಬದುಕು ನಡೆಸಬಹುದು. ಆದ್ದರಿಂದ ವೈದಿಕ ಪರಂಪರೆಯನ್ನು ಉಳಿಸುವ ಮೂಲಕ ಲೋಕದ ಹಿತಕ್ಕೆ ಕೊಂಡೆವೂರು ಶ್ರೀಗಳು ಮಾಡುತ್ತಿರುವ ಚಟುವಟಿಕೆಗಳು ಶ್ಲಾಘನೀಯ ಎಂದು ಅವರು ಅನುಗ್ರಹ ಸಂದೇಶ ನೀಡಿದರು.
ವೇದಿಕೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀಮದ್ ಆನೆಗುಂದಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನದಲ್ಲಿ ಭಗವಂತನ ಅನುಗ್ರಹ ಕೃಪೆಯಿಂದ ಭೂಮಿಯ ಮೇಲೆ ಜೀವಕೋಟಿಗಳಿಗೆ ನೆಮ್ಮದಿಯಿಂದ ಬದುಕಲು ಸಾಧ್ಯ. ಈ ಕಾರಣದಿಂದ ಭಗವತ್ ಸಂಪ್ರೀತಿಗಾಗಿ ಸಮರ್ಪಣೆ ಮಾಡವ ಸತ್ ಚಿಂತನೆ ಮೂಡಿಬರಬೇಕು. ಈ ಹಿನ್ನೆಲೆಯಲ್ಲಿ ಯಾಗ-ಯಜ್ಞಗಳಿಂದ ಯೋಗ ಸಿದ್ದಿಯಾಗುತ್ತದೆ ಎಂದು ತಿಳಿಸಿದರು.
ಯಾಗ ಸಿದ್ದಿಯಾಗಲು ದೇವಪೂಜೆ, ಸಂಗತೀಕರಣ ಮತ್ತು ದಾನ ಮಹತ್ತರವಾಗಿದೆ. ಬದುಕೆಂಬ ಯಜ್ಞದಲ್ಲಿ ಭಗವಂತನ ಸಂಪ್ರೀತಿ, ಬೃಹತ್ ಸಮಾಜದ, ರಾಷ್ಟ್ರ ಪರಿಕಲ್ಪನೆಯಡಿ ಎಲ್ಲರೊಂದಿಗೆ ಜೊತೆಯಾಗಿ ಸದ್ವಿಚಾರಗಳನ್ನು ಹಂಚಿಕೊಳ್ಳುವುದು ಮತ್ತು ಉಳ್ಳವರು ಇಲ್ಲದವರಿಗೆ ದಾನ ಮಾಡುವ ಮೂಲಕ ಬದುಕನ್ನು ಸಾರ್ಥಕ್ಯಪಡಿಸುವ ಸಂದೇಶ ಯಾಗದಲ್ಲಿ ಅಡಗಿದೆ ಎಂದು ಅವರು ತಿಳಿಸಿದರು.
ವೇದ ಸಂಪತ್ತತಿನ ಕೊಡುಗೆಯಾದ ಮಂತ್ರಗಳಲ್ಲಿ ಜಗತ್ ಕಲ್ಯಾಣದ ಸೂಕ್ಷ್ಮ ಅಡಗಿದೆ. ಆದರೆ ಅವುಗಳ ವಿಸರ್ಗ, ಅನುಸ್ವಾರ, ಉದಾತ್ತ, ಅನುದಾತ್ತ ಸಹಿತ ವ್ಯಾಕರಣ ಬದ್ದ ಉಚ್ಚಾರಣೆಯಿಂದ ವಾತಾವರಣದಲ್ಲಿ ಧನಾತ್ಮಕತೆ ವೃದ್ದಿಯಾಗುತ್ತದೆ ಎಂದು ಅವರು ಅನುಗ್ರಹ ಸಂದೇಶ ನೀಡಿದರು.
ಮಾಣಿಲ ಶ್ರೀಧಾಮದ ಮೋಹನದಾಸಪರಮಹಂಸಸ್ವಾಮೀಜಿ, ಕೊಂಡೆವೂರು ಶ್ರೀಗಳು ಹಾಗೂ ಕರಿಂಜೆ ಮುಕ್ತಾನಂದ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದರು. ಈ ಸಂದರ್ಭ ಯಾಗದ ಹಿನ್ನೆಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತು ಕೇರಳ ರಾಜ್ಯದ ಹೈಸ್ಕೂಲು ವಿದ್ಯಾರ್ಥಿಗಳಿಗೆ ಯಾಗದ ವಿಶೇಷತೆಗಳ ಕುರಿತು ಆಯೋಜಿಸಿದ ಪ್ರಬಂಧ ಸ್ಪರ್ಧೆಯ ವಿಜೇತ ಪ್ರಥಮ, ದ್ವಿತೀಯ ಹಾಗೂ ತೃತೀಯ ಮತ್ತು ಏಳು ಮಂದಿಗೆ ಪ್ರೋತ್ಸಾಹಕರ ನಗದು ಬಹುಮಾನ, ಫಲಕಗಳನ್ನು ನೀಡಲಾಯಿತು. ಸ್ಪರ್ಧೆಯಲ್ಲಿ ಅತುಲ್ ರೈ ಕೂಡ್ಲು(ಪ್ರಥಮ), ಗುರುರಾಜ ಮಕ್ಕಿತ್ತಾಯ ಉಡುಪಿ(ದ್ವಿತೀಯ), ಕು.ಪ್ರಜ್ಞಾ ಕೊಂಡೆವೂರು(ತೃತೀಯ) ಬಹುಮಾನ ಪಡೆದುಕೊಂಡರು. ದಿನಕರ ಹೊಸಂಗಡಿ ಸ್ವಾಗತಿಸಿ, ಪುರುಷೋತ್ತಮ ಭಂಡಾರಿ ಅಡ್ಯಾರು ವಂದಿಸಿದರು. ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

