HEALTH TIPS

ಸತ್ಕರ್ಮದ ಸದಾಚಾರದಿಂದ ಪ್ರೀತಿಸುವ ಹೃದಯ ಅರಳುತ್ತದೆ-ಕೊಂಡೆವೂರು ಶ್ರೀ

ಮಂಜೇಶ್ವರ: ದೇವಾಲಯಗಳು ಜಂಜಡದ ಬದುಕಿನಲ್ಲಿ ದಿಕ್ಕು ತೋರಿಸುವ ಬೆಳಕಿನ ಪುಂಜವಾಗಿ ಜೀವನವನ್ನು ಬೆಳಗಿಸುತ್ತದೆ. ಬದುಕಿನಲ್ಲಿ ನೆಮ್ಮದಿಗೆ, ನಾಶ ರಹಿತವಾದ ಆತ್ಮನ ಸಂಪ್ರೀತಿಗೆ ಶಾಂತಿ ಬೇಕು. ಅಂತಹ ಶಾಂತಿ ಹಾಗೂ ನೆಮ್ಮದಿ ದೇವಾಲಯಗಳಿಂದ ಸಾಕ್ಷಾತ್ಕಾರಗೊಳ್ಳುತ್ತದೆ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ತಿಳಿಸಿದರು. ಮಂಜೇಶ್ವರ ಹೊಸಬೆಟಿನ ಜಮ್ಮದ ಮನೆ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಬಿಂಬ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನಗೈದು ಮಾತನಾಡಿದರು. ಬಹಿರ್ಮುಖದ ಪ್ರಪಂಚವನ್ನು ವೀಕ್ಷಿಸುವ ಚಕ್ಷುಗಳನ್ನು ಮುಚ್ಚಿದಾಗ ಅಂತರಂಗದೊಳಗಿನ ಭಗವಂತನನ್ನು ಕಾಣಲು ಸಾಧ್ಯವಾಗುತ್ತದೆ. ನೂರಾರು ವಿಚಾರಗಳ ಸಮುಚ್ಚಯವಾದ ಮನಸ್ಸನ್ನು ಭಗವಂತನ ಸಾಕ್ಷಾತ್ಕಾರಕ್ಕೆ ತೊಡಗಿಸಿಕೊಂಡಾಗ ಸದ್ವಿಚಾರಗಳು ಮೂಡಿಬಂದು ಜಗತ್ತು ಸುಂದರವಾಗಿ ಕಾಣಿಸುತ್ತದೆ ಎಂದು ತಿಳಿಸಿದ ಶ್ರೀಗಳು ಸತ್ಕರ್ಮದ ಸದಾಚಾರಗಳಿಂದ ಪ್ರೀತಿಸುವ ಹೃದಯ ಅರಳುತ್ತದೆ ಎಂದು ತಿಳಿಸಿದರು. ದೇವಾಲಯಗಳ ಧನಾತ್ಮಕ ಶಕ್ತಿ ಪ್ರತಿಯೊಬ್ಬನಲ್ಲೂ ಆಂತರಂಗಿಕ ಸುಭಿಕ್ಷೆಗೆ ಕಾರಣವಾಗಿ ಋಣಾತ್ಮಕತೆಯನ್ನು ಮೆಟ್ಟಿನಿಂತು ಗೆಲುವಿಗೆ ಕಾರಣವಾಗುವ ಶಕ್ತಿಯನ್ನು ತುಂಬುತ್ತದೆ. ಭಗವಂತ ಒಳಿತನ್ನಷ್ಟೇ ನೀಡಬಲ್ಲ ಮಾತೃ ಹೃದಯದವನಾಗಿರುವುದರಿಂದ ದೇವಾಲಯಗಳಲ್ಲಿ ನಾವು ನಿರ್ವಹಿಸುವ ಬ್ರಹ್ಮಕಲಶೋತ್ಸವ ಸಮಾರಂಭಗಳು ನಮ್ಮನ್ನೂ ಬದಲಾಯಿಸುವಲ್ಲಿ ಸಹಕಾರಿಯಾಗಿದೆ ಎಂದು ಕೊಂಡೆವೂರು ಶ್ರೀಗಳು ಈ ಸಂದರ್ಭ ತಿಳಿಸಿದರು. ವರ್ಕಾಡಿ ಬಂಟರ ಸಂಘದ ಅಧ್ಯಕ್ಷ ದೇವಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ನ್ಯಾಯವಾದಿ ಸುಬ್ಬಯ್ಯ ರೈ ಇಚ್ಲಂಪಾಡಿ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಧಾರ್ಮಿಕ ಚೌಕಟ್ಟಿನ ಮೂಲಕ ಸುಖ ಸೌಖ್ಯದಿಂದ ಬೆಳೆದು ಬಂದ ಭಾರತೀಯ ಉದಾತ್ತ ಕಲ್ಪನೆಗಳು ಆಧುನಿಕತೆಯ ಸೋಗಿನಲ್ಲಿ ಮರೆಯಾಗದಿರಲಿ ಎಂದು ತಿಳಿಸಿದರು. ಹೊಸ ಪೀಳಿಗೆಗೆ ದೇವಾಲಯ, ಆಚಾರ-ವಿಚಾರಗಳನ್ನು ಬೋಧಿಸುವ ಕಾರ್ಯಚಟುವಟಿಕೆಗಳತ್ತ ಸಮಾಜದ ಹಿರಿಯರು ಪ್ರಯತ್ನಿಸಬೇಕು. ಒಗ್ಗಟ್ಟಿನ ಮೂಲಕ ಆರಾಧನೆ, ಆಚಾರಗಳಿಗೆ ಬೆಂಬಲ ನೀಡಬೇಕು ಎಂದು ಕರೆನೀಡಿದರು. ಮಂಗಲ್ಪಾಡಿ ಬಂಟರ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಮುಟ್ಟ, ಬಂಟರ ಸಂಘ ಕುಂಬಳೆ ಘಟಕದ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಕುಂಜತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಬಂಗ್ರಮಂಜೇಶ್ವರಿ ಶ್ರೀಕಾಳಿಕಾಪರಮೇಶ್ವರಿ ದೇವಾಲಯದ ಅಧ್ಯಕ್ಷ ಉಮೇಶ ಆಚಾರ್ಯ ಪೋಳ್ಯ, ಬಂಗ್ರಮಂಜೇಶ್ವರ ವೀರಭದ್ರ ಮಹಮ್ಮಾಯಿ ದೇವಾಲಯದ ಅಧ್ಯಕ್ಷ ಲಕ್ಷ್ಮಣ ಶೆಟ್ಟಿಗಾರ್, ಕಡಂಬಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್.ಎನ್.ಕಡಂಬಾರ್, ಉದ್ಯಾವರ ಶ್ರೀದೈವಗಳ ಟ್ರಸ್ಟ್ ಬೋರ್ಡ್ ಅಧ್ಯಕ್ಷ ದಯಾಕರ ಮಾಡ ಉಪಸ್ಥಿತರಿದ್ದು ಶುಭಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಮಾಡ ಸ್ವಾಗತಿಸಿ, ವಂದಿಸಿದರು. ದಿನಕರ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು. ಗುರುವಾರ ಬೆಳಿಗ್ಗೆ 8ಕ್ಕೆ ಗಣಪತಿಹೋಮ ಗೃಹಶಾಂತಿ, ದುರ್ಗಾಹೋಮ, 9.16ರ ಶುಭಮುಹೂರ್ತದಲ್ಲಿ ಮಹಾಗಣಪತಿ ದೇವರ ಪ್ರತಿಷ್ಠೆ, 11.7 ರಿಂದ ಶ್ರೀದುರ್ಗಾಪರಮೇಶ್ವರಿ ದೇವರ ಬಿಂಬ ಪ್ರತಿಷ್ಠೆ, ಜೀವ ಕಲಶಾಭಿಷೇಕ ಕಾರ್ಯಕ್ರಮಗಳು ತಂತ್ರಿವರ್ಯ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಅಪರಾಹ್ನ 1.30 ರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಆಶ್ಲೇಷಾ ಬಲಿ, ಕಲಶಾಧಿವಾಸ, ಅಧಿವಾಸ ಹೋಮ, ದುರ್ಗಾಪೂಜೆ, ಶ್ರೀರಕ್ತೇಶ್ವರಿ ದೈವಗಳ ಶಿಲಾಪೀಠದ ಅಧಿವಾಸಗಳು ನಡೆಯಿತು. ಅಪರಾಹ್ನ 3 ರಿಂದ ಮಾತೃಸಂಗಮ ಸಭೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಸಂಜೆ 4.30 ರಿಂದ ಯಕ್ಷದ್ರುವ ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ ಯಕ್ಷ ನಾಟ್ಯ ಗಾನ ವೈಭವ ಪ್ರದರ್ಶನಗೊಂಡಿತು. ಇಂದಿನ ಕಾರ್ಯಕ್ರಮ: ಬೆಳಿಗ್ಗೆ 6ಕ್ಕೆ ಗಣಪತಿಹೋಮ, 6.45 ರಿಂದ 7.10ರ ಶುಭಮುಹೂರ್ತದಲ್ಲಿ ಶ್ರೀದುರ್ಗಾಪರಮೇಶ್ವರಿ ಮಾತೆಗೆ ಬ್ರಹ್ಮಕಲಶಾಭಿಷೇಕ, ಮಹಾಗಣಪತಿ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಬಳಿಕ 8 ರಿಂದ ಚಂಡಿಕಾ ಯಾಗಾರಂಭ, 10.30ಕ್ಕೆ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಅಪರಾಹ್ನ 1.30 ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಒಡಿಯೂರು ಶ್ರೀಗುರುದೇವಾನಂದ ಶ್ರೀಗಳು ಆಶೀರ್ವಚನ ನೀಡುವರು. ಗಣ್ಯರು ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8ರಿಂದ ಕಟೀಲು ಮೇಳದವರಿಂದ ಶ್ರೀದೇವೀ ಮಹಾತ್ಮ್ಯೆ ಯಕ್ಷಗಾನ ಬಯಲಾಟ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries